ದಾವಣಗೆರೆ: ಪರಿಶಿಷ್ಟ ಪಂಗಡದವರಿಗೆ ಶೇ. 7.5ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ಜೂ.9ರಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪಾದಯಾತ್ರೆ ಮುಂದೂಡಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ಈ ಪಾದಯಾತ್ರೆ ಕೈ ಬಿಡುವುದಿಲ್ಲ ಎಂದರು.
ಪಾದಯಾತ್ರೆ ಸಂಬಂಧ ಸಮಾಜದ ಮುಖಂಡರೊಂದಿಗೆ ಕೆಲವೆಡೆ ಸಭೆ ನಡೆಸಿ, ಚರ್ಚಿಸಲಾಗಿದೆ. ಆ ವೇಳೆ ಹಲವರು ಪಾದಯಾತ್ರೆ ಮಳೆಗಾಲದಲ್ಲಿ ಕೈಗೊಳ್ಳುವುದರಿಂದ ಸಮಸ್ಯೆ ಆಗಲಿದೆ. ಸಮುದಾಯದ ರೈತರು, ಇತರರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಹೆಚ್ಚಿನ ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಮೇಲಾಗಿ ರಾಜ್ಯದಲ್ಲಿ ಈಗ ಅಸ್ಥಿರ ಸರ್ಕಾರ ಇದೆ. ಮುಂದೆ ಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದಾಗ ಪಾದಯಾತ್ರೆ ಕೈಗೊಳ್ಳುವುದು ಸೂಕ್ತ. ಆದ್ದರಿಂದ ಪಾದಯಾತ್ರೆ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹಾಗಾಗಿ ಸಮಾಜದವರಲ್ಲಿ ಗೊಂದಲ ಉಂಟಾಗಿದೆ. ಆದರೆ, ತಾವು ಪಾದಯಾತ್ರೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜೂನ್ 6ರಂದು ರಾಜ್ಯದ ಎಲ್ಲಾ ಜಿಲ್ಲಾ , ತಾಲೂಕು ಕೇಂದ್ರದಲ್ಲಿ ವಾಲ್ಮೀಕಿ ಸಮುದಾಯದವರು ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಪ್ರತಿಭಟಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಶೇ. 7.5 ಮೀಸಲಾತಿ ಕಲ್ಪಿಸಿದೆ. ಅದೇ ಮಾದರಿಯಲ್ಲೇ ರಾಜ್ಯದಲ್ಲೂ ನಮ್ಮ ಸಮುದಾಯದವರಿಗೆ ಮೀಸಲಾತಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವು ಯಾವುದೇ ಜಾತಿ ವಿರುದ್ಧ ಹೋರಾಟಕ್ಕೆ ಮುಂದಾಗಿಲ್ಲ. ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ರಾಜನಹಳ್ಳಿಯಲ್ಲಿ ಜೂ.9ರಂದು ಬೆಳಿಗ್ಗೆ 10-30ಕ್ಕೆ ಪೀಠದ ಗುರುಗಳಾದ ಶ್ರೀಪುಣ್ಯಾನಂದಪುರಿ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ಪಾದಯಾತ್ರೆ ಆರಂಭಿಸಲಾಗುವುದು. ಅಂದು ಸಂಜೆ 4-30ಕ್ಕೆ ದಾವಣಗೆರೆ ತಲುಪಿ, ವಾಸ್ತವ್ಯ ಹೂಡಲಾಗುವುದು. ಮರುದಿನ ಬೆಳಿಗ್ಗೆ 10 ಗಂಟೆಗೆ ಪಾದಯಾತ್ರೆ ಮುಂದುವರಿಯಲಿದೆ. ಆನಗೋಡು, ಭರಮಸಾಗರ, ಚಿತ್ರದುರ್ಗ, ಐಮಂಗಲ, ಹಿರಿಯೂರು, ಶಿರಾ ಮಾರ್ಗವಾಗಿ ಯಾತ್ರೆ ಸಾಗಲಿದ್ದು, ಜೂ. 24ರಂದು ಬೆಂಗಳೂರು ತಲುಪಲಿದೆ. 25ರಂದು ಬೆಳಿಗ್ಗೆ 10 ಗಂಟೆಗೆ ವಿಧಾನ ಸೌಧದ ಆವರಣದಲ್ಲಿರುವ ವಾಲ್ಮೀಕಿ ಮಹರ್ಷಿಗಳ ಪ್ರತಿಮೆಗೆ ಪೂಜೆ ಸಲ್ಲಿಸಿ, ನಂತರ ಪ್ರೀಡಂ ಪಾರ್ಕಲ್ಲಿ ಧರಣಿ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಶೇ. 7.5 ಮೀಸಲಾತಿ ಪ್ರಮಾಣ ಹೆಚ್ಚಳ, ಎಸ್ಟಿ ನಕಲಿ ಪ್ರಮಾಣ ಪತ್ರ ಪಡೆಯುವವರು ಹಾಗೂ ಅದನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಬಿ.ವೀರಣ್ಣ, ಕೆ.ಎಚ್. ಓಬಳಪ್ಪ, ಎಂ.ಬಿ. ವೀರಣ್ಣ, ಗುಮ್ಮನೂರು ಮಲ್ಲಿಕಾರ್ಜುನ್, ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿದೇವಿ ವೀರಣ್ಣ, ವಿನಾಯಕ ಪೈಲ್ವಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.