ದಾವಣಗೆರೆ: ಮಹಾನಗರ ಪಾಲಿಕೆಯ ಯುಜಿಡಿ ಇಂಜಿನಿಯರ್ ಸೋಗಿನಲ್ಲಿ ಮನೆ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದ ಮೂವರಲ್ಲಿ ಓರ್ವನನ್ನು ಕೆಟಿಜೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಜನ್ನಾಪುರದ ಎಚ್. ವೇಣುಗೋಪಾಲ(28) ಬಂಧಿತ ಆರೋಪಿ. ಇನ್ನಿಬ್ಬರ ಆರೋಪಿಗಳ ಬಗ್ಗೆ ಸುಳಿವು ದೊರೆತಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಆ.16 ರಂದು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತ, 2ನೇ ಮೇನ್ ದುರ್ಗಾಂಬಿಕ ಸ್ಕೂಲ್ ಹಿಂಭಾಗದ ಎಸ್.ಎಂ.ಸುಧಾ ಎಂಬುವರ ಮನೆಯಲ್ಲಿ ಮಹಾನಗರ ಪಾಲಿಕೆ ಯುಜಿಡಿ ಇಂಜಿನಿಯರ್ ಅಂತಾ ಪರಿಚಯ ಮಾಡಿಕೊಂಡು, ಡ್ರೈನೇಜ್ ರಿಪೇರಿ ಮಾಡಿ ಯುಜಿಡಿ ಪೈಪ್‌ಲೈನ್‌ಗೆ ಲಿಂಕ್ ಮಾಡಬೇಕಾಗಿರುತ್ತದೆ ಎಂದು ಹೇಳಿ ಮನೆಯವರ ಗಮನವನ್ನ ಬೇರೆಡೆ ಸೆಳೆದು ಬೀರುವಿನಲ್ಲಿದ್ದ 29 ಸಾವಿರ ರೂಪಾಯಿ ನಗದು, 430 ಗ್ರಾಂನ ಚಿನ್ನಾಭರಣ ಕದ್ದೊಯ್ಯಲಾಗಿತ್ತು. ವೇಣುಗೋಪಾಲನನ್ನು ಬಂಧಿಸಿ 6 ಲಕ್ಷ ಮೌಲ್ಯದ 175 ಗ್ರಾಂನ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮನೆಯಲ್ಲಿ ಮೂವರು ಇರುವುದನ್ನ ಗಮನಿಸಿದ್ದ ಮೂವರು ಆರೋಪಿಗಳಲ್ಲಿ ಇಬ್ಬರು ಯುಜಿಡಿ ಇಂಜಿನಿಯರ್ ಅಂತಾ ಪರಿಚಯ ಮಾಡಿಕೊಂಡು, ಮನೆಯಲ್ಲಿನ ಬಾತ್‌ರೂಮ್‌ಗಳನ್ನು ತೋರಿಸಿ ಎಂದು ಹೇಳಿ ಸುಧಾ ಮತ್ತು ಅವರ ಪತಿ ಸುರೇಶ್ ಅವರನ್ನ ಮನೆಯ ಮೊದಲ ಮಹಡಿಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆಯಲ್ಲಿ ಮತ್ತೂಬ್ಬ ಆರೋಪಿ ಮನೆಯೊಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ ಹಣ, ಚಿನ್ನಾಭರಣ ಕದ್ದೊಯ್ದಿದ್ದರು ಎಂದು ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡ ಕೆಟಿಜೆ ನಗರ ಪೊಲೀಸರು ಮೂವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಬಗ್ಗೆ ಸುಳಿವು ಇದೆ. ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚಿರುವ ದಾವಣಗೆರೆ ದಕ್ಷಿಣ ವೃತ್ತ ನಿರೀಕ್ಷಕ ಎನ್. ತಿಮ್ಮಣ್ಣ, ಪಿಎಸ್‌ಐಗಳಾದ ಎ.ಕೆ. ಚಂದ್ರಪ್ಪ, ನಾಗರಾಜ್, ಸಿಬ್ಬಂದಿ ಕೆ.ಎಲ್. ತಿಪ್ಪೇಸ್ವಾಮಿ, ಲೋಕ್ಯಾನಾಯ್ಕ, ಚಂದ್ರಪ್ಪ, ಯೋಗೀಶ್‌ನಾಯ್ಕ, ಶಂಕರ್ ಜಾಧವ್, ರಾಜು, ರಾಜಪ್ಪ, ತಿಮ್ಮಣ್ಣ, ದೇವೇಂದ್ರನಾಯ್ಕ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಈ ರೀತಿ ಗಮನ ಬೇರೆಡೆ ಸೆಳೆದು, ಕಳ್ಳತನ ನಡೆದಿರುವುದು ಮೊದಲ ಪ್ರಕರಣ. ಯಾರೆಯೇ ಆಪರಿಚಿತರು ಬಂದಾಗ ಯಾವುದೇ ಕಾರಣಕ್ಕೂ ಮನೆಯೊಳಗೆ ಬಿಟ್ಟುಕೊಳ್ಳಲೇಬಾರದು ಎಂದು ಮನವಿ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಇಬ್ಬರ ಬಂಧನದ ನಂತರ ಎಲ್ಲೆಲ್ಲಿ ಈ ರೀತಿಯಲ್ಲಿ ಕಳ್ಳತನ ಮಾಡಲಾಗಿದೆ ಎಂಬುದು ವಿಚಾರಣೆಯಿಂದ ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗ್ರಾಮಾಂತರ ಉಪಾಧೀಕ್ಷ ಎಂ.ಕೆ. ಗಂಗಲ್, ದಾವಣಗೆರೆ ದಕ್ಷಿಣ ವೃತ್ತ ನಿರೀಕ್ಷಕ ಎನ್. ತಿಮ್ಮಣ್ಣ, ಪಿಎಸ್‌ಐಗಳಾದ ಎ.ಕೆ. ಚಂದ್ರಪ್ಪ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.