Advertisement

Davanagere; ಕೊಲೆ ನಡೆದು ಆರು ಗಂಟೆಯೊಳಗೆ ಆರೋಪಿ ಬಂಧನ; ತಪ್ಪಿತು ಮತ್ತೊಂದು ಹತ್ಯೆ!

09:44 PM Jul 16, 2024 | Team Udayavani |

ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಕೊಲೆ ನಡೆದ ಆರು ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವ ಜೊತೆಗೆ ಇನ್ನೊಂದು ಕೊಲೆ ತಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಸಂತೇಬೆನ್ನೂರು ಗ್ರಾಮದ ಗಾರೆ ಕೆಲಸ ಮಾಡುತ್ತಿದ್ದ ಸಂತೋಷ್ (36) ಎಂಬಾತನನ್ನು ಸೋಮವಾರ ತಡರಾತ್ರಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸಂತೇಬೆನ್ನೂರು ಪೊಲೀಸರು ಆರು ಗಂಟೆಯಲ್ಲೇ ಚನ್ನಗಿರಿ ತಾಲೂಕಿನ ಚನ್ನಾಪುರ ಗ್ರಾಮದ ರಂಗಸ್ವಾಮಿ (32) ಎಂಬವನನ್ನು ಬಂಧಿಸಿದ್ದಾರೆ.

ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲೂ ಪೊಲೀಸ್ ಇಲಾಖೆಯ ಶ್ವಾನ ತುಂಗಾ-2 ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಆಗಿದ್ದೇನು?

ಸಂತೇಬೆನ್ನೂರು-ದಾವಣಗೆರೆ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಎದುರಿನ ರಸ್ತೆಯಲ್ಲಿ ಸಂತೋಷನನ್ನು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಕೊಲೆ ಪ್ರಕರಣ ಕೆಲವು ಗಂಟೆಗಳ ಕಾಲ ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು.

Advertisement

ಕೊಲೆ ಪ್ರಕರಣದ ಆರೋಪಿತರ ಪತ್ತೆಗಾಗಿ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ್ ಎಂ. ಸಂತೋಷ್,ಜಿ. ಮಂಜುನಾಥ್,ಚನ್ನಗಿರಿ ಉಪಾಧೀಕ್ಷಕ ರುದ್ರಪ್ಪ ಎಸ್. ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಅಪರಾಧ ಪತ್ತೆ ಶ್ವಾನ (ಕ್ರೈಂ ಡಾಗ್) ತುಂಗಾ-2 ದೊಂದಿಗೆ ಶ್ವಾನದಳ ಹಾಗೂ ಸುಕೋ ತಂಡದೊಂದಿಗೆ ಲಭ್ಯವಿರುವ ಸಾಕ್ಷಾಧಾರದಲ್ಲಿ ಕಾರ್ಯಪ್ರವೃತ್ತರಾಗಿ ಕೆಲವೇ ಗಂಟೆಯಲ್ಲಿಯೇ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿ ರಂಗಸ್ವಾಮಿಯನ್ನು ಬಂಧಿಸಿದ್ದಾರೆ.

ಕೊಲೆಗೀಡಾದ ಸಂತೋಷ್ ಆರೋಪಿತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಕೋಪಗೊಂಡು ಕೊಲೆ ಮಾಡಿದ್ದಾನೆ. ಸಂತೋಷನನ್ನು ಕೊಲೆ ಮಾಡಿದ ನಂತರ ಹೆಂಡತಿಯ ಕೊಲೆಗೂ ಸಂಚು ರೂಪಿಸಿದ್ದ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯು ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು ತುಂಗಾ ಶ್ವಾನ ದಳದ ಸಿಬ್ಬಂದಿಗಳಾಗಿರುವ ಶಫಿವುಲ್ಲಾ, ದರ್ಗಾನಾಯ್ಕ ರವರೊಂದಿಗೆ ಆರೋಪಿತನ ಚಲನವಲನ ಗುರುತಿಸುವಲ್ಲಿ ಮಾಡಿದ ಕಾರ್ಯಶ್ಲಾಘನೀಯವಾಗಿದೆ

ಕ್ಲಪ್ತ ಕಾಲದಲ್ಲಿ ಕೊಲೆ ಆರೋಪಿಯನ್ನು ಬಂಧಿಸಿ, ಸಂಭವಿಸಬಹುದಾಗಿದ್ದ ಇನ್ನೊಂದು ಕೊಲೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next