ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಗುರು ದತ್ತ ಪೀಠವನ್ನು ಸಂಪೂರ್ಣವಾಗಿ ಹಿಂದೂ ಸಮಾಜಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಶ್ರೀರಾಮ ಸೇನೆ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಚಂದ್ರದ್ರೋಣ ಪರ್ವತ ಶ್ರೀ ಗುರು ದತ್ತಾತ್ರೇಯ, ಅರುಂಧತಿ, ಅತ್ರಿ ಋಷಿಗಳ ಪವಿತ್ರ ತಪೋಭೂಮಿ. ಆದರೆ, ಕೆಲವು ಅತಿಕ್ರಮಣಕಾರರು ಸ್ಥಳವನ್ನ ಆಕ್ರಮಿಸಿಕೊಂಡು ನಮ್ಮದೇ ಎಂದು ಹೇಳಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಮತ್ತು ಇತಿಹಾಸ, ನೆಲದ ಸತ್ಯಕ್ಕೆ ಬಗೆಯುವ ದ್ರೋಹ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಾಬಾಬುಡನ್ ದರ್ಗಾ ಇರುವುದು ನಾಗೇನಹಳ್ಳಿಯಲ್ಲಿ ಎಂದು ಸರ್ಕಾರಿ ದಾಖಲೆಯಲ್ಲಿ ಇದೆ. ನ್ಯಾಯಾಲಯ ನೀಡಿರುವ 7 ತೀರ್ಪುಗಳು ಅದಕ್ಕೆ ಪುಷ್ಠಿ ನೀಡುತ್ತವೆ. ದಾಖಲೆ, ತೀರ್ಪು ಇದ್ದರೂ ಹಿಂದೂ ಸಮಾಜಕ್ಕೆ ಈವರೆಗೆ ಪೀಠವನ್ನು ಒಪ್ಪಿಸದೇ ಇರುವುದು ಅತ್ಯಂತ ಖಂಡನಾರ್ಹ ಎಂದು ದೂರಿದರು.
ಈಗಿನ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ಅವರು ಸಹ ಹೋರಾಟದಲ್ಲಿ ಭಾಗವಹಿಸಿ ಧ್ವನಿ ಎತ್ತಿದವರೇ ಆಗಿದ್ದಾರೆ. ಅವರ ಕಾಲದಲ್ಲಿ ಅನ್ಯಾಯ ಸರಿಪಡಿಸುವಂತಹ ಸುವರ್ಣ ಅವಕಾಶ ಬಂದೊದಗಿದೆ. ದತ್ತಪೀಠಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂ ಸಮಾಜಕ್ಕೆ ಒಪ್ಪಿಸುವ ಜೊತೆಗೆ ಅಲ್ಲಿನ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಮಾಡಿ, ತ್ರಿಕಾಲ ಪೂಜೆ ನಡೆಸುವ ವ್ಯವಸ್ಥೆ ಮಾಡಬೇಕು. ಮುಕ್ತ ಪ್ರವೇಶ, ಅನ್ನದಾನದ ವ್ಯವಸ್ಥೆ, ನೂರಾರು ಎಕರೆ ಪ್ರದೇಶದ ಅತಿಕ್ರಮಣ ತೆರವುಗೊಳಿಸಿ, ಕಾಣೆಯಾಗಿರುವ ಅಮೂಲ್ಯ ವಸ್ತುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಶ್ರೀರಾಮ ಸೇನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ್ ನಡುಮನಿ, ಡಿ.ಬಿ. ವಿನೋದ್ ರಾಜ್, ಅರವಿಂದ್, ನೂತನ ಆಚಾರ್ಯ, ಕುಮಾರ್ ನಾಯಕ್, ಅಂಜನಿ, ಚಿತ್ರಲಿಂಗ, ಚೇತನ್, ತಿಪ್ಪೇಶ್, ಆಕಾಶ್, ಕಿರಣ್, ಕೆ.ಎನ್. ನಿಂಗರಾಜ್ ಇತರರು ಇದ್ದರು.