Advertisement

ವೈ.ರಾಮಪ್ಪ ವಿರುದ್ಧ ಪ್ರತಿಭಟನೆಯ ಕಿಡಿ

12:59 PM Apr 26, 2019 | Naveen |

ದಾವಣಗೆರೆ: ಲಿಂಗಾಯತ ವೀರಶೈವ ಸಮಾಜ ಹಾಗೂ ಈಶ್ವರ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಲಿಂಗಾಯತ ವೀರಶೈವ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಅಂಬೇಡ್ಕರ್‌ ವೃತ್ತದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಯದೇವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಜಯದೇವ ವೃತ್ತದಲ್ಲಿ ಡಾ| ವೈ. ರಾಮಪ್ಪ ಪ್ರತಿಕೃತಿ, ಟೈರ್‌ ಸುಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೇರ್ಲಿಗೆ ಗ್ರಾಮದ ಬಸ್‌ ನಿಲ್ದಾಣದಲ್ಲಿ ಡಾ| ವೈ. ರಾಮಪ್ಪ ಲಿಂಗಾಯತ ವೀರಶೈವ ಸಮಾಜದವರನ್ನು ಅಶ್ಲೀಲವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಎಲ್ಲಾ ಸಂದರ್ಭದಲ್ಲಿ ನೀವೇ ರಾಜಕೀಯ ಮಾಡಬೇಕೇ, ನಿಮಗಷ್ಟೇ ಶಿವ-ಈಶ್ವರ ಇದ್ದಾನೆಯೇ ಹಾಗೂ ಈಶ್ವರ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರುವುದು ಅತ್ಯಂತ ಖಂಡನೀಯ ಎಂದು ದೂರಿದರು.

ಲಿಂಗಾಯತ ಸಮಾಜದ ಮುಖಂಡರಿಗೆ ಬೆದರಿಕೆ ಒಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಡಾ| ವೈ. ರಾಮಪ್ಪ ಹಿಂದೆಯೂ ಅನೇಕ ಬಾರಿ ಲಿಂಗಾಯತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಸಮಾಜದವರ ಮತಗಳ ಮೂಲಕವೇ ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದವರಿಗೆ ಸೇರಿದ ವಿದ್ಯಾಸಂಸ್ಥೆಯಲ್ಲೇ ಕೆಲಸ ಮಾಡಿರುವ ಡಾ| ರಾಮಪ್ಪ ಸಮಾಜದ ವಿರುದ್ಧವೇ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವುದು, ರಕ್ತಪಾತ ಆಗುತ್ತದೆ ಎಂಬ ಬೆದರಿಕೆ ಹಾಕಿರುವುದನ್ನು ಸಹಿಸಲಿಕ್ಕೆ ಆಗುವುದೇ ಇಲ್ಲ ಎಂದು ಎಚ್ಚರಿಸಿದರು.

Advertisement

ವೀರಶೈವ ಲಿಂಗಾಯತ ಸಮಾಜ ಎಲ್ಲಾ ಸಮಾಜದವರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಹೋಗುವ ಸಮಾಜ. ಯಾವ ಸಮಾಜದ ವಿರುದ್ಧವೂ ಹೋರಾಟ, ದ್ವೇಷ ಸಾಧಿಸಲು ಹೋಗುವುದಿಲ್ಲ. ಅಂತಹ ಶಾಂತಿಯುತ ಸಮಾಜದ ಬಗ್ಗೆ ಅಗೌರವ, ಅವಹೇಳನಕಾ ರಿಯಾಗಿ ಮಾತನಾಡುವುದನ್ನೂ ಸಹಿಸುವುದಿಲ್ಲ. ಹುತ್ತಕ್ಕೆ ಕೈ ಹಾಕಿದರೆ ಹಾವು ಬರುತ್ತದೆ. ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಮಾತನಾಡಿದರೆ ಬೇರೆಯದ್ದೇ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.

ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಜಾತಿ ನಿಂದನೆ ಮಾಡಿದ್ದಾರೆ ಎಂದು ಮಾಯಕೊಂಡ ಠಾಣೆಯಲ್ಲಿ ಜಾತಿನಿಂದನೆ ದೂರು ಸಹ ದಾಖಲಿಸಿದ್ದಾರೆ. ಕೂಡಲೇ ಡಾ| ವೈ. ರಾಮಪ್ಪ ದಾಖಲಿಸಿರುವ ಜಾತಿ ನಿಂದನೆ ಕೇಸ್‌ ವಾಪಸ್‌ ಪಡೆದು 24 ಗಂಟೆಯಲ್ಲಿ ಬಹಿರಂಗ ಕ್ಷಮೆ ಕೋರಬೇಕು. ಇಲ್ಲದೇ ಹೋದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವೇದಿಕೆಯ ಹೊನ್ನೂರು ಮುನಿಯಪ್ಪ, ದೇವರಮನೆ ಶಿವಕುಮಾರ್‌, ಬಸವರಾಜ್‌ ಶಿವಗಂಗಾ, ಹೆಮ್ಮನಬೇತೂರು ಶಶಿಧರ್‌, ಲೋಕಿಕೆರೆ ನಾಗರಾಜ್‌, ಚಿಕ್ಕನಹಳ್ಳಿ ಸುರೇಶ್‌, ಆಲೂರು ಚನ್ನಬಸಪ್ಪ, ರಮೇಶ್‌, ಅಣಬೇರು ಗಂಗಾಧರ, ಶ್ಯಾಗಲೆ ಜಯಕುಮಾರ್‌, ಸಿದ್ದೇಶ್‌, ಎಂ. ನಾಗರಾಜ್‌, ಸತೀಶ್‌, ಹೊನ್ನೂರು ವೀರೇಶ್‌, ನುಗ್ಗೇಹಳ್ಳಿ ರವಿಕುಮಾರ್‌, ಶ್ರೀನಿವಾಸ್‌, ದಾಕ್ಷಾಯಣಮ್ಮ, ಶೀಲಾಕುಮಾರಿ, ಸಾದಿಕ್‌ ಉಲ್ಲಾ ಖಾನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next