Advertisement

ಮಳೆರಾಯನ ಮುನಿಸು-ಜಿಲ್ಲೆಯಲ್ಲಿ ಆಗದ ಬಿತ್ತನೆ

10:10 AM Jun 14, 2019 | Naveen |

•ರಾ. ರವಿಬಾಬು
ದಾವಣಗೆರೆ:
ಮುಂಗಾರು ಮಳೆಯ ಕೊರತೆಯಿಂದಾಗಿ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ ಆಗಿರುವ ಬಿತ್ತನೆ ಕೇವಲ 275 ಹೆಕ್ಟೇರ್‌ ಮಾತ್ರ!.

Advertisement

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 2,43,238 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಇದೆ. ಜೂನ್‌ ಎರಡನೇ ವಾರದ ಅಂತ್ಯಕ್ಕೆ ಬಿತ್ತನೆ ಆಗಿರುವುದು ಕೇವಲ 275 ಹೆಕ್ಟೇರ್‌ ಪ್ರದೇಶ ಮಾತ್ರ. ಬಿತ್ತನೆ ಪ್ರಮಾಣ ಶೇಕಡವಾರು ಲೆಕ್ಕಾಚಾರದಲ್ಲಿ ಶೇ.0.0011 ರಷ್ಟು ಮಾತ್ರ ಆಗಿರುವುದು ನಿಜಕ್ಕೂ ಆತಂಕಕ್ಕೀಡು ಮಾಡಿದೆ.

ಕಳೆದ ವರ್ಷದ ಬರದಿಂದ ಬಸವಳಿದು ಹೋಗಿರುವ ರೈತಾಪಿ ವರ್ಗವನ್ನು ಮಾತ್ರವಲ್ಲ, ಪ್ರತಿಯೊಬ್ಬರನ್ನೂ ಮುಂದೆ ಹೇಗೆ? ಎಂಬ ಪ್ರಶ್ನೆ ದಟ್ಟವಾಗಿ ಕಾಡುತ್ತಿದೆ. ಕಳೆದ ಎರಡು ದಿನಗಳಿಂದ ಮೋಡಗಳ ದಟ್ಟಣೆ, ಅಲ್ಲಲ್ಲಿ ಮಳೆ ಸುರಿಯುತ್ತಿದ್ದರೂ ಇನ್ನೂ ರಭಸದ ಮಳೆ ಕಂಡಿಲ್ಲ.

ದಾವಣಗೆರೆ ತಾಲೂಕಿನಲ್ಲಿ 63,404 ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಯಲ್ಲಿ ಈವರೆಗೆ ಬಿತ್ತನೆ ಆಗಿರುವುದು ಬರೀ 50 ಹೆಕ್ಟೇರ್‌ನಲ್ಲಿ ಮಾತ್ರ. ಲೋಕಿಕೆರೆ, ಮಾಯಕೊಂಡ ಹೋಬಳಿಯಲ್ಲಿ ಒಂದಷ್ಟು ಕಡೆ ಮೆಕ್ಕೆಜೋಳ ಬಿತ್ತನೆ ಆಗಿರುವುದನ್ನು ಹೊರತುಪಡಿಸಿದೆರೆ ಇನ್ನೂ 63 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಶೂನ್ಯ. ಮಳೆಯಾದರೆ ಮಾತ್ರವೇ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ. ಇಲ್ಲ ಎಂದಾದಲ್ಲಿ ಇಲ್ಲ ಎನ್ನುವಂತಹ ದಾರುಣ ಸ್ಥಿತಿ ರೈತರನ್ನು ಚಿಂತೆಗೀಡು ಮಾಡಿದೆ.

ಅತಿ ಹೆಚ್ಚಿನ ನೀರಾವರಿ ಪ್ರದೇಶವನ್ನೇ ಹೊಂದಿರುವ ಹರಿಹರ ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿಯೇ ಇಲ್ಲ. ಸದಾ ಬರವನ್ನೇ ಹಾಸಿ, ಹೊದ್ದು ಮಲಗುವ ಜಗಳೂರು ಜನರು ಈ ಬಾರಿಯ ಮುಂಗಾರಿನ ಪ್ರಾರಂಭದಲ್ಲೇ ಭಾರೀ ಆತಂಕಕ್ಕೆ ಸಿಲುಕುವಂತಾಗಿದೆ. 54 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ಸಾಧನೆ ಆಗಿರುವುದು 30ಹೆಕ್ಟೇರ್‌ನಲ್ಲಿ ಮಾತ್ರ. ಸಿದ್ದಮ್ಮನ್ನಹಳ್ಳಿ, ಹೊನ್ನೆಮರಡಿ, ಕಾಮಗೇತನಹಳ್ಳಿ, ತೋರಣಗಟ್ಟೆ ಮತ್ತು ದೊಣ್ಣೆಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಲ ಭಾಗದಲ್ಲಿ ಬಿತ್ತನೆ ಆಗಿದೆ. ಈಚೆಗೆ ಬಂದ ಮಳೆಯಿಂದಾಗಿ ನಿಧಾನವಾಗಿ ಕೃಷಿ ಚಟುವಟಿಕೆ ಗರಿಗೆದರಿದೆ.

Advertisement

ಅರೆ ಮಲೆನಾಡು ಖ್ಯಾತಿಯ ಹೊನ್ನಾಳಿ ತಾಲೂಕಿನಲ್ಲಿ ಈ ಮುಂಗಾರು ಹಂಗಾಮಿನಲ್ಲಿ 48,895 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. 110 ಹೆಕ್ಟೇರ್‌ನಲ್ಲಿ ಹತ್ತಿ, 10 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಸೇರಿ ಈವರೆಗೆ ಬಿತ್ತನೆ ಆಗಿರುವುದು 135 ಹೆಕ್ಟೇರ್‌ನಲ್ಲಿ ಮಾತ್ರ. ಮುಂಗಾರು ಪ್ರಾರಂಭದಲ್ಲಿ ಭೋರ್ಗರೆಯುತ್ತಿದ್ದ ಜೀವನದಿ ತುಂಗಭದ್ರೆ ಬರಿದಾಗಿರುವುದು ರೈತರಲ್ಲಿ ಭವಿಷ್ಯದ ಬಗ್ಗೆ ಭಯ ಹುಟ್ಟಿಸಿದೆ.

ಅಡಕೆನಾಡು ಚನ್ನಗಿರಿ ತಾಲೂಕಿನ ವಾತಾವರಣವೂ ಇತರೆ ತಾಲೂಕಿಗಿಂತಲೂ ಭಿನ್ನವಾಗಿಯೇನು ಇಲ್ಲ. 44,849 ಹೆಕ್ಟೇರ್‌ ಪ್ರದೇಶದಲ್ಲಿ ಗುರಿಯಲ್ಲಿ ಈವರೆಗೆ 60 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ಉಬ್ರಾಣಿ ಮತ್ತು ಸಂತೇಬೆನ್ನೂರು ಹೋಬಳಿಯ ಕೆಲ ಭಾಗದಲ್ಲಿ ಹತ್ತಿ ಇತರೆ ಬೆಳೆ ಬಿತ್ತನೆ ಮಾಡಲಾಗಿದೆ.

ಕಳೆದ ವರ್ಷವೂ ಆಗಿಲ್ಲ
ಕಳೆದ ಜೂ. 11 ರ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಕೊಂಚವಾದರೂ ಉತ್ತಮ ವಾತಾವರಣ ಇತ್ತು. ದಾವಣಗೆರೆ ತಾಲೂಕಿನ 34,685 ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಯಲ್ಲಿ 10,822 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಎಂದಿನಂತೆ ಹರಿಹರ ತಾಲೂಕಿನಲ್ಲಿ ಬಿತ್ತನೆ ಎಂಬುದೇ ಆಗಿರಲಿಲ್ಲ. 12,385 ಹೆಕ್ಟೇರ್‌ನಲ್ಲಿ ಒಂದೇ ಒಂದು ಕಾಳು ಬಿತ್ತನೆ ಆಗಿರಲಿಲ್ಲ. ಜಗಳೂರು ತಾಲೂಕಿನಲ್ಲಿ 50,470 ಹೆಕ್ಟೇರ್‌ಗೆ 2,537 ಹೆಕ್ಟೇರ್‌, ಹೊನ್ನಾಳಿಯಲ್ಲಿ 32,135 ಹೆಕ್ಟೇರ್‌ನಲ್ಲಿ 17,880, ಚನ್ನಗಿರಿಯಲ್ಲಿ 31,577 ಹೆಕ್ಟೇರ್‌ ಗುರಿಯಲ್ಲಿ 520 ಹೆಕ್ಟೇರ್‌ ಬಿತ್ತನೆ ಆಗಿತ್ತು.

50 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ
ಮೆಕ್ಕೆಜೋಳದ ಕಣಜ… ಎಂದೇ ಕರೆಯಲ್ಪಡುವ ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ ಕೇವಲ 50 ಹೆಕ್ಟೇರ್‌ನಲ್ಲಿ ಮಾತ್ರವೇ ಮೆಕ್ಕೆಜೋಳ ಬಿತ್ತನೆ ಆಗಿದೆ. ಒಟ್ಟಾರೆ 1,26,108 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ 50 ಹೆಕ್ಟೇರ್‌ ಮಾತ್ರ ಬಿತ್ತನೆ ಆಗಿದೆ. ಮೆಕ್ಕೆಜೋಳ ಬಿತ್ತನೆ ತಡವಾಗುತ್ತಿದೆ. ಜಿಲ್ಲೆಯ ಪ್ರಮುಖ ಬೆಳೆಗೆ ಮಳೆಯ ಕೊರತೆ ಇನ್ನಿಲ್ಲದೆ ಕಾಡುತ್ತಿದೆ. ಈಗ ಅನಿವಾರ್ಯವಾಗಿಯಾದರೂ ಬಿತ್ತನೆ ಮಾಡಲೇಬೇಕಾದ ಸ್ಥಿತಿಯಲ್ಲಿ ರೈತರು ಇದ್ದಾರೆ. ದಾವಣಗೆರೆ ತಾಲೂಕಿನಲ್ಲಿ 32,050 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಇದೆ. 50 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಹರಿಹರ ತಾಲೂಕಿನಲ್ಲಿ 7,363 ಹೆಕ್ಟೇರ್‌, ಜಗಳೂರುನಲ್ಲಿ 34,460, ಹೊನ್ನಾಳಿಯಲ್ಲಿ 26,650, ಚನ್ನಗಿರಿಯಲ್ಲಿ 25,585 ಹೆಕ್ಟೇರ್‌ ಗುರಿ ಇದೆ. ಆದರೆ, ಈವರೆಗೆ ಬಿತ್ತನೆಯೇ ಆಗಿಲ್ಲ. ಜೋಳ, ಅಕ್ಕಡಿ ಬೆಳೆಗಳಾದ ತೊಗರಿ, ಹೆಸರು, ಸೂರ್ಯಕಾಂತಿ, ಎಳ್ಳು ಬಿತ್ತನೆಯೇ ಇಲ್ಲ. ಈ ಬಾರಿಯ ಮುಂಗಾರು ಹಂಗಾಮಿನ ಮಳೆಯ ಕೊರತೆ ಜನರ ಜಂಘಾಬಲವನ್ನೇ ಉಡುಗಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next