Advertisement

ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಬೇಕಿದೆ

11:14 AM Mar 01, 2020 | Naveen |

ದಾವಣಗೆರೆ: ಅಪರೂಪದ ಕಾಯಿಲೆಗಳಿಂದ ನರಳುವ ರೋಗಿಗಳ ಸಂಕಷ್ಟಕ್ಕೆ ಮಿಡಿಯುವ ಶ್ರೀಮಂತ ಹೃದಯಗಳ ಅವಶ್ಯಕತೆ ಇದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದ್ದಾರೆ.

Advertisement

ಶನಿವಾರ, ನಗರದ ನಿಜಲಿಂಗಪ್ಪ ಬಡಾವಣೆಯ ರಿಂಗ್‌ ರೋಡ್‌ನ‌ಲ್ಲಿ ಹಿಮೋಫಿಲಿಯಾ ಸೊಸೈಟಿ ಬಳಿ ವಿಶ್ವ ವಿರಳ ರೋಗಿಗಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಾರ್ವಜನಿಕ ಅರಿವು ಅಭಿಯಾನ ರೇಸ್‌ ಫಾರ್‌ 7 ನಡಿಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವರು ಕೆಲವರಿಗೆ ಅಪರೂಪದ ಕಾಯಿಲೆ ಕೊಟ್ಟಿರುತ್ತಾನೆ. ಅಂತಹ ಕಾಯಿಲೆಗಳಿಂದ ನರಳುವವರಿಗೆ ಶ್ರೀಮಂತರು ಹೃದಯವಂತಿಕೆ ಮೆರೆಯುವ ಮೂಲಕ ನೆರವಿಗೆ ಧಾವಿಸಬೇಕಿದೆ ಎಂದರು.

ಇದು ಕೇವಲ ನಡಿಗೆಯಲ್ಲ, ಇದರಲ್ಲಿ ನಮ್ಮ ಜವಾಬ್ದಾರಿಯೂ ಸಹ ಇದೆ. ನಾಗರಿಕರಾಗಿ ಎಲ್ಲರಿಗೂ ಕರ್ತವ್ಯ ಇರಲಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ. ಎಲ್ಲರಿಗೂ ಒಂದೇ ತರಹದ ಕಷ್ಟಗಳು ಇರುವುದಿಲ್ಲ, ಅಪರೂಪದ ಕಾಯಿಲೆಗಳಿಂದ ನರಳುವವರ ಕಷ್ಟಕ್ಕೆ ಸ್ಪಂದಿಸುವ ಸಹೃದಯಿಗಳಿಗೆ ನನ್ನ ಕೃತಜ್ಞತೆಗಳು. ಕಷ್ಟಕ್ಕೆ ಒಳಗಾಗಿರುವ ಜನರಿಗೆ ಹಣ ಎಷ್ಟು ಮುಖ್ಯವೋ ಅವರ ಜತೆಯಾಗುವುದು ಅಷ್ಟೇ ಮುಖ್ಯ. ನಿಮ್ಮ ಸಂಕಷ್ಟಕ್ಕೆ ನಾನು ಹೆಗಲಾಗಿರುವೆ ಎಂದು ಭರವಸೆ ನೀಡಿದರು.

ನಟನೆ, ನೃತ್ಯ, ಹಾಡಿನ ಮೂಲಕವೇ ಕಾಲಕಳೆಯುತ್ತಿರುವ ನಮಗೆ ವಾಕಥಾನ್‌ ಆರಂಭಕ್ಕೆ ಚಾಲನೆ ನೀಡುವ ಸದಾವಕಾಶ ಸಿಕ್ಕಿರುವುದು ಸಹಾಯವಲ್ಲ, ಕರ್ತವ್ಯ ಎಂದು ಭಾವಿಸುವೆ. ಇಂತಹ ಸಂದರ್ಭ ಯಾವಾಗಲೂ ಬರುವುದಿಲ್ಲ, ಬಂದಾಗ ಬಳಸಿಕೊಳ್ಳಬೇಕು. ನನ್ನ ಸಹೋದ್ಯೋಗಿಗಳಿಗೂ ಇದನ್ನು ಹೇಳುತ್ತೇನೆ. ಯಾವುದೇ ಸಮಯದಲ್ಲೂ ಸಹಾಯಕ್ಕೆ ನಾನು ಸಿದ್ದ ಎಂದು ಹೇಳಿದರು.

ಭಾರತೀಯ ವಿರಳ ರೋಗಿಗಳ ಸಂಘಟನೆ ಸ್ಥಾಪಕ ಪ್ರಸನ್ನ ಶಿರೋಳ ಮಾತನಾಡಿ, ವಿಶ್ವದಲ್ಲಿ 7 ಸಾವಿರ ವಿರಳ ರೋಗಿಗಳಿದ್ದು, ಈ ಸಮುದಾಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿರಳ ರೋಗಗಳ ಬಗ್ಗೆ ಜನರಿಗಷ್ಟೇ ಅಲ್ಲ, ವೈದ್ಯರಿಗೂ ಈ ಬಗ್ಗೆ ಜಾಗೃತಿ ಕಡಿಮೆ ಇದೆ. ರೋಗಿಗಳಿಗೆ ಸಹಾಯ ಮಾಡುವುದಕ್ಕೆ ಸಮಾಜದಲ್ಲಿ ಬದಲಾವಣೆ ಅವಶ್ಯಕವಾಗಿದ್ದು, ಅದಕ್ಕಾಗಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ನಟ ವಿಜಯ ರಾಘವೇಂದ್ರ ಅವರನ್ನು ಹಿಮೋಫಿಲಿಯಾ ಸೊಸೈಟಿಯಿಂದ ಗೌರವಿಸಲಾಯಿತು. ಸಂಸದ ಜಿ.ಎಂ.ಸಿದ್ದೇಶ್ವರ್‌, ಮೇಯರ್‌ ಬಿ.ಜೆ.ಅಜಯಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಘವೇಂದ್ರಸ್ವಾಮಿ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಎಸ್‌ .ಬಿ.ಮುರುಗೇಶ್‌, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರಸಾದ್‌ ಬಿ.ಎಸ್‌, ಮಕ್ಕಳ ತಜ್ಞರಾದ ಎನ್‌.ಕೆ.ಕಾಳಪ್ಪನವರ್‌, ಆರ್‌.ಟಿ.ಅರುಣಕುಮಾರ್‌, ಕಿರುವಾಡಿ ಜಯಮ್ಮ ಡಾ.ಸುರೇಶ್‌ ಹನಗವಾಡಿ ಸೇರಿದಂತೆ ಮತ್ತಿತರರಿದ್ದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಹಾಗೂ ಭಾರತೀಯ ವಿರಳ ರೋಗಿಗಳ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ರೇಸ್‌ ಫಾರ್‌ 7 ಅಭಿಯಾನದಲ್ಲಿ ನಟ ವಿಜಯ ರಾಘವೇಂದ್ರ ಗಣ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಒಂದಷ್ಟು ದೂರ ಹೆಜ್ಜೆ ಹಾಕಿ, ಸ್ಫೂರ್ತಿ ತುಂಬಿದರು. ನಡಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಪಿಬಿ ರಸ್ತೆ ಮೂಲಕ ರೇಣುಕಾ ಮಂದಿರ, ಎವಿಕೆ ಕಾಲೇಜು ರಸ್ತೆ, ಸಿಜಿ ಆಸ್ಪತ್ರೆ, ಗುಂಡಿ ವೃತ್ತದ ಮೂಲಕ ಪುನಃ ಹಿಮೋಫಿಲಿಯಾ ಸೊಸೈಟಿ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next