ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಜನ, ಕಾರ್ಯಕರ್ತರು, ಅಭಿಮಾನಿಗಳು ನನ್ನ ಕೈಹಿಡಿದು ಗೆಲ್ಲಿಸುತ್ತಾರೆ. ದಾವಣಗೆರೆಯಿಂದ ಕಮಲ ತೆಗೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ದಾವಣಗೆರೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಶೇ. 33 ಮೀಸಲಾತಿಯಂತೆ ಟಿಕೆಟ್ ಸಿಕ್ಕಿರುವುದು ಸಂತೋಷ ಎಂದರು.
ನನಗೆ ವಿಶ್ವನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿಯವವರ ಆಶೀರ್ವಾದ ದೊರೆತಿದೆ. ಕೇಂದ್ರದ, ರಾಜ್ಯದ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತೇನೆ. ಕ್ಷೇತ್ರದ ಎಲ್ಲರಿಗೂ ನ್ಯಾಯಯುತವಾಗಿ ಸೇವೆ ಸಲ್ಲಿಸುತ್ತೇನೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸೂಕ್ತ ರೀತಿ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಎಲ್ಲಿಯೂ ವಿರೋಧ ಇಲ್ಲ. ಅವರು ಸಹ ಟಿಕೆಟ್ ಕೇಳಿದ್ದರು. ಸಿಕ್ಕಿಲ್ಲ ಎಂಬ ಕಾರಣಕ್ಕೆ ಸಹಜವಾಗಿಯೇ ಅವರಿಗೆ ಬೇಸರ ಆಗಿದೆ. ಅವರೆಲ್ಲರನ್ನೂ ಅಣ್ಣ ಎಂದೇ ಮಾತಾಡಿಸುತ್ತಿದ್ದೆ. ಎಲ್ಲರನ್ನೂ ಭೇಟಿಯಾಗಿ ಮಾತಾಡಿದ್ದೇನೆ. ಎಲ್ಲರೂ ಖುಷಿಯಾಗಿಯೇ ಇದ್ದಾರೆ. ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಎಲ್ಲವೂ ಸರಿ ಆಗುತ್ತದೆ ಎಂದು ತಿಳಿಸಿದರು.
ಮೋದಿಯವರು ವಿಶ್ವನಾಯಕರು. ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂಬುದು ಕಾರ್ಯಕರ್ತರ, ಮತದಾರರ ಆಶಯ. ಅದರಂತೆ ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರು 20 ವರ್ಷ ಸಂಸದರಾಗಿ ಮಾಡಿರುವ ಹಲವಾರು ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ. ನಮ್ಮ ಮಾವ ಮಲ್ಲಿಕಾರ್ಜುನಪ್ಪ ಅವರು ಒಬ್ಬ ಸಂಸದರು ಹೇಗೆ ಜನರಿಗೆ ಸಿಗುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ನಾನೂ ಕಾರ್ಯಕರ್ತರಿಗೆ ಸ್ಪಂದಿಸಿದ್ದೇನೆ, ಹೋದ ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ, ಸ್ಪಂದನೆ ಇದೆ. ಎಲ್ಲರೂ ಖುಷಿಯಿಂದ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಹೌದು ನಾವು ಬೀಗರಾಗುತ್ತೇವೆ. ನಾನು ತಾಯಿ ಸ್ಥಾನದಲ್ಲಿದ್ದೇನೆ. ಅವರು (ಡಾ| ಪ್ರಭಾ ಮಲ್ಲಿಕಾರ್ಜುನ್) ಮಗಳು ಎಂದರು.
ಶ್ರೀ ದುರ್ಗಾಂಬಿಕಾ ದೇಗುಲಕ್ಕೆ ಗಾಯತ್ರಿ ಸಿದ್ದೇಶ್ವರ ಭೇಟಿ -ವಿಶೇಷ ಪೂಜೆ
ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರು ಶುಕ್ರವಾರ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಜಗಳೂರು ತಾಲೂಕಿನ ಮಡ್ರಳ್ಳಿ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವ ಹಾಗೂ ನರಸೀಪುರ ಗ್ರಾಮದ ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಭೇಟಿ ನೀಡಿದರು.
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಂಸದ ಡಾ| ಜಿ.ಎಂ. ಸಿದ್ದೇಶರ, ದೂಡಾ ಮಾಜಿ ಅಧ್ಯಕ್ಷ ಯಶವಂತ್‌ರಾವ್ ಜಾಧವ್, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್, ಶಿವಣ್ಣ, ಮಂಜಣ್ಣ, ಶಿವನಗೌಡ ಟಿ. ಪಾಟೀಲ್ ಇತರರು ಇದ್ದರು. ದುರ್ಗಾಂಬಿಕಾ ದೇವಿ ದರ್ಶನದ ಬಳಿಕ ಬಿಜೆಪಿ ಮುಖಂಡ ಗೋಪಾಲಗೌಡ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಜಗಳೂರು ತಾಲೂಕಿನ ಮಡ್ರಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಪೂಜೆ ಸಲ್ಲಿಸಿದರು. ಮಾಜಿ ಶಾಸಕರಾದ ಎಸ್ .ವಿ.ರಾಮಚಂದ್ರಪ್ಪ, ಎಚ್.ಪಿ.ರಾಜೇಶ್, ಗ್ಯಾರೆಹಳ್ಳಿ ಶಿವಕುಮಾರ್ ಇದ್ದರು.
ರಾಣೆಬೆನ್ನೂರಿನ ನರಸೀಪುರದ ಅಂಬಿಗರ ಚೌಡಯ್ಯ ಗುರು ಪೀಠಕ್ಕೆ ಭೇಟಿ ನೀಡಿ ಶಾಂತಮುನಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಶ್ರೀ ಅವರಿಗೆ ಗೌರವ ಸಲ್ಲಿಸಿದರು. ಬಿ.ಪಿ.ಹರೀಶ್, ಶಿವಣ್ಣ, ಜಯಮ್ಮ, ಕೆಂಚನಹಳ್ಳಿ ಮಹಾಂತೇಶಪ್ಪ ಇದ್ದರು.