Advertisement

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

08:28 PM Oct 22, 2024 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೇ ಕಾರಣ ಎಂದು ನಾವೂ ಹೇಳಬೇಕಾಗುತ್ತದೆ. ಇದೇ ಧೋರಣೆಯಲ್ಲಿ ಮಾತನಾಡುತ್ತಿದ್ದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಹಗುರ ಮಾತನಾಡುತ್ತಿರುವ ಭೈರತಿ ಸುರೇಶ್ ಹೊಸದಾಗಿ ಮಂತ್ರಿಯಾಗಿದ್ದಾರೆ. ಒಳ್ಳೆಯ ಇಲಾಖೆ ಸಚಿವರಾಗಿ ಒಳ್ಳೆಯ ಕೆಲಸ ಮಾಡಲಿ. ದಿವಂಗತ ಮೈತ್ರಾದೇವಿ ಸ್ವರ್ಗದಲ್ಲಿದ್ದಾರೆ. ಅಂತಹವರ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡವರಾ ಅವರು. ಒಬ್ಬ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಸ್ತವಾಂಶವನ್ನೇ ಹೇಳಿದ್ದಾರೆ. ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದರೆ ರಾಜ್ಯದ ಜನತೆ ಭೈರತಿ ಸುರೇಶಗೆ ತಕ್ಕ ಪಾಠ ಕಲಿಸುತ್ತಾರೆ. ಮುಖ್ಯಮಂತ್ರಿ ಹಿಂದೆ, ಮುಂದೆ ಸುತ್ತುವುದನ್ನು ಬಿಟ್ಟು, ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಹೆಣ್ಣು ಮಕ್ಕಳ ಬಗ್ಗೆ ಹಗುರ ಮಾತನಾಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು.

ಭೈರತಿ ಸುರೇಶ ಮೈಸೂರಿಗೆ ವಿಶೇಷ ವಿಮಾನದಲ್ಲಿ ಹೋಗಿ, ಕಡತಗಳನ್ನು ತಂದು ಸುಟ್ಟು ಹಾಕಿದ್ದು ನಿಜ. ಇಂದಲ್ಲ, ನಾಳೆ ಅವರ ಮನೆಯ ಮೇಲೆಯೂ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ಸೇರುವ ವಿಚಾರ ವದಂತಿ ಅಷ್ಟೇ. ಯಾವುದೇ ಕಾರಣಕ್ಕೂ ಯೋಗೇಶ್ವರ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮ ಪಕ್ಷದಲ್ಲೇ ಉಳಿಯುತ್ತಾರೆ. ಆ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next