Advertisement

ಪರ್ಯಾಯ ಉದ್ಯೋಗದತ್ತ ಗಮನ ಹರಿಸಿ

10:13 AM Aug 30, 2019 | Naveen |

ದಾವಣಗೆರೆ: ಹಂದಿಗಳ ಸಂಖ್ಯೆ ಕಡಿಮೆಗೊಳಿಸಿ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆಯತ್ತ ಗಮನ ಹರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ ಸಲಹೆ ನೀಡಿದ್ದಾರೆ.

Advertisement

ಗುರುವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಹಂದಿ ಮಾಲೀಕರೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂದಿಗಳ ಸಾಕಾಣಿಕೆ, ಮಾರಾಟ ನಮ್ಮ ಕುಲಕಸುಬು, ಜೀವನಾಧಾರ ಎಂದು ಹೇಳುತ್ತೀರಿ. ಕಾಲದ ಬದಲಾವಣೆಗೆ ಅನುಗುಣವಾಗಿ ಹಂದಿ ಮಾಲೀಕರು ಸಹ ಬದಲಾಗಬೇಕು. ಹಂದಿ ಸಾಕಾಣಿಕೆ ಕಡಿಮೆ ಮಾಡುವ ಜೊತೆಗೆ ಪರ್ಯಾಯವಾಗಿ ಅಂಗಡಿ, ಬ್ಯೂಟಿಪಾರ್ಲರ್‌, ಆಟೋ ಇತರೆ ಕೆಲಸಗಳ ಮಾಡುವರಿಗೆ ನಗರ ಪಾಲಿಕೆಯಿಂದ ಸಹಾಯಧನದೊಂದಿಗೆ ಆರ್ಥಿಕ ನೆರವು ನೀಡಲಾಗುವುದು. ಮಕ್ಕಳನ್ನೂ ಹಂದಿ ಸಾಕಾಣಕೆಯಿಂದ ಬಿಡಿಸಿ, ವಿದ್ಯಾಭ್ಯಾಸ, ಇತರೆ ಪರ್ಯಾಯ ಉದ್ಯೋಗಕ್ಕೆ ಕಳಿಸಬೇಕು ಎಂದು ತಿಳಿಸಿದರು.

ಕುಳುವ ಸಂಘದ ರಾಜ್ಯ ಅಧ್ಯಕ್ಷ ಆನಂದಪ್ಪ ಮಾತನಾಡಿ, ಸ್ಮಾರ್ಟ್‌ಸಿಟಿ ನೆಪದಲ್ಲಿ ಹಂದಿಗಳನ್ನು ಹಿಡಿದು, ಬೇರೆ ಕಡೆ ಸಾಗಿಸಿ, ನಮಗೆ ಅನ್ಯಾಯ ಮಾಡಲಾಗಿದೆ. ಉಚ್ಚ ನ್ಯಾಯಾಲಯದ ಆದೇಶದಂತೆ ಹಂದಿ ಸಾಕಾಣಿಕೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಹಂದಿಗಳ ಸಾಗಾಣಿಕೆ ವೆಚ್ಚವನ್ನೂ ನೀಡಿಲ್ಲ ಎಂದು ದೂರಿದರು.

ದಾವಣಗೆರೆ ಜನತೆಗೆ ತೊಂದರೆ ಮಾಡಬೇಕು ಎಂಬುದು ನಮ್ಮ ಉದ್ದೇಶ ಅಲ್ಲವೇ ಅಲ್ಲ, ಆದರೆ, ಹಂದಿ ಸಾಕಾಣಿಕೆಯೇ ನಮ್ಮ ಜೀವನ ಆಧಾರ. ಹಂದಿ ಮಾಲೀಕರಿಗೆ ಸೂಕ್ತ ಪುನವರ್ಸತಿ ಮಾಡಿದರೆ ಖಂಡಿತವಾಗಿಯೂ ಅಲ್ಲಿಯೇ ಹಂದಿಗಳ ಸಾಕಾಣಿಕೆ ಮಾಡಲಾಗುವುದು. ಏಕಾಏಕಿ ಹಂದಿಗಳನ್ನು ಬೇರೆ ಕಡೆ ಸಾಗಿಸಲಿಕ್ಕೆ ಆಗುವುದಿಲ್ಲ. ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಹಂದಿ ಮಾಲೀಕ ದುರುಗಪ್ಪ ಮಾತನಾಡಿ, ಊರ ಒಳಗೆ ಇಲ್ಲವೇ ಹೊರಗೆ ಎಲ್ಲಾ ಸೌಕರ್ಯ ಮಾಡಿಕೊಟ್ಟರೆ ಹಂದಿ ಸಾಗಿಸಲು ಸಿದ್ಧ ಇದ್ದೇವೆ. ಹಂದಿ ಸಾಕಿ, ಮಾರಾಟ ಮಾಡಿ, ಬಂದ ಹಣದಲ್ಲೇ ಜೀವನ ನಡೆಸಬೇಕು. ಅಂತಹ ಹಂದಿಗಳಿಗೆ ವಿಷ ಕೊಟ್ಟು ಕೊಂದು ಬೇರೆ ಕಡೆ ಸಾಗಿಸಲಾಯಿತು. ನಮಗೆ ತಿಳಿಸಿದ್ದರೆ ಏನಾದರೂ ಮಾಡುತ್ತಿದ್ದೆವು. ಸೂಕ್ತ ಪುನರ್ವಸತಿಯ ಮೂಲಕ ಹಂದಿ ಸಾಕುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಹಿಂದಿನ ಜಿಲ್ಲಾಧಿಕಾರಿಗಳ ಆದೇಶದಂತೆ ಗೋಶಾಲೆ ಮಾದರಿಯಲ್ಲಿ ಹಂದಿಗಳ ಪುನರ್ವಸತಿಗೆ ಆಲೂರುಹಟ್ಟಿ, ದೊಡ್ಡಬಾತಿ, ಆವರಗೊಳ್ಳ ಮತ್ತು ಆನಗೋಡು ಬಳಿ ಜಾಗ ಗುರುತು ಮಾಡಲಾಗಿತ್ತು.ಆದರೆ, ಸ್ಥಳೀಯರ ವಿರೋಧದಿಂದ ಅದು ಕಾರ್ಯ ರೂಪಕ್ಕೆ ಬರಲಿಲ್ಲ. ಹಂದಿ ಮಾಲೀಕರು ಆರೋಪ ಮಾಡಿರುವಂತೆ ವಿಷ ಹಾಕಿ ಹಂದಿಗಳನ್ನು ಕೊಂದಿಲ್ಲ. ಹಾಗೆ ಕೊಲ್ಲಲಿಕ್ಕೆ ಬರುವುದೂ ಇಲ್ಲ. ಹಂದಿಗಳನ್ನು ಬೇರೆ ಕಡೆ ಸಾಗಿಸಲಾಗಿದೆ ಎಂದು ಪ್ರಭಾರ ಆರೋಗ್ಯಾಧಿಕಾರಿ ಡಾ| ಚಂದ್ರಶೇಖರ್‌ ಸುಂಕದ್‌ ತಿಳಿಸಿದರು.

Advertisement

ಹಂದಿಗಳ ಪುನವರ್ಸತಿಗೆ ಅಗತ್ಯವಾದ ಜಾಗಕ್ಕಾಗಿ ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಸರ್ಕಾರಿ ಇಲ್ಲವೇ ಖಾಸಗಿ ಜಾಗ ಖರೀದಿಗೂ ಮಹಾನಗರ ಪಾಲಿಕೆ ಸಿದ್ಧ ಇದೆ. ಹಂದಿ ಮಾಲೀಕರು ಸಹ ತಮಗೆ ಸೂಕ್ತ ಆಗುವ ಕಡೆ ಜಾಗ ನೋಡಿದರೆ ಸ್ಥಳ ಪರಿಶೀಲನೆ ಮಾಡಿ, ಖರೀದಿ ಮಾಡಲಾಗುವುದು. ನನಗೆ ಗೊತ್ತಿರುವಂತೆ ದಾವಣಗೆರೆಯಲ್ಲೇ ಹೆಚ್ಚಿನ ಹಂದಿ ಇವೆ. ಬೇರೆ ಕಡೆ ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲ ಎಂದು ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ ಹೇಳಿದರು.

ಜನಾರೋಗ್ಯ ದೃಷ್ಟಿಯಿಂದ ಹಂದಿಗಳ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆಗೊಳಿಸಿ, ಪರ್ಯಾಯ ಉದ್ಯೋಗ ಮಾಡಬೇಕು. ಅದಕ್ಕೆ ಮಹಾನಗರ ಪಾಲಿಕೆ ವಿವಿಧ ಅನುದಾನ, ಇತರೆ ಮೂಲದಿಂದ ಎಲ್ಲ ರೀತಿಯ ಸಹಕಾರ, ನೆರವು ನೀಡಲಿದೆ. ಇಂದಿನ ಸಭೆಯಲ್ಲಿನ ಚರ್ಚೆಯ ಬಗ್ಗೆ ಮೇಲಾಧಿಕಾರಿಗಳು, ಅಗತ್ಯವಾದರೆ ನ್ಯಾಯಾಲಯದ ಗಮನಕ್ಕೂ ತರಲಾಗುವುದು ಎಂದು ಮಂಜುನಾಥ್‌ ಬಳ್ಳಾರಿ ತಿಳಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಆರ್‌. ಪರಸಪ್ಪ, ಪರಿಸರ ಅಭಿಯಂತರರಾದ ಸುನೀಲ್, ಬಸವಣ್ಣಪ್ಪ, ಶಾಲಿನಿ, ಚಿನ್ಮಯಿ ಇತರೆ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಹಂದಿ ಮಾಲೀಕರು ಇದ್ದರು. ವಿವಿಧ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next