Advertisement

ವಾಲ್ಮೀಕಿ ಸರ್ವ ಸಮಾಜದ ಮಹಾ ಋಷಿ

11:17 AM Oct 14, 2019 | Naveen |

ದಾವಣಗೆರೆ: ಶ್ರೀ ಮಹರ್ಷಿ ವಾಲ್ಮೀಕಿಯವರು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತರಲ್ಲ. ಸರ್ವ ಸಮಾಜದ ಮಹಾ ಋಷಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪರಿಶಿಷ್ಟ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮಹಾಕಾವ್ಯ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳನ್ನು ಸ್ಮರಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಶ್ರೇಷ್ಠವ್ಯಕ್ತಿಯ ಜಯಂತಿ ಆಚರಿಸಬೇಕು ಎಂದು ನಿರ್ಧರಿಸಿ, ಆಚರಣೆಗೆ ತಂದರು ಎಂದು ಸ್ಮರಿಸಿದರು.

Advertisement

ವಾಲ್ಮೀಕಿಯವರ ಅನುಯಾಯಿಗಳು ಎಲ್ಲಾ ಭಾಷೆಗಳಲ್ಲಿ ರಾಮಾಯಣ ರಚಿಸಿದ್ದಾರೆ. ಅವರ ಅನುಯಾಯಿಗಳಾದ ನಾವು, ನೀವು ಕೂಡ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ದೇಶ ಸೇವೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಏಳಿಗೆಗೆ ತಂದಿರುವ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅತಿವೃಷ್ಟಿಯಿಂದಾಗಿ ಇಂದು ಜಯಂತಿ ಸರಳಾಚರಣೆಯಲ್ಲಿದೆ. ನೆರೆ ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆದ ಜನರೆಲ್ಲರಿಗೂ ನಮನ ತಿಳಿಸಿದರು.

ಮಹರ್ಷಿ ವಾಲ್ಮೀಕಿಯವರು ಪರಿಸರ ಪ್ರಿಯರಾಗಿದ್ದು, ಗಿಡ-ಮರ, ಬಳಿಗಳ ಕುರಿತು ತಮ್ಮ ಗ್ರಂಥದಲ್ಲಿ ಪ್ರಾಣಿ ಪಕ್ಷಿಗಳ ಒಡನಾಟವನ್ನು ಅತ್ಯಂತ ಅರ್ಥಗರ್ಭಿತವಾಗಿ ಬಿಂಬಿಸಿದ್ದಾರೆ. ನಾವು ನಮ್ಮ ಮಕ್ಕಳಿಗೆ ಪರಿಸರ ಕಾಳಜಿ ಪಾಠ ಹೇಳಿಕೊಡುವ ಮೂಲಕ ನೈಜ ಪರಿಸರದೆಡೆಗೆ ಅವರನ್ನು ಕೊಂಡೊಯ್ಯಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ವಾಲ್ಮೀಕಿಯವರ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತೇತ್ರಾಯುಗ, ದ್ವಾಪರಯುಗ ಮತ್ತು ಕಲಿಯುಗದಲ್ಲಿಯೂ ವಾಲ್ಮೀಕಿ ಸಮಾಜದ
ಕೊಡುಗೆ ಅಪಾರವಾಗಿದೆ. ಪ್ರತಿನಿತ್ಯದ ಜೀವನದಲ್ಲಿ ನಮ್ಮ ಅರಿವಿಗೆ ಬಾರದಂತೆ ಒಂದಲ್ಲ ಒಂದು ಸಂದರ್ಭದಲ್ಲಿ ರಾಮಾಯಣವನ್ನು ನೆನಪಿಸಿಕೊಳ್ಳುತ್ತೇವೆ. ಜೀವನದ ಹಲವಾರು ಸಂಕಷ್ಟ ಪರಿಸ್ಥಿತಿಗಳನ್ನು ಎದುರಿಸುವುದು ಹೇಗೆ ಮತ್ತು ನಿವಾರಿಸಿಕೊಳ್ಳುವುದು ಹೇಗೆ ಎಂಬ ಮಾರ್ಗಗಳು ವಾಲ್ಮೀಕಿ ರಚಿತ ರಾಮಾಯಣದಲ್ಲಿ ಅಡಗಿವೆ.

Advertisement

ಇಂತಹ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹಾ ಋಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿಸಬೇಕು ಎಂದು ತಿಳಿಸಿದರು.

ಆನಗೋಡು ಕ್ಷೇತ್ರದ ಜಿಪಂ ಸದಸ್ಯ ಕೆ.ಎಸ್‌. ಬಸವಂತಪ್ಪ ಮಾತನಾಡಿ, ಊರನ್ನು ಸ್ವತ್ಛಗೊಳಿಸಿ, ಸುಂದರಗೊಳಿಸುವಲ್ಲಿ ಮಾದಿಗ ಸಮಾಜ ಮತ್ತು ಊರಿನ ರಕ್ಷಣೆ ಮಾಡುವಲ್ಲಿ ವಾಲ್ಮೀಕಿ ಸಮಾಜದ ಪಾತ್ರ ಮಹತ್ವದ್ದಾಗಿದೆ. ಸರ್ಕಾರ ಅಂತಹ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಮಂಡಿಪೇಟೆಯಲ್ಲಿನ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಚುರುಕುಗೊಳಿಸಬೇಕು.

ಮುಂದಿನ ವರ್ಷ‌ ವಾಲ್ಮೀಕಿ ಜಯಂತಿಯನ್ನು ನೂತನ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಮಾತನಾಡಿ, ಯಾವ ಸಾಹಿತ್ಯ ಮತ್ತು ಕೃತಿ ಸಾರ್ವತ್ರಿಕವಾಗಿರುತ್ತದೆಯೋ ಅಂತಹ ಸಾಹಿತ್ಯವನ್ನು ರಚಿಸಿದ ಸಾಹಿತಿಯು ಸಾರ್ವತ್ರಿಕರಾಗುತ್ತಾರೆ ಎನ್ನುವಂತೆ ವಾಲ್ಮೀಕಿಯವರು ಸಹ ರಾಮಾಯಣ ಮಹಾಕಾವ್ಯ ರಚಿಸಿ ಸಾರ್ವತ್ರಿಕರಾಗಿದ್ದಾರೆ. ಅವರ ಜೀವನ ಮೌಲ್ಯಗಳು ಅಂದು, ಇಂದು ಮತ್ತು ಮುಂದೆಯೂ ಪ್ರಸ್ತುತದಲ್ಲಿರುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌.ಎ.ರವೀಂದ್ರನಾಥ್‌ ಮಾತನಾಡಿ, ನಾಯಕ ಜನಾಂಗದ ಮಹರ್ಷಿ ವಾಲ್ಮೀಕಿಯವರು ಅಂದಿನ ಕಾಲದಲ್ಲಿಯೇ ರಾಮಾಯಣ ಬರೆದು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರೆ ಆಶ್ಚರ್ಯಕರ. ಇಂದಿನ ಸಮಾಜದವರು ಸಹ ಯಾಕೆ ಪ್ರಯತ್ನಿಸಬಾರದು ಎಂದರು. ಇಂದಿನ ಪರಿಶಿಷ್ಟ ಪಂಗಡದ ಜನಾಂಗದವರೆಲ್ಲಾ ಸಂಘಟಿತರಾಗುವ ಮೂಲಕ ಅಧಿಕಾರಕ್ಕೆರುವ ಪ್ರಯತ್ನ ಮಾಡಬೇಕು. ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲಾಗುವುದು. ನಾಯಕ ಸಮಾಜದ ವಿದ್ಯಾವಂತರು ತಮ್ಮ ಸಮಾಜದ ಕಡು ಬಡವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ನಾಯಕ ಸಮಾಜದ ಮುಖಂಡ ಅಣಜಿ ಅಂಜಿನಪ್ಪ, ಸಮಾಜದ ಅಭಿವೃದ್ಧಿಗೆ ಅವಶ್ಯವಿರುವ ಹತ್ತು ವಿವಿಧ ಬೇಡಿಕೆಗಳುಳ್ಳ ಭಿನ್ನವತ್ತಳೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ತಾಲೂಕು ಪಂಚಾಯತ್‌ ಅಧ್ಯಕ್ಷ ಮಮತಾ ಮಲ್ಲೇಶಪ್ಪ, ದೂಡಾ ಮಾಜಿ ಅಧ್ಯಕ್ಷ ಟಿ.ದಾಸಕರಿಯಪ್ಪ, ನಾಯಕರ ವಸತಿನಿಲಯ ಅಧ್ಯಕ್ಷ ಬಿ.ವೀರಣ್ಣ, ಎಂ.ಬಿ. ಹಾಲಪ್ಪ, ವಿಜಯಶ್ರೀ, ಗುಮ್ಮನೂರು ಮಲ್ಲಿಕಾರ್ಜುನ, ಮುರುಗೇಂದ್ರಪ್ಪ, ಗೌರಮ್ಮ, ಶಾರದಮ್ಮ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next