ದಾವಣಗೆರೆ: ಕಳೆದ ಬಾರಿ ಮಳೆಯಿಂದ ಹಾನಿಗೊಳಗಾದ ಬೆಳೆನಷ್ಟ ಪರಿಹಾರ ಇನ್ನೂ ಬಂದಿಲ್ಲ. ಮತ್ತೆ ಈ ಸಲವೂ ಕೈ ಬಂದಿದ್ದ ಬೆಳೆ ಹಾಳಾಗಿದೆ. ನಮಗೆ ಆದಷ್ಟು ಬೇಗ ಪರಿಹಾರ ಕೊಡಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಗೆ ರೈತನೋರ್ವ ಮನವಿ ಮಾಡಿದ್ದಾರೆ.
ಭಾರಿ ಮಳೆಗೆ ಹಾನಿಗೊಳಗಾದ ಮನೆಗಳು, ಬೆಳೆ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಗಾನಹಳ್ಳಿಯ ರೈತ ಬಿ.ತುಕಾರಾಂ, ನಮ್ಮ ಮೂವರು ಸಹೋದರರ ಒಟ್ಟು 8 ಎಕರೆ ಭತ್ತದ ಗದ್ದೆಯಲ್ಲಿನ ಭತ್ತ ಹಾಳಾಗಿದೆ. ಈ ಹಿಂದಿನ ಬೆಳೆಯೂ ಈ ಹಂತಕ್ಕೆ ಬಂದಾಗ ಇದೇ ಪರಿಸ್ಥಿತಿ ಸಂಭವಿಸಿ, ಆ ಬೆಳೆಯೂ ಕೈಗೆ ಸಿಗಲಿಲ್ಲ. ಆ ಬೆಳೆಯ ಪರಿಹಾರವೂ ಬಂದಿಲ್ಲ. ಹಾಗಾಗಿ 2 ಬೆಳೆಯ ಪರಿಹಾರವನ್ನು ಆದಷ್ಟು ಬೇಗ ನೀಡುವಂತೆ ಅಧಿಕಾರಿಗಳ ತಂಡಕ್ಕೆ ಮನವಿ ಮಾಡಿದರು.
ಇದಕ್ಕೂ ಮುನ್ನ ಅಧಿಕಾರಿಗಳು ಮಳೆಯಿಂದ ಹಾನಿಗೊಳಗಾದ ದಾವಣಗೆರೆ ತಾಲೂಕಿನ ಪುಟಗನಾಳ್, ಕಡ್ಲೆಬಾಳು ತಾಂಡದಲ್ಲಿನ ಮನೆಗಳ ಪರಿಶೀಲಿಸಿದರು. ಪುಟಗನಾಳ್ ಗ್ರಾಮದ ನಾಗರಾಜನಾಯ್ಕ ಎಂಬುವರ ಮನೆ ಸಂಪೂರ್ಣ ಕುಸಿದು ಪೀರಿಬಾಯಿ ಎಂಬುವರು ಸಾವನ್ನಪ್ಪಿದ್ದು, ಅವರ ವಾರಸುದಾರರಿಗೆ ಆದಷ್ಟು ಬೇಗ ಪರಿಹಾರ ನೀಡಿ ಎಂದು ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು. ಆಗ, ಜಿಲ್ಲಾ ಧಿಕಾರಿ ಮಹಾಂತೇಶ ಜಿ. ಬೀಳಗಿ, ಅವರ ಬ್ಯಾಂಕ್ ಮಾಹಿತಿ ಪಡೆದು, ಆರ್.ಟಿ.ಜಿ.ಎಸ್. ಮುಖಾಂತರ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪುಟಗನಾಳ್ ಗ್ರಾಮಸ್ಥರು, ಸ್ಮಶಾನ ಜಾಗದ ಸಮಸ್ಯೆಯಿದ್ದು ಕೂಡಲೇ ಜಾಗ ಒದಗಿಸುವಂತೆ ಉಸ್ತುವಾರಿ ಕಾರ್ಯದರ್ಶಿಗಳಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು, ಈಗಾಗಲೇ ಒಂದು ಎಕರೆ ಜಮೀನು ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಜಾಗ ನೀಡಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದಾಗ, ಗ್ರಾಮಸ್ಥರು ಒಂದು ಎಕರೆ ಜಾಗ ಸಾಕಾಗುವುದಿಲ್ಲ. ಕನಿಷ್ಠ 2 ಎಕರೆ ನೀಡಬೇಕೆಂದು ಮನವಿ ಮಾಡಿದರು. ನಂತರ ಕಡ್ಲೆಬಾಳು ತಾಂಡಾದ ಭೀಮಾನಾಯ್ಕ ಮತ್ತು ಲಕ್ಷ್ಮೀಬಾಯಿ ಎಂಬುವವರ ಭಾಗಶಃ ಕುಸಿದಿರುವ ಮನೆಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮಾಗಾನಹಳ್ಳಿಯಲ್ಲಿ ತೆನೆ ಹಂತಕ್ಕೆ ಬಂದು ರಭಸದ ಮಳೆಗೆ ಬಿದ್ದಿರುವ ಭತ್ತದ ಗದ್ದೆಗಳನ್ನು ವೀಕ್ಷಿಸಿದರು.
ದಾವಣಗೆರೆ ನಗರದ ಶಂಕರ ವಿಹಾರ ಬಡಾವಣೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮಳೆ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು. ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.