Advertisement

ದುಗ್ಗಮ್ಮನ ಹಬ್ಬಕ್ಕೆ ಸಕಲ ಸಿದ್ಧತೆ ಕೈಗೊಳ್ಳಿ

11:16 AM Feb 23, 2020 | Team Udayavani |

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ಜಾತ್ರೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಲಭ್ಯಗಳನ್ನು ಮೂರು ದಿನದೊಳಗೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್‌ ಬಿ.ಜೆ. ಅಜಯಕುಮಾರ್‌ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ನಗರ ದೇವತೆ ಜಾತ್ರೆ ಪ್ರಯುಕ್ತ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸಮಸ್ಯೆಗಳು ತಮಗೆ ತಿಳಿದಿದೆ. ಈ ಹಿಂದೆ ಜನಪ್ರತಿನಿ ಧಿಗಳು ಇಲ್ಲದೇ ಇರುವುದರಿಂದ ಅಧಿಕಾರ ವರ್ಗದವರು ಕೆಲಸದ ಕಡೆ ಹೆಚ್ಚಾಗಿ ಗಮನ ಹರಿಸಿಲ್ಲ. ಅಧಿಕಾರಿಗಳು ಸದಸ್ಯರಿಗೆ ಸ್ಪಂದಿಸಬೇಕು ಎಂದರು.

ಕರ್ತವ್ಯದಲ್ಲಿ ನಿಷ್ಠೆ ಇರಬೇಕು. ಕೆಲವರು ಗೌರವ ಕೊಡದೇ ಇರುವುದು ಸಹ ತಮ್ಮ ಗಮನಕ್ಕೆ ಬಂದಿದೆ. ಸ್ಪಂದಿಸದೇ ಇರುವುದು ದೊಡ್ಡ ತಪ್ಪು, ಹಿಂದೆ ಹೇಗೆ ಕೆಲಸ ಮಾಡಿದ್ದೀರಿ ಎಂಬುದು ಗೊತ್ತಿಲ್ಲ. ಸದಸ್ಯರಿಗೆ ಬೇಧ ಭಾವ ಮಾಡದೇ ಸ್ಪಂದಿಸುವ ವಿವೇಚನೆ ಇದ್ದರೆ ಒಳ್ಳೆಯದು. ಇಲ್ಲದೇ ಇದ್ದರೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಶಿಫಾರಸು ಕೇಳ್ಳೋದಿಲ್ಲ. ನಿಮ್ಮ ಕೆಲಸದಲ್ಲಿ ತೊಂದರೆ ಇದ್ದರೆ ನನ್ನ ಗಮನಕ್ಕೆ ತನ್ನಿ. ಸದಸ್ಯರು ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೂಲಸೌಲಭ್ಯಗಳ ಬಗ್ಗೆ ಬರೆದುಕೊಡಿ, ಕೆಲಸ ಆಗಬೇಕಾಗಿರುವುದನ್ನು ಪತ್ರದ ಮೂಲಕ ನೀಡಿ. ಮೂರು ದಿನದಲ್ಲಿ ಕೆಲಸ ಮಾಡಬೇಕು. ಪೌರ ಕಾರ್ಮಿಕರು, ವಾಹನಗಳು ಹಾಗೂ ಸಲಕರಣೆ ಇಲ್ಲದಿದ್ದರೆ ಕೊಡಿಸುವೆ. ಕೊಂಡುಕೊಳ್ಳಲು ಆಗದಿದ್ದರೆ ಬಾಡಿಗೆಗೆ ವಾಹನಗಳನ್ನು ಪಡೆದು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಿರೀಕ್ಷೆಗೆ ತಕ್ಕಂತೆ ಕೆಲಸ… ಯಾವುದಾದರೂ ಫೈಲ್‌ ಬಗ್ಗೆ ಕರೆದು ಹೇಳಿದಾಗ ಆಯಿತು ಎನ್ನುತ್ತೀರಾ. ಆಮೇಲೆ ಫೈಲ್‌ ಹಿಂದೆ ಸರಿಸುತ್ತೀರಾ, ಈ ರೀತಿ ವರ್ತನೆ ಸರಿಯಲ್ಲ. ಒಂದು ವರ್ಷ ಏನು ಕೆಲಸ ಮಾಡಿದ್ದೀರಿ ಅದು ನಮಗೆ ಗೊತ್ತಿಲ್ಲ. ನಿರೀಕ್ಷೆ ಇಟ್ಟ ಜನರಿಗೆ ಆಶ್ವಾಸನೆ ಕೊಟ್ಟು, ಗೆದ್ದು ಬಂದಿದ್ದೀವಿ. ಹೆಚ್ಚು ನಂಬಿಕೆ ಇರುವುದರಿಂದ ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಯೋನ್ಮುಖರಾಗಬೇಕು ಎಂದು ಮೇಯರ್‌ ತಾಕೀತು ಮಾಡಿದರು.

Advertisement

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಭಾನುವಾರವೂ ಕೆಲಸ ಮಾಡಬೇಕಾಗುತ್ತದೆ. ಸಮಸ್ಯೆ ಪರಿಹಾರ ಸಂಬಂಧ ಅಲಕ್ಷ್ಯ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರೆ ಸಂದರ್ಭದಲ್ಲಿ ನಗರದಲ್ಲಿ ಯಾವ ರಸ್ತೆಯನ್ನು ಏಕಮುಖ ಸಂಚಾರ ಮಾಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸೋಣ ಎಂದ ಅವರು, ಪಾರ್ಕಿಂಗ್‌ ದೊಡ್ಡ ಸಮಸ್ಯೆ, ವಾಹನದಟ್ಟಣೆ ಹೆಚ್ಚು ಇರುವುದರಿಂದ ಅರುಣಾ ಟಾಕೀಸ್‌ನಿಂದ ನಾಲ್ಕು ಚಕ್ರದ ವಾಹನಗಳನ್ನು ಸಂಚಾರ ನಿರ್ಬಂಧಿಸುವುದು ಒಳ್ಳೆಯದು ಎಂದು ಅವರು ಹೇಳಿದರು.

ನೀರು ಪೂರೈಕೆಗೆ ಆದ್ಯತೆ: ಜಾತ್ರೆ ಸಂದರ್ಭದಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಆದ್ಯತೆ ನೀಡಬೇಕು. ಹಬ್ಬದ ನಂತರ ಸಾಮಾನ್ಯ ಸಭೆ ಕರೆಯೋಣ. ಆದಷ್ಟು ವೇಗವಾಗಿ ಮಾಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಮಾ.1ರಂದು ನಗರದ ಎಲ್ಲಾ ಭಾಗಗಳಲ್ಲೂ ನೀರು ಕೊಡಬೇಕು. ನಂತರ ಫೆ. 3, 4 ಹಾಗೂ 5ರಂದು ನಿರಂತರವಾಗಿ ಒಂದೂವರೆ ಗಂಟೆ ನೀರು ಸರಬರಾಜು ಮಾಡಬೇಕು. ಹಳೆ ಭಾಗದಲ್ಲಿ ಹಗಲು ವೇಳೆ ನೀರು ಬಿಡುವ ವ್ಯವಸ್ಥೆ ಮಾಡಿ ಎಂದರು.

ಹಂದಿ ಹಾವಳಿ: ಹಂದಿ ಹಾವಳಿ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಹಂದಿಗಳ ಹತ್ಯೆ ಮಾಡಬಾರದೆಂದು ಕೋರ್ಟ್‌ ಆದೇಶವಿದೆ. ಆದರೆ, ಬೇರೆ ಕಡೆ ಸ್ಥಳಾಂತರ ಮಾಡಲು ತೊಂದರೆ ಇಲ್ಲ ಎಂದು ಅಜಯ್‌ಕುಮಾರ್‌
ಹೇಳಿದರು.

ದಾವಣಗೆರೆ ನಗರದಲ್ಲಿ ಇದೊಂದು ದೊಡ್ಡ ದುರಂತ. ಅನಿಮಲ್‌ ಬರ್ತ್‌ ಕಂಟ್ರೋಲ್‌ ಕಾರ್ಯಕ್ರಮ ಮಾಡಿ ತಡೆಯಬಹುದು. ಶಸ್ತ್ರಚಿಕಿತ್ಸೆ ಮಾಡಿದರೆ ಸಂತಾನ ಅಭಿವೃದ್ಧಿ ಆಗಲ್ಲ ಎಂದು ಪಾಲಿಕೆ ಪಶು ವೈದ್ಯಕೀಯ ಸೇವೆ ಸಹಾಯಕ ನಿರ್ದೇಶಕ ಸಂತೋಷ್‌ ಸಲಹೆ ನೀಡಿದರು.

ಕಾಂಗ್ರೆಸ್‌ ಸದಸ್ಯ ಅಬ್ದುಲ್‌ ಲತೀಫ್‌, ಮೈಸೂರು ಹಾಗೂ ಬೆಂಗಳೂರಿನಲ್ಲಿ ಅದೇ ರೀತಿ ಮಾಡಲಾಗಿದೆ. ನಾಯಿಗಳು ಹುಲಿಯಾಗಿವೆ. ಅವುಗಳನ್ನು ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದರು. ದಾವಣಗೆರೆಯ ಕಳಂಕ ಹೋಗಿಸಬೇಕಾದರೆ ನಿಮ್ಮ ಸಹಕಾರ ಬೇಕು. ಕಾರ್ಯಾಚರಣೆ ಆರಂಭಿಸಿದರೆ. ಹಂದಿ ಹಾಗೂ ನಾಯಿಗಳನ್ನು ಉಳಿಸಿ ಎಂದು ಶಿಫಾರಸು ಮಾಡಬೇಡಿ, ನಾನು ನಿರ್ಮೂಲನೆ ಮಾಡುವ ಭರವಸೆ ನೀಡುತ್ತೇನೆ ಎಂದು ಮೇಯರ್‌
ಹೇಳಿದರು. ಉಪಮೇಯರ್‌ ಸೌಮ್ಯ ನರೇಂದ್ರಕುಮಾರ್‌, ಪಾಲಿಕೆ ಆಯುಕ್ತ ವಿಶ್ವನಾಥ್‌ ಪಿ. ಮುದ್ದಜ್ಜಿ ಹಾಗೂ ಪಾಲಿಕೆ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next