ದಾವಣಗೆರೆ: ಅಂಗವಿಕಲರು ಎಲ್ಲರಂತೆ ಘನತೆ, ಗೌರವ, ಸ್ವಾತಂತ್ರ್ಯದಿಂದ ಬಾಳಬೇಕು. ಅವರಿಲ್ಲದೆ ಅಭಿವೃದ್ಧಿಯನ್ನು ಊಹಿಸಲೂ ಅಸಾಧ್ಯ. ಅಂಗವಿಕಲರ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಕಲಚೇತನರ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಎಚ್ಚರಿಸಿದ್ದಾರೆ.
ಶುಕ್ರವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯ್ಕಕ್ಷತೆ ವಹಿಸಿ ಮಾತನಾಡಿದ ಅವರು, ಅಂಗವಿಕಲರು ಒಂದಿಲ್ಲ ಒಂದು ರೀತಿಯ ಸಮಸ್ಯೆ ಹೊಂದಿರುತ್ತಾರೆ. ಅವರ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು, ಸ್ಪಂದಿಸುವುದು ಅಧಿಕಾರಿಗಳ ಜವಾಬ್ದಾರಿ. ಆ ಜವಾಬ್ದಾರಿ ನಿರ್ವಹಿಸದವರ ವಿರುದ್ಧ ಆಯೋಗ ಅನಿವಾರ್ಯವಾಗಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಆಗದಂತೆ ಕೆಲಸ ಮಾಡಬೇಕು ಎಂದರು.
ದಾವಣಗೆರೆ ಜಿಲ್ಲೆಯಲ್ಲಿ 50 ಸಾವಿರದಷ್ಟು ಅಂಗವಿಕಲರಿದ್ದಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಎಲ್ಲರ ಜವಾಬ್ದಾರಿ. ಅವರು ಘನತೆಯಿಂದ ಬಾಳಬೇಕು ಎನ್ನುವುದಾದರೆ ಕನಿಷ್ಟ ಪಕ್ಷ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ಆದರೆ, ಅನೇಕ ಕಡೆ ಅಂತಹ ಸೌಲಭ್ಯ ಇಲ್ಲ. ತುಂಗಭದ್ರಾ ಸಭಾಂಗಣದಲ್ಲೇ ರ್‍ಯಾಂಪ್ ವ್ಯವಸ್ಥೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭಿಕರಲ್ಲಿ ಕೆಲವರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲೂ ರ್‍ಯಾಂಪ್ ಇಲ್ಲ. ಎಸ್ಪಿ ಅವರನ್ನು ಕಾಣಬೇಕಾದರೆ ನೀವೇ ಮೇಲಕ್ಕೆ ಹೋಗಬೇಕು ಎನ್ನುತ್ತಾರೆ. ಅಂಗವಿಕಲರು ಮೇಲಕ್ಕೆ ಹೋಗಲಿಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು. ನೀವು ಏಕೆ ಅಲ್ಲಿಗೆ ಹೋಗಬೇಕು. ಅವರನ್ನೇ ನಿಮ್ಮ ಹತ್ತಿರ ಕರೆಸಿ ಎಂದು ಬಸವರಾಜು ತಿಳಿಸಿದರು.
ಅಪರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಲ್. ಭೀಮಾನಾಯ್ಕ, ಜಿಲ್ಲಾಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಭ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಸಹಾಯಕ ಆಯುಕ್ತ ಪದ್ಮನಾಭ್, ಜಿ.ಎಸ್. ಶಶಿಧರ್ ಇತರರು ಇದ್ದರು.