Advertisement

ಜೂ. 18ರಿಂದ ವೇದಾಗಮ ಸಂಸ್ಕೃತ ಪಾಠಶಾಲೆ ಪ್ರಾರಂಭ

03:28 PM May 03, 2019 | Naveen |

ದಾವಣಗೆರೆ: ದಾವಣಗೆರೆಯಲ್ಲಿ ಜೂ.18 ರಿಂದ ವಿಧ್ಯುಕ್ತವಾಗಿ ಶ್ರೀ ಜಗದ್ಗುರು ಪಂಡಿತಾರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆ ಪ್ರಾರಂಭವಾಗಲಿದೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Advertisement

ದಾವಣಗೆರೆ ಜಿಲ್ಲೆಯ ಸುತ್ತಮುತ್ತ ವೇದ ಪಾಠಶಾಲೆಗಳ ಕೊರತೆ ಇರುವುದನ್ನ ಮನಗಂಡು ಶ್ರೀಪೀಠ ವೇದಾಸಕ್ತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ವೇದಾಗಮ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಲಾಗುತ್ತಿದೆ. ಪ್ರಸ್ತುತ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ, ಊಟೋಪಚಾರ, ವೇದಾಧ್ಯಯನ ಅವಕಾಶ ಕಲಿಸಿಕೊಡಲಾಗುವುದು. ಮುಂದಿನ ವರ್ಷದಲ್ಲಿ 200 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತೀಯ ಸಂಸ್ಕೃತಿಯ ಮೂಲ ತಳಹದಿಯಾಗಿರುವ ವೇದ ಮತ್ತು ಆಗಮಗಳು ಭಾರತೀತ ಸನಾತನ ಜ್ಞಾನವು ಈಗಿನ ಆಧುನಿಕ ಸಮಾಜದಲ್ಲಿ ವಿದೇಶಿ ಸಂಸ್ಕೃತಿಯಿಂದ ಕುಂಠಿತವಾಗುತ್ತಿವೆ. ನಮ್ಮ ಸಂಸ್ಕೃತಿಯನ್ನ ಉಳಿಸಿಕೊಳ್ಳಬೇಕಾದಲ್ಲಿ ಅವಶ್ಯಕವಾಗಿ ವೇದಾಗಮಗಳ ಜ್ಞಾನವನ್ನ ತಿಳಿಯಬೇಕಾದ ಅನಿವಾರ್ಯತೆ ಇದೆ ಎಂಬುದನ್ನ ಮನಗಂಡು ದಾವಣಗೆರೆಯಲ್ಲಿ ಈ ಹಿಂದೆಯೇ ಪ್ರಾರಂಭಿಸಲಾಗಿದ್ದ ವೇದಾಗಮ ಸಂಸ್ಕೃತ ಪಾಠಶಾಲೆ ಕೆಲ ಕಾರಣದಿಂದ ಸ್ಥಗಿತಗೊಂಡಿತ್ತು. ಈಗ ಎಲ್ಲ ಸೌಲಭ್ಯಗಳೊಂದಿಗೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ವೇದ, ಆಗಮ, ಸಂಸ್ಕೃತ ಯಾವುದೇ ಜನಾಂಗದ ಸ್ವತ್ತು ಅಲ್ಲ. ಅವುಗಳು ಭಾರತೀಯ ರಾಷ್ಟ್ರೀಯ ಜ್ಞಾನ ಸಂಪತ್ತು. ಭಗವಂತನಿಂದಲೇ ಬಂದಿರುವ ಜ್ಞಾನ ಸಂಪತ್ತು ಜನ್ಮ ತಾಳಿದ ಪ್ರತಿಯೊಬ್ಬರು ಕಲಿಯಬಹುದು. ಆದರೆ, ಅದಕ್ಕೆ ಬೇಕಾದಂತಹ ಆಚಾರ, ವಿಚಾರ ಸಂಪಾದಿಸಿಕೊಳ್ಳಬೇಕು. ಎಲ್ಲಾ ಜಾತಿಯವರಿಗೆ ದಾವಣಗೆರೆಯ ಪಾಠಶಾಲೆಯಲ್ಲಿ ಪ್ರವೇಶ ಅವಕಾಶ ಇದೆ. ಪ್ರವೇಶ ಪಡೆಯುವಂತಹವರು ಲಿಂಗಧಾರಿಗಳಾಗಬೇಕು. ಲಿಂಗಧಾರಿ ಆಗಬೇಕು ಎಂಬುದು ಜಾತಿ ಅಲ್ಲ, ಸಂಸ್ಕಾರದ ಕುರುಹು ಎಂದು ತಿಳಿಸಿದರು.

ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ಆಧುನಿಕವಾಗಿರುವ ವೇದಾಗಮ ಪಾಠಶಾಲೆ ಪ್ರಾರಂಭಿಸಲಾಗಿದೆ. ಕರ್ನಾಟಕದ ಶ್ರೀಶೈಲ… ಎಂದೇ ಪ್ರಸಿದ್ಧಿಯಾಗಿರುವ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ವೇದಾಗಮ ಪಾಠಶಾಲೆ ಪ್ರಾರಂಭಿಸುವುದರಿಂದ ವೇದಾಗಮ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗುತ್ತದೆ ಎಂಬುದನ್ನ ಮನಗಂಡು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ದಾವಣಗೆರೆಯ ವೇದಾಗಮ ಪಾಠಶಾಲೆಯಲ್ಲಿ 7ನೇ ತರಗತಿಯಿಂದ ಪ್ರವೇಶ ಪಡೆಯಲು ಅವಕಾಶ ಇದೆ. 10ನೇ ತರಗತಿಯವರೆಗೆ ಓದಬೇಕು. ಆಸಕ್ತರು ಜೂ.15ರ ಒಳಗೆ ಶ್ರೀಶೈಲ ಮಠದಲ್ಲಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 99869-22077, 95917-97204ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಮಹಿಳೆಯರಿಗೆ ವೇದಾಗಮ ಶಾಲೆ
ಕೂಡಲ ಸಂಗಮದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ವೇದಾಗಮ ಸಂಸ್ಕೃತ ಪಾಠಶಾಲೆಯನ್ನ ಮುಂದಿನ ವರ್ಷ ಪ್ರಾರಂಭಿಸಲಾಗುವುದು. ಬಸವಣ್ಣನವರು ಮಹಿಳೆಯರಿಗೂ ಧಾರ್ಮಿಕ ಸಮಾನತೆ, ಸ್ವಾತಂತ್ರ್ಯ ಕೊಡಿಸಬೇಕು ಎಂಬ ಕಾರಣಕ್ಕಾಗಿಯೇ ಬಸವನ ಬಾಗೇವಾಡಿ ತ್ಯಜಿಸಿ ಕೂಡಲ ಸಂಗಮಕ್ಕೆ ಬಂದಿದ್ದರು. ಹಾಗಾಗಿಯೇ ಅಲ್ಲಿ ಮಹಿಳೆಯರಿಗಾಗಿಯೇ ವಿಶೇಷ ವೇದಾಗಮ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಲಾಗುವುದು. ಮಹಿಳೆಯರಿಗಾಗಿಯೇ ವಿಶೇಷ ವೇದಾಗಮ ಸಂಸ್ಕೃತ ಪಾಠಶಾಲೆಗಾಗಿಯೇ ಒಂದು ಎಕರೆ ಜಾಗ ಇದೆ. ಕೆಲವಾರು ತಾಂತ್ರಿಕ ಕಾರಣ ಬಗೆಹರಿಸಿದ ನಂತರ ಮುಂದಿನ ವರ್ಷದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ವೇದಾಗಮ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಲಾಗುವುದು ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next