Advertisement

ಗಣೇಶ ವಿಸರ್ಜನೆ ಭದ್ರತೆಗೆ ಸಿದ್ಧತೆ

11:11 AM Sep 08, 2019 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಗಣೇಶೋತ್ಸವದ ಅಂಗಾಗಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗಣೇಶೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಒಟ್ಟು 2,499 ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಅದರಲ್ಲಿ ಈವರೆಗೂ 2000ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ ಆಗಿದೆ. ದೊಡ್ಡ ಮೂರ್ತಿಗಳ ವಿಸರ್ಜನೆ ಸೋಮವಾರದಿಂದ ಆರಂಭವಾಗಲಿದ್ದು, ಸೆ.21ಕ್ಕೆ ಕೊನೆಗೊಳ್ಳಲಿದೆ ಎಂದರು.

ಚನ್ನಗಿರಿಯಲ್ಲಿ ಭಜರಂಗದಳದವರ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಸೆ.9 ರಂದು ಸೆ.10 ರಂದು ದಾವಣಗೆರೆ ನಗರದ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಒಟ್ಟು 30 ಗಣೇಶ ಮೂರ್ತಿಗಳ ವಿಸರ್ಜನೆಯಾಗುತ್ತಿದ್ದು, ಅದರಲ್ಲಿ ದಾವಣಗೆರೆ ಬಡಾವಣೆ ಠಾಣೆಯ ವ್ಯಾಪ್ತಿಯ ವಿನೋಬನಗರದ 2ನೇ ಮೇನ್‌ 6ನೇ ಕ್ರಾಸ್‌ನ ವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯೂ ಸೇರಿದೆ. ಚನ್ನಗಿರಿ ಹಾಗೂ ಹರಪನಹಳ್ಳಿಯ ಹಿಂದು ಮಹಾಸಭಾ ಗಣಪತಿ ಸೆ.12 ರಂದು ವಿಸರ್ಜನೆಯಾಗಲಿವೆ. ಸೆ.21ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆಯಾಗಿಲಿದೆ. ಅಂದೇ ಚಿತ್ರದುರ್ಗದಲ್ಲಿನ ಹಿಂದೂ ಮಹಾಸಭಾ ಗಣಪತಿ ಸಹ ವಿಸರ್ಜನೆ ಕಾರ್ಯ ನಡೆಯಲಿದೆ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಅಗತ್ಯ ಭದ್ರತೆಯ ದೃಷ್ಟಿಯಿಂದ ಪೊಲೀಸ್‌ ಬಿಗಿ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ಹೇಳಿದರು.

ಮೆರವಣಿಗೆ ಬಂದೋಬಸ್ತ್ಗಾಗಿ ನಾಲ್ವರು, ಡಿವೈಎಸ್ಪಿ, 12 ಪೊಲೀಸ್‌ ಇನ್ಸ್‌ಪೆಕ್ಟರ್, 38 ಸಬ್‌ ಇನ್ಸ್‌ಪೆಕ್ಟರ್‌, 86 ಎಎಸ್‌ಐ, 580 ಪೊಲೀಸ್‌ ಪೇದೆ ಹಾಗೂ ಮುಖ್ಯ ಪೇದೆ, 305 ಗೃಹ ರಕ್ಷಕದಳದ ಸಿಬ್ಬಂದಿ ಬಳಸಿಕೊಳ್ಳಲಾಗುವುದು. ಜತೆಗೆ ಇತರೆ ಇಲಾಖೆ ಸಿಬ್ಬಂದಿಯೊಂದಿಗೆ ಗಣೇಶ ಮೂರ್ತಿಗಳ ವಿಸರ್ಜನೆ ನಿರ್ವಿಘ್ನವಾಗಿ ನೆರವೇರಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ನಗರದಲ್ಲಿ ಈಗಾಗಲೇ 52 ಕಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳಿವೆ. ಈ ಬಾರಿ ಹೆಚ್ಚುವರಿಯಾಗಿ 137 ಸಿಸಿ ಕ್ಯಾಮರಾಗಳನ್ನು ಪಾಲಿಕೆ ವತಿಯಿಂದ ಅಳವಡಿಸಲಾಗುವುದು. ಡ್ರೋಣ್‌ ಕ್ಯಾಮರಾ ಸಹ ಬಳಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

Advertisement

ಮೊದಲು ಮನವರಿಕೆ: ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಮೋಟಾರ್‌ ಕಾಯ್ದೆ ಬಗ್ಗೆ ಸಾರ್ವಜನಿಕರು ಅದರಲ್ಲೂ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಇತರೆಡೆ ಫೆಕ್ಸ್‌, ಬ್ಯಾನರ್‌ ಹಾಗೂ ಕರಪತ್ರಗಳ ಮೂಲಕ ನಾಗರಿಕರಿಗೆ ಮನವರಿಕೆ ಮಾಡಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಎಸ್‌ಪಿ ಹನುಮಂತರಾಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next