ದಾವಣಗೆರೆ: ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣದ ಏರಿಳಿತ ಬಿತ್ತನೆಯ ಮೇಲೆ ಗಾಢ ಪರಿಣಾಮಕ್ಕೆ ಕಾರಣವಾಗುತ್ತಿದೆ. 2009 ರಿಂದ 2019ರ ವರೆಗೆ ಜಿಲ್ಲೆಯಲ್ಲಿ ಜೂನ್
ಮಾಹೆಯಲ್ಲಿ ಆದ ಮಳೆಯ ಪ್ರಮಾಣ ಗಮನಿಸಿದರೆ ಒಂದು ವರ್ಷ ಹೆಚ್ಚಾದರೆ, ಮರು ವರ್ಷ ಕಡಿಮೆ, ಮತ್ತೂಂದು ವರ್ಷ ಸಾಧಾರಣ ಆಗಿದೆ. ಮುಂಗಾರು ಹಂಗಾಮಿನಲ್ಲಿ ಜೂನ್‌ನಲ್ಲಿ
ಆಗುವ ಮಳೆಯೇ ಬಿತ್ತನೆಗೆ ಅತೀ ಅಗತ್ಯವಾಗಿದ್ದು ಮಳೆಯ ಕಣ್ಣಾಮುಚ್ಚಾಲೆಯಾಟ ರೈತಾಪಿ ವರ್ಗವನ್ನು ಸಂಕಷ್ಟಕ್ಕೀಡು ಮಾಡುತ್ತಿದೆ.
2009 ರಲ್ಲಿ ಜೂನ್‌ನ 75 ಮಿಲಿ ಮೀಟರ್ ವಾಡಿಕೆ ಮಳೆಗೆ 90. 2 ಮಿಲಿ ಮೀಟರ್ ಮಳೆಯಾಗಿತ್ತು. ಅಂತೆಯೇ 2010 ರಲ್ಲಿ 73.6 ಮಿಲಿ ಮೀಟರ್, 2011 ರಲ್ಲಿ 82.4 ಮಿಲಿ ಮೀಟರ್, 2012 ರಲ್ಲಿ ಅತೀ ಕಡಿಮೆ 25.6 ಮಿಲಿ ಮೀಟರ್, 2013 ರಲ್ಲಿ 97.8 ಮಿಲಿ ಮೀಟರ್, 2014ರಲ್ಲಿ 60.7 ಮಿಲಿ ಮೀಟರ್, 2015ರಲ್ಲಿ 85 ಮಿಲಿ ಮೀಟರ್ ಮಳೆಯಾಗಿತ್ತು.
2016 ರಲ್ಲಿ 76 ಮಿಲಿ ಮೀಟರ್ ವಾಡಿಕೆ ಮಳೆಗೆ 155.9 ಮಿಲಿ ಮೀಟರ್, 2017 ರಲ್ಲಿ 58 ಮಿಲಿ ಮೀಟರ್, 2018 ರಲ್ಲಿ 71 ಮಿಲಿ ಮೀಟರ್, ಈ ವರ್ಷ 60 ಮಿಲಿ ಮೀಟರ್ ಮಳೆಯಾಗಿದೆ. ಶೇ.21 ರಷ್ಟು ಮಳೆ ಕೊರತೆ ಆಗಿದೆ. ಶೇ.5.8 ಬಿತ್ತನೆ: ದಾವಣಗೆರೆ ಜಿಲ್ಲೆಯಲ್ಲಿ ಜ. 1ರಿಂದ ಈವರೆಗೆ 204 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. ಆದರೆ, ಈವರೆಗೆ ಆಗಿರುವುದು 134 ಮಿಲಿ ಮೀಟರ್. ಒಟ್ಟಾರೆಯಾಗಿ ಶೇ.34 ರಷ್ಟು ಮಳೆ ಕೊರತೆಯಾಗಿದೆ. ಏಪ್ರಿಲ್‌ನಲ್ಲಿ 36 ಮಿಲಿ ಮೀಟರ್ ವಾಡಿಕೆ ಮಳೆಗೆ 18 ಮಿಲಿ ಮೀಟರ್, ಮೇ ತಿಂಗಳಲ್ಲಿ 75 ಮಿಲಿ ಮೀಟರ್‌ಗೆ 34 ಮಿಲಿ ಮೀಟರ್ ಮಾತ್ರ ಮಳೆಯಾಗಿರುವುದರಿಂದ ಬಿತ್ತನೆ ಪ್ರಮಾಣ ಕುಂಠಿತವಾಗಿದೆ.
ತೀವ್ರತರ ಮಳೆಯ ಕೊರತೆಯಿಂದಾಗಿ ಈವರೆಗೆ ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಶೇ. 5.8 ರಷ್ಟು ಬಿತ್ತನೆ ಆಗಿದೆ. ದಾವಣಗೆರೆ ತಾಲೂಕಿನಲ್ಲಿ 34,344 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದ ಗುರಿಯಲ್ಲಿ ಜು.4 ರ ಅಂತ್ಯಕ್ಕೆ 1,416 ಹೆಕ್ಟೇರ್ ಬಿತ್ತನೆಯಾಗಿದೆ. ಅಂತೆಯೇ ಹರಿಹರ ತಾಲೂಕಿನಲ್ಲಿ 7,360 ಹೆಕ್ಟೇರ್‌ಗೆ ಕೇವಲ 31 ಹೆಕ್ಟೇರ್, ಜಗಳೂರುನಲ್ಲಿ 50,470 ಹೆಕ್ಟೇರ್ ಗುರಿಯಲ್ಲಿ 5,696 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಚ್ಚರಿಯೆಂದರೆ ಬರ ಪೀಡಿತ ಪ್ರದೇಶ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ತಾಲೂಕಿನಲ್ಲೇ ಈವರೆಗೆ ಅತಿ ಹೆಚ್ಚಿನ ಪ್ರಮಾಣದ ಬಿತ್ತನೆ ಆಗಿದೆ!. ಹೊನ್ನಾಳಿಯಲ್ಲಿ 32,120 ಹೆಕ್ಟೇರ್‌ಗೆ 3,276 ಹಾಗೂ ಚನ್ನಗಿರಿಯಲ್ಲಿ 31,402 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 3,223 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ 2,43,230 ಹೆಕ್ಟೇರ್‌ನಲ್ಲಿ 14,102 ಹೆಕ್ಟೇರ್(ಶೇ.5.8)ನಲ್ಲಿ ಮಾತ್ರ ಬಿತ್ತನೆ ಆಗಿರುವುದು ಮಳೆಯ ಕೊರತೆಯ ತೀವ್ರತೆಯನ್ನ ತೋರಿಸುತ್ತದೆ. ಜೂನ್ ಅಂತ್ಯದವರೆಗೆ ಇದೇ ಸ್ಥಿತಿ ಮುಂದುವರೆದಲ್ಲಿ ದಾವಣಗೆರೆ ಜಿಲ್ಲೆ ಸತತ ಮೂರನೇ ವರ್ಷವೂ ಬರಕ್ಕೆ ತುತ್ತಾಗುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿವೆ. ಮೆಕ್ಕೆಜೋಳಕ್ಕೆ ಅವಕಾಶ: ದಾವಣಗೆರೆ ತಾಲೂಕಿನಲ್ಲಿ 32,050 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿಗೆ 1,283 ಹೆಕ್ಟೇರ್ ಬಿತ್ತನೆ ಆಗಿದೆ. ಹರಿಹರದಲ್ಲಿ 7,363 ಹೆಕ್ಟೇರ್‌ಗೆ 34, ಜಗಳೂರುನಲ್ಲಿ 34,460ಕ್ಕೆ 4,682, ಹೊನ್ನಾಳಿಯಲ್ಲಿ 26,650ಕ್ಕೆ 2,927, ಚನ್ನಗಿರಿಯಲ್ಲಿ 25,585 ಹೆಕ್ಟೇರ್‌ಗೆ 2,783 ಹೆಕ್ಟೇರ್ ಬಿತ್ತನೆಯಾಗಿದೆ. ಒಟ್ಟಾರೆಯಾಗಿ 1,26,108 ಹೆಕ್ಟೇರ್ ಗುರಿಯಲ್ಲಿ 11,709 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಇದೆ. ಕೆಲವು ಕಡೆ ಬಿತ್ತನೆ ಮಾಡಿದ್ದನ್ನು ನಾಶ ಮಾಡುವ ಹಂತಕ್ಕೆ ತಲುಪಿದೆ. ಮೆಕ್ಕೆಜೋಳ ಕಣಜ ಖ್ಯಾತಿಯ ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷ ಅಂತಹ ಆಶಾದಾಯಕ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿಲ್ಲ. ಆದರೂ, ಜುಲೈ ಮೊದಲ ವಾರದಲ್ಲಿ ಆಗುತ್ತಿರುವಂತಹ ಮಳೆ ರೈತಾಪಿ ವರ್ಗ ಕೊಂಚ ಉಸಿರಾಡುವಂತೆ ಮಾಡಿದೆ. ಮಾಸಾಂತ್ಯದವರೆಗೆ ಮೆಕ್ಕೆಜೋಳ ಬಿತ್ತನೆಗೆ ಕಾಲಾವಕಾಶ ಇದೆ. ಹಾಗಾಗಿ ಮೆಕ್ಕೆಜೋಳ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಇದೆ.