Advertisement

ಯಶಸ್ವಿ ಉದ್ಯಮಿಗೆ ಬೇಕಿದೆ ತರಬೇತಿ

11:22 AM Oct 16, 2019 | Naveen |

ದಾವಣಗೆರೆ: ಯಾವುದೇ ವ್ಯಕ್ತಿ ಹುಟ್ಟಿನಿಂದಲೇ ಉದ್ಯಮಿಯಾಗಿರುವುದಿಲ್ಲ. ಉತ್ತಮ ತರಬೇತಿಯಿಂದ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಸಿಡಾಕ್‌ ಜಂಟಿ ನಿರ್ದೇಶಕ ಆರ್‌.ಪಿ. ಪಾಟೀಲ್‌ ಹೇಳಿದ್ದಾರೆ.

Advertisement

ನಗರದ ನಿಟ್ಟುವಳ್ಳಿಯ ಭಗೀರಥ ಸರ್ಕಲ್‌ನಲ್ಲಿರುವ ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ಸಿಡಾಕ್‌ (ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ) ಹಾಗೂ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಕೌಶಲ್ಯ ಉದ್ಯೋಗ ಔಟ್‌ರೀಚ್‌ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯೂ ಸಹ ದೊಡ್ಡ ಉದ್ಯಮಿಯಾಗುವ ಅವಕಾಶಗಳಿವೆ.

ವ್ಯಕ್ತಿ ತನ್ನ ಆಸಕ್ತಿಯ ಔದ್ಯಮಿಕ ವಿಷಯದ ಬಗ್ಗೆ ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನ ಪಡೆಯುವುದರ ಮೂಲಕ ಯಶಸ್ವಿ ಉದ್ಯಮಿಯಾಗಬಹುದು ಎಂದರು.

ಪ್ರಧಾನಮಂತ್ರಿ ಉದ್ಯೋಗ ಕೌಶಲ್ಯ ಕೇಂದ್ರವು ಒಂದು ಕೌಶಲ್ಯ ಆಧಾರಿತ ತರಬೇತಿ ಕೇಂದ್ರವಾಗಿದ್ದು, ಉದ್ಯೋಗ ಆಧಾರಿತ ತರಬೇತಿ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

1992ರ ಮೇ 15ರಂದು ನಮ್ಮ ಸಂಸ್ಥೆ ಧಾರವಾಡದಲ್ಲಿ ಸ್ಥಾಪನೆಯಾಗಿ ಇಂದು ಹಲವಾರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅನೇಕ ಯುವಕ-ಯುವತಿಯರಿಗೆ ತರಬೇತಿ ನೀಡುವುದರ ಮೂಲಕ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗಿದೆ. ಕೌಶಲ್ಯ ಉದ್ಯೋಗ ಔಟ್‌ರೀಚ್‌ ತರಬೇತಿ ಕಾರ್ಯಕ್ರಮದಲ್ಲಿ ಉದ್ಯಮಶೀಲತೆ ತಿಳಿವಳಿಕೆ, ವ್ಯವಹಾರ ಅಭಿವೃದ್ಧಿ, ವ್ಯವಹಾರ ನಿರ್ವಹಣೆ ಬಗ್ಗೆ ತಿಳಿಸಿಕೊಡಲಾಗುತ್ತದೆ.

Advertisement

ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಈಗ ಬದಲಾಗಿ ಉದ್ಯೋಗಂ ವ್ಯಕ್ತಿ ಲಕ್ಷಣಂ ಆಗಿದೆ. ಹೆಣ್ಣು, ಗಂಡು ಎಂಬ ಬೇಧವಿಲ್ಲದೆ ಪ್ರತಿಯೊಬ್ಬರೂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಅನೇಕ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ತರಬೇತಿ ಪಡೆದ ನಂದಿನಿ ಇದೇ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡರು. ನಿವೃತ್ತ ನಿಯೋಜನಾಧಿಕಾರಿ ಮುಕುಂದಪ್ಪ. ಬಿ, ದಾವಣಗೆರೆ ದಿಶಾ ಕೇಂದ್ರ ವ್ಯವಸ್ಥಾಪಕ ವಸಂತಕುಮಾರ್‌.ಕೆ.ಬಿ., ಔಟರೀಚ್‌ ತರಬೇತುದಾರ ಬಸವರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ವಸಂತಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next