Advertisement
ಕೇಂದ್ರ ಸರ್ಕಾರದ ಅತೀ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆಯ ಪ್ರಥಮ ಹಂತದಲ್ಲೇ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಈಗಿರುವ ಖಾಸಗಿ ಬಸ್ ನಿಲ್ದಾಣ ಜಾಗದಲ್ಲೇ ಸ್ಮಾರ್ಟ್ ಸಿಟಿಗೆ ಅನುಗುಣವಾಗಿ 25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ, ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.
Related Articles
Advertisement
ಏನೇನು ವಿಶೇಷ…?: ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಖಾಸಗಿ ಬಸ್ ನಿಲ್ದಾಣ ಜಿ+2 ಮಾದರಿಯಲ್ಲಿ ಇರಲಿದೆ. ಬಸ್ ತಂಗುವ ಸ್ಥಳದಿಂದ ಹಿಡಿದು ಪ್ರತಿಯೊಂದು ಹಂತದಲ್ಲಿ ಅಕ್ಷರಶಃ ಸ್ಮಾರ್ಟ್ ಆಗಲಿದೆ. ಉದ್ದೇಶಿತ ನೂತನ ಖಾಸಗಿ ಬಸ್ ನಿಲ್ದಾಣದ ಸೆಲ್ಲಾರ್‌ನಲ್ಲಿ ಏಕ ಕಾಲಕ್ಕೆ 80 ರಿಂದ 100ರ ವರೆಗೆ ಬೈಕ್, ಕಾರು ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ಗ್ರೌಂಡ್ ಫ್ಲೋರ್‌ನಲ್ಲಿ 11-12 ಬಸ್ ನಿಲ್ಲಿಸಲು ಅಗತ್ಯ ಸ್ಥಳಾವಕಾಶ ಇರಲಿದೆ. ಮೊದಲ ಮಹಡಿಯಲ್ಲಿ ಸಾರ್ವಜನಿಕ ಶೌಚಾಲಯ, ವಾಣಿಜ್ಯ ಸಂಕೀರ್ಣ ತಲೆ ಎತ್ತಲಿವೆ. ಎರಡನೇ ಮಹಡಿಯಲ್ಲಿ ಶಾಪಿಂಗ್ ಮಾಲ್ಗಳು ಇರಲಿವೆ.
ಖಾಸಗಿ ಬಸ್ ನಿಲ್ದಾಣದ ಚಾವಣಿಯಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಪ್ರಯಾಣಿಕರಿಗೆ ಸುಸಜ್ಜಿತ ಆಸನ, ವಯಸ್ಸಾದವರು, ಇತರರಿಗೆ ಅನುಕೂಲ ಆಗುವಂತೆ ವಾಕಿಂಗ್ ಪಾಥ್ ಸೌಲಭ್ಯ ಒದಗಿಸಲಾಗುವುದು. ಒಟ್ಟಾರೆಯಾಗಿ ಇನ್ನು ಮುಂದೆ ದಾವಣಗೆರೆಯಲ್ಲಿ ಖಾಸಗಿ ಬಸ್ ನಿಲ್ದಾಣ ಸ್ಮಾರ್ಟ್ ಆಗಿರಲಿದೆ.
ತಾತ್ಕಾಲಿಕ ಬಸ್ ನಿಲ್ದಾಣ: ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ 2.9 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದೆ.
ಬಸ್ ನಿಂತುಕೊಳ್ಳಲು ಸುಸಜ್ಜಿತ ಜಾಗದ ಜತೆಗೆ 10×10 ಅಡಿ ಸುತ್ತಳೆಯ 99 ಮಳಿಗೆಗಳು, ಪ್ರಯಾಣಿಕರ ಆನುಕೂಲಕ್ಕಾಗಿ ಶೌಚಾಲಯ, ನೆರಳು, ತಂಗುದಾಣ, ಒಳಗೊಂಡಂತೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಮಳಿಗೆಗಳ ನಿರ್ಮಾಣ ಮುಗಿದು, ಬಸ್ ನಿಲ್ಲುವ ಜಾಗದಲ್ಲಿ ಪೇವರ್ ಅಳವಡಿಸಲಾಗುತ್ತಿದೆ. ಎಲ್ಲಾ ಕೆಲಸ ಮುಗಿಸಿದ ನಂತರ ಸಂಬಂಧಿತರಿಗೆ ಹಸ್ತಾಂತರಿಸಲಾಗುವುದು. ಆ ನಂತರವೇ ತಾತ್ಕಾಲಿಕ ಖಾಸಗಿ ಬಸ್ ನಿಲ್ದಾಣ ಕಾರ್ಯಾರಂಭ ಪ್ರಾರಂಭ.
ಬಡಾವಣಾ ಪೊಲೀಸ್ ಠಾಣಾ ರಸ್ತೆಯ ಮೂಲಕ ಬಸ್ ನಿಲ್ದಾಣ ಪ್ರವೇಶಿಸುವ ಬಸ್‌ಗಳು ಎ.ವಿ. ಕಮಲಮ್ಮ ಮಹಿಳಾ ಕಾಲೇಜು ರಸ್ತೆಯ ಮೂಲಕ ವಿವಿಧ ಕಡೆಗೆ ತೆರಳಲಿವೆ.
ಒಟ್ಟಾರೆಯಾಗಿ ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದೊಂದೇ ಕೆಲಸ ಜನರ ಕಣ್ಣಿಗೆ ಕಾಣುವಂತಾಗುತ್ತಿದೆ.
ಮಾದರಿ ಬಸ್ ನಿಲ್ದಾಣಖಾಸಗಿ ಬಸ್ ನಿಲ್ದಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಈಗಿರುವ ಖಾಸಗಿ ಬಸ್ ನಿಲ್ದಾಣ ಹೈಸ್ಕೂಲ್ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಸ್ಥಳಾಂತರವಾಗುತ್ತಿದ್ದಂತೆಯೇ ಕಾಮಗಾರಿ ಪ್ರಾರಂಭವಾಗಲಿದೆ. ಇರುವಂತಹ ಕಡಿಮೆ ಜಾಗದಲ್ಲೇ ಅತ್ಯಾಧುನಿಕ, ಮಾದರಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಯೋಜನೆ ಕಾರ್ಯಪಾಲಕ ಅಭಿಯಂತರ ಗುರುಪಾದಯ್ಯ. ರಾ.ರವಿಬಾಬು