Advertisement

ಬಾಲ್ಯವಿವಾಹ ನಡೆಯದಂತೆ ಕ್ರಮ ವಹಿಸಿ

01:24 PM Jul 27, 2019 | Naveen |

ದಾವಣಗೆರೆ: ಬಾಲ್ಯವಿವಾಹಗಳೇ ನಡೆಯದಂತೆ ಆಂದೋಲನದ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿದ್ದಾರೆ.

Advertisement

ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005, ಸ್ವಾಧಾರ ಯೋಜನೆ, ಬಾಲ್ಯ ವಿವಾಹ ನಿಷೇಧ ಯೋಜನೆ, ಸ್ಥೈರ್ಯನಿಧಿ, ಮಹಿಳಾ ವಿಶೇಷ ಘಟಕ, ರಾಜ್ಯ ಮಹಿಳಾ ನಿಲಯ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂರಕ್ಷಣಾಧಿಕಾರಿ ಪೂರ್ಣಿಮಾ, ಜಿಲ್ಲೆಯಲ್ಲಿ ಕಳೆದ‌ ಜೂನ್‌ ಅಂತ್ಯಕ್ಕೆ ಒಟ್ಟು 35 ಬಾಲ್ಯ ವಿವಾಹ ಪ್ರಕರಣ ದಾಖಲಾಗಿವೆ. 33 ಬಾಲ್ಯ ವಿವಾಹ ತಡೆಗಟ್ಟಲಾಗಿದೆ. 2 ಬಾಲ್ಯ ವಿವಾಹ ನಡೆದಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ. 5 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರೆಸಲಾಗಿದೆ ಮಾಹಿತಿ ನೀಡಿದರು.

ಬಾಲ್ಯ ವಿವಾಹ ಜರುಗುತ್ತಿದೆ ಎಂಬ ಮಾಹಿತಿ ಮೇರೆಗೆ ಬಾಲ್ಯವಿವಾಹವನ್ನು ತಡೆಯುವುದಕ್ಕಿಂತ ಎಲ್ಲಿಯೂ ಬಾಲ್ಯವಿವಾಹಗಳೇ ಆಗದಂತೆ ಇಲಾಖೆ, ಸ್ವಯಂ ಸೇವಾ ಸಂಸ್ಥೆ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಸೂಚಿಸಿದರು.

ಹೆಚ್ಚಾಗಿ ಬಾಲ್ಯವಿವಾಹ ನಡೆಯುತ್ತವೆ ಎಂಬ ಪ್ರದೇಶ ಗುರುತಿಸಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು. ಬಾಲ್ಯ ವಿವಾಹ ಗುರುತಿಸಿ ಮಾಹಿತಿ ನೀಡಲು ಪ್ರೋತ್ಸಾಹಧನದ ಆಧಾರದಲ್ಲಿ ಸ್ಥಳೀಯರನ್ನೇ ನಿಯೋಜಿಸಿಕೊಳ್ಳಬಹುದು. ಪ್ರತಿ ಗ್ರಾಮದ ಪಂಚಾಯ್ತಿ ಸದಸ್ಯರು, ಮುಖ್ಯೋಪಾಧ್ಯಾಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯರನ್ನೊಳಗೊಂಡ ಸಮಿತಿ ರಚಿಸಿ ಜಾಗೃತಿ ಹಾಗೂ ಬಾಲ್ಯ ವಿವಾಹ ನಡೆಯದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಲ್ಲಿ ಬಾಲ್ಯವಿವಾಹ ಸಂಪೂರ್ಣ ತಡೆ ಸಾಧ್ಯವಾಗುತ್ತದೆ ಎಂದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್‌ ಮಾತನಾಡಿ, ಬಾಲ್ಯ ವಿವಾಹ ನಿಷೇಧದ ಕುರಿತು ಎಲ್ಲಾ ಕಡೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜಿಲ್ಲೆಯಲ್ಲಿ ದೌರ್ಜನ್ಯ, ಕೌಟುಂಬಿಕ ಹಿಂಸೆಯಂತಹ ಪ್ರಕರಣಗಳಡಿ ಒಟ್ಟು 24 ಪ್ರಕರಣ ದಾಖಲಾಗಿದ್ದು, 6 ಪ್ರಕರಣ ಡಿಎಆರ್‌ ಕೋರ್ಟಿನಲ್ಲಿವೆ. 8 ಪ್ರಕರಣಗಳನ್ನು ಇಲಾಖೆಯ ಸಂರಕ್ಷಣಾಧಿಕಾರಿ ಇತ್ಯರ್ಥಪಡಿಸಿದ್ದಾರೆ. ಕಾಯ್ದೆ ಪ್ರಕಾರ ಪ್ರಕರಣ ದಾಖಲಾದ 60 ದಿನಗಳಲ್ಲಿ ವಿಲೇವಾರಿ ಆಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್‌ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌.ಬಡಿಗೇರ್‌ ಮಾತನಾಡಿ, ನ್ಯಾಯಾಲಯಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳಿರುವುದರಿಂದ ಈ ರೀತಿಯ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದರು.

ಜೂನ್‌ ಅಂತ್ಯದವರೆಗೆ ಅತ್ಯಾಚಾರಕ್ಕೊಳಗಾದ 18 ವರ್ಷದೊಳಗಿನ ಮೂರು ಮಕ್ಕಳು ಹಾಗೂ 18 ರಿಂದ 35 ವರ್ಷದೊಳಗಿನವರ ಇಬ್ಬರು ಸೇರಿದಂತೆ ಒಟ್ಟು 5 ಪ್ರಕರಣ ದಾಖಲಿಸಲಾಗಿದೆ ಎಂದು ವಿಜಯ್‌ಕುಮಾರ್‌ ತಿಳಿಸಿದರು.

ಅತ್ಯಾಚಾರ ಮತ್ತು ಇತರೆ ದೌರ್ಜನ್ಯಕ್ಕೀಡಾದ ಹೆಣ್ಣುಮಕ್ಕಳಿಗೆ ನೀಡುವ ಸ್ಥೈರ್ಯನಿಧಿ ಯೋಜನೆಯಡಿ ನಿಗದಿತ ಸಮಯದೊಳಗೆ ನೀಡಲು ಅವಶ್ಯಕವಾದ ಎಫ್‌ಎಸ್‌ಎಲ್ ವರದಿಯನ್ನು ಬೇಗ ತರಿಸಿಕೊಂಡು ಶೀಘ್ರ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ನೀಲಾಂಬಿಕೆ, ಬಾಲಕರ ಸರ್ಕಾರಿ ಬಾಲ ಭವನದ ಅಧೀಕ್ಷಕ ಮಹಾಂತಸ್ವಾಮಿ ವಿ.ಪೂಜಾರ್‌, ಬಾಲಕಿಯರ ಸರ್ಕಾರಿ ಬಾಲ ಭವನದ ಅಧೀಕ್ಷಕಿ ವೈ.ಆರ್‌. ಯಶೋಧಮ್ಮ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮನಾಯ್ಕ, ವಕೀಲೆ ಮಂಜುಳಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next