ದಾವಣಗೆರೆ: ಜಿಲ್ಲಾ ಕೇಂದ್ರ ದಾವಣಗೆರೆ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಸಿಡಿಲು, ಗುಡುಗುನಿಂದ ಕೂಡಿದ ಆಲಿಕಲ್ಲು ಮಳೆಯಾಗಿದೆ.
ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟಿ rಯಲ್ಲಿ ಕಣದಲ್ಲಿ ಕೆಲಸ ಮಾಡುತ್ತಿದ್ದ ಮಾಯಣ್ಣ (53) ಎಂಬುವರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಜೆ 6ಗಂಟೆ ಸಮಯದಲ್ಲಿ ಕೆಲ ಕಾಲ ಆಲಿಕಲ್ಲು ಮಳೆ ಸುರಿಯಿತು. ಬಹಳ ವರ್ಷಗಳ ನಂತರ ಆಲಿಕಲ್ಲು ಮಳೆ ಸುರಿದುದ್ದನ್ನ ಕಂಡು ಕೆಲವರು ರಸ್ತೆಗಳಿದು ಸಂಭ್ರಮಿಸಿದರು.
ಚನ್ನಗಿರಿಯಲ್ಲಿ ಹತ್ತು ನಿಮಿಷಗಳ ಕಾಲ ಜಿಟಿಜಿಟಿ ಮಳೆಯಾದರೆ ತಾಲೂಕಿನ ಹೊನ್ನನಾಯಕನಹಳ್ಳಿ, ಕಾರಿಗನೂರು ಕ್ರಾಸ್, ಕಾರಿಗನೂರು ಸುತ್ತಮುತ್ತ ಅರ್ಧ ಗಂಟೆಯವರೆಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ಹೊನ್ನಾಳಿ, ಜಗಳೂರು, ಹರಿಹರದಲ್ಲಿ ಗುಡುಗು, ಸಿಡಿಲು, ಗಾಳಿಯಿಂದಾಗಿ ದಟ್ಟ ಕಾರ್ಮೋಡ ಕವಿದು, ಧೂಳು ನಿರ್ಮಾಣವಾಯಿತು. ಹರಿಹರದಲ್ಲಿ ಕೆಲವೊತ್ತು ಗಾಳಿ-ಧೂಳಿಗೆ ವಿದ್ಯುತ್ ಸ್ಥಗಿತಗೊಂಡಿತ್ತು.
ಮಲೇಬೆನ್ನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಸಿಡಿಲು ಆರ್ಭಟದೊಂದಿಗೆ ಉತ್ತಮ ಮಳೆಯಾಗಿದೆ. ಮಾಯಕೊಂಡ ಹೋಬಳಿ ಗ್ರಾಮಗಳಲ್ಲಿ ಗುಡುಗು, ಮಿಂಚು ಹೆಚ್ಚಾಗಿದ್ದು, ಮಳೆ ಬರುವ ಮುನ್ಸೂಚನೆ ಕಂಡಬಂತು. ಕಳೆದ ಎರಡು ದಿನಗಳ ಹಿಂದೆ ಸ್ವಲ್ಪಮಟ್ಟಿಗೆ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿತ್ತು.
ದಾವಣಗೆರೆ ತಾಲೂಕಿನ ಕಡ್ಲೇಬಾಳು ಗ್ರಾಮದಲ್ಲಿ ಮಂಗಳವಾರ ಗ್ರಾಮದಲ್ಲಿ ಮಳೆಗಾಗಿ ಗಂಗಾಪೂಜೆ, ಗ್ರಾಮದ ದೇವರುಗಳಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕಾಕತಾಳಿಯೋ ಎನ್ನುವಂತೆ ಸಂಜೆ ಹೊತ್ತಿಗೆ ಮಳೆ ಸುರಿದಿದೆ.