ದಾವಣಗೆರೆ: ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿರುವ ಕೇಂದ್ರದ ನೂತನ ಸಚಿವರಾದ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ ಹಾಗೂ ಎ. ನಾರಾಯಣಸ್ವಾಮಿ ವಿರುದ್ಧ ಪೊಲೀಸ್ ಇಲಾಖೆ ಸ್ವಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಮ ಉಲ್ಲಂಘನೆಗಾಗಿ ರಾಜ್ಯ ಉತ್ಛ ನ್ಯಾಯಾಲಯ ಕೇಂದ್ರ ಸಚಿವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ನೂತನ ನಾಲ್ವರು ಸಚಿವರು ಜನಾಶೀರ್ವಾದ ಹೆಸರಿನಲ್ಲಿ ಕೋವಿಡ್ ನಿಯಮಗಳನ್ನು ಅತ್ಯಂತ ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.
ದಾವಣಗೆರೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಲಿಲ್ಲ. ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರಲು ಅನುಮತಿ ನೀಡಿದೆ. ಇಲಾಖೆ ಇಬ್ಬಗೆ ನೀತಿ ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ದೂರಿದರು.
ಯಾದಗಿರಿಯಲ್ಲಿ ಭಗವಂತ್ ಖೂಬಾರವರ ಜನಾಶೀರ್ವಾದ ಯಾತ್ರೆ ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಗೃಹ ಸಚಿವ ಅರಗ ಜ್ಞಾನೇಂದ್ರ ಸಮರ್ಥಿಸಿಕೊಂಡಿದ್ದಾರೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಬಂದೂಕು ಹಿಡಿದು ರ್ಯಾಲಿ ಸಂಘಟಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಪ್ರಕರಣ ದಾಖಲಿಸಿಲ್ಲ. ಗೃಹ ಸಚಿವರು ಗಾಳಿಯಲ್ಲಿ ಗುಂಡು ಹಾರಿಸಿರುವುದು ನಮ್ಮ ಸಂಸ್ಕೃತಿ ಎಂದು ಹೇಳಿಕೆ ನೀಡಿರುವುದು ವಿಪರ್ಯಾಸ ಎಂದು ದೂರಿದರು.
ರಾಜ್ಯದ ಬಿಜೆಪಿ ಸಂಸದರು ಕುಡಿಯುವ ನೀರಿನ ಮೇಕೆದಾಟು ಯೋಜನೆ ಜಾರಿ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಜನಾಶೀರ್ವಾದ ಯಾತ್ರೆಯಲ್ಲಿ ಮುಳುಗಿ ಹೋಗಿದ್ದಾರೆ. ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯ ವೇಳೆ ಕೋವಿಡ್ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೇ ಹೋದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಸಿದರು.
ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಅಪಘಾನಿಸ್ತಾನದ ಬಿಕ್ಕಟ್ಟು, ತಾಲಿಬಾನ್ ಕುರಿತಂತೆ ವಿದೇಶಾಂಗ ನೀತಿಯ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಇಂಟೆಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಎಂ.ಕೆ. ಲಿಯಾಖತ್ ಅಲಿ, ಮಹಮ್ಮದ್ ಜಕ್ರಿಯಾ, ಆರ್.ಬಿ. ಝಡ್ ಬಾಷಾ, ಸುರೇಶ್ ಜಾಧವ್, ಡಿ. ಶಿವಕುಮಾರ್, ಫಾರುಕ್, ಬುಡೇನ್‌ಸಾಬ್ ಸುದ್ದಿಗೋಷ್ಠಿಯಲ್ಲಿದ್ದರು.