Advertisement

ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸಿ

10:02 AM Jul 25, 2019 | Naveen |

ದಾವಣಗೆರೆ: ಸರ್ಕಾರದ ನಿಯಮಾವಳಿಗಳಂತೆ ಎಸ್‌.ಸಿ. ಮತ್ತು ಎಸ್‌.ಟಿ. ದೌರ್ಜನ್ಯದಡಿ ಕೇಸ್‌ ದಾಖಲಾಗಿ ಎಫ್‌ಐಆರ್‌ ನಂತರ ಶೇ.25, ಚಾರ್ಜ್‌ ಶೀಟ್ ಸಲ್ಲಿಕೆ ನಂತರ ಶೇ.50 ಹಾಗೂ ಕೇಸ್‌ ಮುಗಿದ ಬಳಿಕ ಸಲ್ಲಬೇಕಾದ ಪರಿಹಾರವನ್ನು ನಿಗದಿತ ಅವಧಿಯಲ್ಲಿ ಒದಗಿಸಿ ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬುಧವಾರ, ಜಿಲ್ಲಾಡಳಿತ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ 2ನೇ ತ್ರೈಮಾಸಿಕ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಆಧಾರಿತ ಪ್ರಕರಣಗಳು ದಾಖಲಾದ ನಂತರ ಆಯಾ ಕೇಸ್‌ಗಳಿಗೆ ತಕ್ಕಂತೆ ಮತ್ತು ಸರ್ಕಾರದ ನಿಯಮದ ಪ್ರಕಾರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು.

ಎಸ್‌.ಸಿ. ಮತ್ತು ಎಸ್‌.ಟಿ. ಜನಾಂಗದವರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಕುಂಬಾರ್‌, ಕಳೆದ ಜನವರಿಯಿಂದ ಜೂನ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು, 18 ಪ್ರಕರಣಗಳ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿವೆ. 6 ಪ್ರಕರಣಗಳು ತನಿಖೆ ಹಂತದಲ್ಲಿದ್ದು, 3 ಪ್ರಕರಣಗಳಲ್ಲಿ ಬಿ-ರಿಪೋರ್ಟ್‌ ಹಾಕಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ದಾಖಲಾದ ಪ್ರಕರಣಗಳಲ್ಲಿ 9 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಆದೇಶದಂತೆ ಎಫ್‌ಐಆರ್‌ ಮತ್ತು ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಶೇ. 50 ಪರಿಹಾರವನ್ನು ಒಟ್ಟಿಗೆ ನೀಡುವಂತೆ ಸೂಚಿಸಿದ್ದರಿಂದ ಅದರಂತೆ ನೀಡಲಾಗುತ್ತಿದೆ ಎಂದಾಗ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಸರ್ಕಾರದ ನಿಯಮಾಳಿಗಳಂತೆ ಪರಿಹಾರ ಒದಗಿಸಿ ಸಲಹೆ ನೀಡಿದರು.

ಸರ್ಕಾರಿ ಅಭಿಯೋಜಕ ಕೆಂಚಪ್ಪ, ಒಟ್ಟು 5 ಬಾಕಿ ಉಳಿದಿರುವ ಪ್ರಕರಣಗಳ ಹಿನ್ನಲೆ ತಿಳಿಸಿದಾಗ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ ಮಾತನಾಡಿ, ಬಾಕಿ ಇರುವ ಪ್ರಕರಣ ಬಗ್ಗೆ ಪರಿಶೀಲನೆ ನಡೆಸಿ, ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಎಸ್‌ಸಿ ಮತ್ತು ಎಸ್‌.ಟಿ. ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ಬಲವಂತವಾಗಿ ರಾಜೀಸಂಧಾನ ಹಾಗೂ ದೂರು ನೀಡದಂತೆ ಧಮ್ಕಿ ಹಾಕುವಂತ ಪ್ರಕರಣ ಕಂಡುಬಂದರೆ ಕೂಡಲೇ ಇಲಾಖೆ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಎಸ್‌.ಸಿ./ಎಸ್‌.ಟಿ. ಜಾಗೃತ ದಳದ ನಾಮ ನಿರ್ದೇಶನ ಸದಸ್ಯ ಆವರಗೆರೆ ಉಮೇಶ್‌ ಮಾತನಾಡಿ, ನಗರದ ಕೆ.ಟಿ.ಜೆ. ನಗರ ಹಾಗೂ ಹರಪನಹಳ್ಳಿಯ ಠಾಣೆಯಲ್ಲಿ ದಾಖಲಾದ ದೂರುಗಳ ಆರೋಪಿಗಳು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಎಸ್ಪಿಯವರಿಗೆ ಮನವಿ ಮಾಡಿದರು.

ನಗರದ 23ನೇ ವಾರ್ಡಿನ ಆವರಗೆರೆಯ ಸರ್ವೇ ನಂ. 321/1ಪಿ1 ರಲ್ಲಿ ಸರ್ಕಾರ 1.20 ಎಕರೆ ಜಮೀನು ಖರೀದಿಸಿ 74 ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಪಾಲಿಕೆಯವರು ಹೋದರೆ ಆ ಜಮೀನಿಗೆ ತೆರಳುವ ಮಾರ್ಗದಲ್ಲಿ ಕೆಲವರು ಅಡ್ಡಿಪಡಿಸುತ್ತಿದ್ದಾರೆ.

ಆವರಗೆರೆ ಸರ್ವೇ ನಂ.273/3 ರಲ್ಲಿ ಸರ್ಕಾರ ಜಮೀನು ಖರೀದಿಸಿ ವಿಶೇಷವಾಗಿ ಎಸ್‌.ಸಿ. ಮತ್ತು ಎಸ್‌.ಟಿ. ಸಮುದಾಯದವರಿಗೆ ನೀಡಿದೆ. ಅಲ್ಲೂ ರುದ್ರಭೂಮಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಜಮೀನು ಹದ ಮಾಡಿ ನಾಟಿ ಮಾಡಲಾಗಿದೆ. ಶವ ಸಾಗಿಸಲು ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆ ಗಮನ ಸೆಳೆದಾಗ. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಪರಿಶೀಲನೆ ನಡೆಸಿ ಮುಂದಿನ ಸಭೆಯ ವೇಳೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಮನೂರು ಹತ್ತಿರ ಎಸ್‌.ಸಿ. ಮತ್ತು ಎಸ್‌.ಟಿ. ಬಾಲಕಿಯರ ಹಾಸ್ಟೆಲ್ಗಳಿಗೆ ಬಸ್ಸಿನ ಸೌಕರ್ಯವಿಲ್ಲದೆ 2 ಕಿ.ಮೀ ನಡೆದು ಹೋಗಬೇಕಾಗಿದೆ. ಮಾರ್ಗ ಮಧ್ಯದಲ್ಲಿ ಯುವಕರು ಕ್ರಿಕೆಟ್ ಆಡುತ್ತಾರೆ. ಓಡಾಡುವ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಜೆ.ಎಚ್.ಪಟೇಲ್ ಬಡಾವಣೆಯ ತನಕ ಕೆ.ಎಸ್‌.ಆರ್‌.ಟಿ.ಸಿ. ನಗರ ಸಾರಿಗೆ ಬಸ್‌ ಸಂಚಾರಕ್ಕೆ ಕ್ರಮ ವಹಿಸಲು ಕೋರಿದಾಗ, ಜಿಲ್ಲಾಧಿಕಾರಿ ಶಿವಮೂರ್ತಿ, ದೂರವಾಣಿ ಮೂಲಕ ಕೆಎಸ್‌ಆರ್‌ಟಿಸಿ ಅಧಿಕಾರಿ ಜತೆ ಮಾತನಾಡಿ, ಬಸ್‌ಗಳು ಹಾಸ್ಟೆಲ್ ತನಕ ಸಂಚರಿಸಲು ಕ್ರಮ ವಹಿಸಲು ಸೂಚಿಸಿದರು.

ಹರಿಹರ ತಾಲೂಕು ಎಸ್‌.ಸಿ.-ಎಸ್‌.ಟಿ. ಜಾಗೃತ ದಳದ ನಾಮ ನಿರ್ದೇಶನ ಸದಸ್ಯ ಸುಭಾಶ್ಚಂದ್ರಬೋಸ್‌ ಮಾತನಾಡಿ, ಜಿಲ್ಲೆಯಾದ್ಯಂತ ಖಾಸಗಿ ಶಾಲೆಗಳಲ್ಲಿ ಎಸ್‌.ಸಿ. ಮತ್ತು ಎಸ್‌.ಟಿ. ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ತೆಗದುಕೊಳ್ಳಬಾರದು ಎಂಬ ಆದೇಶವಿದ್ದರೂ ಆ ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಖಾಸಗಿ ಶಾಲೆ-ಕಾಲೇಜುಗಳಿಗೆ ಪ್ರವೇಶ ಶುಲ್ಕ ಕಟ್ಟಿಸಿಕೊಳ್ಳದಂತೆ ಆದೇಶ ನೀಡುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ, ಸರ್ಕಾರದ ಆದೇಶ ಉಲ್ಲಂಘಿಸದಂತೆ ವಿಟಿಯು, ಡಿಡಿಪಿಯು, ಡಿಡಿಪಿಐ, ಐಟಿಐ, ಡಿಪ್ಲೊಮ, ಇಂಜಿನಿಯರಿಂಗ್‌ ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಚ್ಚರಿಸಲಾಗುವದು. ಸೂಚನೆ ಪಾಲಿಸದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಎಸ್‌.ಸಿ. ಮತ್ತು ಎಸ್‌.ಟಿ. ಹಾಸ್ಟೆಲ್ಗಳ ಮೂಲಭೂತ ಸೌಕರ್ಯ, ವಸತಿಯೋಜನೆಯಡಿ ಆಶ್ರಯ ಮನೆ, ಬ್ಯಾಂಕ್‌ ಕೆಲಸಗಳಲ್ಲಿ ವಿಳಂಬ, ಪೌರಕಾರ್ಮಿಕರ ಸಮಸ್ಯೆಗಳು ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next