Advertisement

ಮಾಧ್ಯಮ ಕ್ಷೇತ್ರ ಸೆಲ್ಫ್ ಸೆನ್ಸಾರ್‌ಶಿಪ್‌ಗೆ ಮುಂದಾಗಲಿ

01:32 PM Jul 29, 2019 | Naveen |

ದಾವಣಗೆರೆ: ಸಮಾಜದ ಘನತೆ, ವೃತ್ತಿ ಪ್ರಾಮಾಣಿಕತೆ, ಸತ್ಯಸಂಧತೆ ಕಾಪಾಡಿಕೊಳ್ಳುವಂತ ಸನ್ನಿವೇಶದ ನಡುವೆ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ಕ್ಷೇತ್ರ ಸ್ವಯಂ ಕಡಿವಾಣಕ್ಕೆ ಮುಂದಾಗಬೇಕಿದೆ ಎಂದು ಹಿರಿಯ ಪತ್ರಕರ್ತ ಎಚ್. ಗಿರೀಶ್‌ ರಾವ್‌(ಜೋಗಿ) ಆಶಿಸಿದ್ದಾರೆ.

Advertisement

ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ನಡೆದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಕ್ಕೆ ಇರುವಂತಹ ಸ್ವೇಚ್ಛೆಯ ವಾತಾವರಣದ ನಡುವೆಯೂ ಸತ್ಯಸಂಧತೆ, ವೃತ್ತಿಯಲ್ಲಿನ ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು. ಈಗಾಗಲೇ ಹೊರಗಿನಿಂದ ಕಡಿವಾಣ ಹಾಕುವ ಮಾತು ಕೇಳಿ ಬರುತ್ತಿವೆ. ಹೊರಗಿನವರು ಕಡಿವಾಣ ಹಾಕುವ ಮುನ್ನವೇ ಸೆಲ್ಫ್ ಸೆನ್ಸಾರ್‌ಶಿಪ್‌ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಪತ್ರಿಕೋದ್ಯಮ ಕೃತಜ್ಞರಹಿತ ವೃತ್ತಿ. ಪತ್ರಕರ್ತರ ಸ್ಥಿತಿ-ಗತಿ, ಸಮಸ್ಯೆ ಅವರಿಗೇ ಗೊತ್ತು. ಆದರೂ, ಮಾಧ್ಯಮದವರನ್ನು ಒಂದು ರೀತಿಯಲ್ಲಿ ನೋಡಲಾಗುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಪತ್ರಕರ್ತರಿಗೆ ಮನೆ ಕಟ್ಟಿಕೊಳ್ಳಲಿಕ್ಕೂ ಆಗದ ಸ್ಥಿತಿ ಇದೆ. ಹಿರಿಯ ಪತ್ರಕರ್ತ ಟಿ.ಜೆ. ಜಾರ್ಜ್‌ ಹೇಳುವಂತೆ, ಪತ್ರಕರ್ತರ ಸ್ಥಿತಿ ಯಾವಾಗಲೂ ತ್ರಿಶಂಕು ಸ್ಥಿತಿ. ಸುದ್ದಿ ಬರೆದು, ಪ್ರಕಟಿಸಿದ ನಂತರದ ಪರಿಣಾಮಕ್ಕೆ ಪತ್ರಕರ್ತರು ಜವಾಬ್ದಾರಿ ಆಗದಂತಹ ಸ್ಥಿತಿ ಇದೆ ಎಂದು ತಿಳಿಸಿದರು.

ರೋಚಕ, ಸ್ಫೋಟಕ ಸುದ್ದಿ ನೀಡುವಂತಹ ಸದಾ ಹಪಾಹಪಿಯ ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ಅಂತಹ ಸನ್ನಿವೇಶದ ನಡುವೆಯೂ ಸಮುದಾಯದ ಘನತೆ, ವೃತ್ತಿಯ ಪ್ರಾಮಾಣಿಕತೆ ಕಾಪಾಡಲೇಬೇಕು. ಸಮಾಜದ ಘನತೆ ಕಾಪಾಡದೇ ಹೋದಲ್ಲಿ ವೃತ್ತಿಯ ತಳಪಾಯವೇ ಕುಸಿಯುತ್ತದೆ ಎಂದು ಎಚ್ಚರಿಸಿದರು.

ಇಂದಿನ ಒತ್ತಡ, ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಸುದ್ದಿಯ ದಾಹ, ಮೋಹ, ರಭಸದ ನಡುವೆ ಪ್ರಗತಿಶೀಲ, ಅಭಿವೃದ್ಧಿ ಪತ್ರಿಕೋದ್ಯಮ ಮೂಲ ಮರೆಯಾಗುತ್ತಿದೆ. ರಾಷ್ಟ್ರ ನಿರ್ಮಾಣದ ಬದಲಿಗೆ ಪಕ್ಷ ನಿರ್ಮಾಣದ ಕೆಲಸ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರ ಮುಂದೆ ಸಾಕಷ್ಟು ಕಷ್ಟ ಹಾಗೂ ಸವಾಲುಗಳಿವೆ. ಸತ್ಯವನ್ನು ನುಡಿಯಲಾಗದ ಚೇತನಗಳ… ಎನ್ನುವ ವಾತಾವರಣ ಇದೆ. ರಾಜಕಾರಣಿಗಳೊಂದಿಗೆ ಸಂಪರ್ಕ ಇರಬೇಕೇ ಹೊರತು ಸಂಬಂಧ ಇರಬಾರದು. ಮಾಧ್ಯಮಗಳ ವರದಿಯೇ ಸುಳ್ಳು ಎಂಬುದಾಗಿ ಬಿಂಬಿಸುವ ಕೆಲಸವೂ ನಡೆಯುತ್ತಿದೆ. ಏನೇ ಆದರೂ ವೃತ್ತಿ ಪ್ರಾಮಾಣಿಕತೆ, ಸತ್ಯಸಂಧತೆ ಬಿಟ್ಟುಕೊಡಬಾರದು. ಸಮುದಾಯದ ಘನತೆ ಕಾಪಾಡುವ ಜೊತೆಗೆ ರಾಷ್ಟ್ರ ನಿರ್ಮಾಣದ ಅಭ್ಯುದಯ ಚಿಂತನೆಯ ಹಾದಿಯಲ್ಲಿ ಮುನ್ನಡೆಯುವಂತಾಗಬೇಕು ಎಂದು ಆಶಿಸಿದರು.

Advertisement

ಪ್ರಜಾಪ್ರಗತಿ… ಸಂಪಾದಕ ಎಸ್‌. ನಾಗಣ್ಣ ಮಾತನಾಡಿ, ಮಾಧ್ಯಮ ನಮಗೆ ಗೊತ್ತಿಲ್ಲದಂತೆ ಸೇವಿಸುವಂತಹ ಅವ್ಯಕ್ತ ಆಹಾರ. ಹಾಗಾಗಿ ಮಾಧ್ಯಮ ಲೋಕದಲ್ಲಿರುವರು ಸುದ್ದಿಯ ವಿಚಾರ ಮಂಥನ ಮಾಡಬೇಕು. ಆದರೆ, ಅಂತಹ ವಾತಾವರಣ ಕಂಡು ಬರುತ್ತಿಲ್ಲ. ಮಾಧ್ಯಮ ಕ್ಷೇತ್ರದಲ್ಲಿನ ಅನೇಕರು ಭ್ರಮಾಲೋಕದಲ್ಲಿ ಇದ್ದಾರೆ. ಪತ್ರಿಕೋದ್ಯಮಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಮಾಧ್ಯಮ ಸದಾ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪತ್ರಿಕೋದ್ಯಮದ ಮೂಲ ಆಶಯವೇ ಕಾಣೆಯಾಗುತ್ತಿದೆ. ಹುಳುಕಿನ ಸತ್ಯ ಹೊರಗೆ ತರಲಾರದ ಸ್ಥಿತಿ ಇದೆ. ಸಾಕಷ್ಟು ಸ್ಪರ್ಧೆ, ಸಮಸ್ಯೆಗಳ ನಡುವೆಯೂ ಗುಣಾತ್ಮಕತೆ, ಪ್ರಾಮಾಣಿಕತೆ ಹಾದಿಯಲ್ಲಿ ಸಾಗಬೇಕು. ಸತ್ಯಾಸತ್ಯತೆಯನ್ನು ಬಯಲಿಗೆ ತರುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಧ್ಯಮ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೈಗಾರಿಕೋದ್ಯಮಿ ಅಥಣಿ ಎಸ್‌. ವೀರಣ್ಣ ಮಾತನಾಡಿ, ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ಕೆಲಸ ಮಾಡಬೇಕು. ಜಿಲ್ಲಾ ವರದಿಗಾರರ ಕೂಟ ಬೇಗ ನಿವೇಶನ ಹೊಂದುವಂತಾಗಲಿ ಎಂದರು.

ಸುವರ್ಣ ವಾಹಿನಿ ಡಿಜಿಟಲ್ ಮುಖ್ಯಸ್ಥ ಶ್ಯಾಮಸುಂದರ್‌ ಮಾತನಾಡಿ, ಜಿಲ್ಲಾ ವರದಿಗಾರರ ಕೂಟದ ಉತ್ತಮ ಕೆಲಸ ಸದಾ ಮುಂದುವರೆಯಲಿ ಎಂದು ಆಶಿಸಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಎಸ್‌. ಬಡದಾಳ್‌ ಪ್ರಾಸ್ತಾವಿಕ ಮಾತುಗಳಾಡಿದರು. ಸಂಸ್ಥ್ಫಾಪಕ ಅಧ್ಯಕ್ಷ ಕೆ. ಏಕಾಂತಪ್ಪ, ಖಜಾಂಚಿ ಎ.ಎಲ್. ತಾರಾನಾಥ್‌, ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ನಾಗರಾಜ್‌ ಇತರರು ಇದ್ದರು.

ಸೌಮ್ಯ ಸತೀಶ್‌, ಮಮತಾ ಪ್ರಾರ್ಥಿಸಿದರು. ಎನ್‌.ಆರ್‌. ನಟರಾಜ್‌ ಸ್ವಾಗತಿಸಿದರು. ದೇವಿಕಾ ಸುನೀಲ್ ನಿರೂಪಿಸಿದರು. ಮಂಜುನಾಥ್‌ ಕಾಡಜ್ಜಿ ವಂದಿಸಿದರು.

ಸಂಯುಕ್ತ ಕರ್ನಾಟಕದ ಮುಖ್ಯ ವರದಿಗಾರ ಮಂಜುನಾಥ್‌ ಗೌರಕ್ಕಳ್ಳವರ್‌, ಟಿವಿ-9 ಜಿಲ್ಲಾ ವರದಿಗಾರ ಬಸವರಾಜ್‌ ದೊಡ್ಮನಿ, ಆಕಾಶವಾಣಿ ವರದಿಗಾರ ಕೆ.ಎಸ್‌. ಚನ್ನಬಸಪ್ಪ, ಹಿರಿಯ ಛಾಯಾಗ್ರಾಹಕ ವಿವೇಕ್‌ ಎಲ್. ಬದ್ಧಿ, ರಾಜ್‌ ನ್ಯೂಸ್‌ ಕ್ಯಾಮೆರಾಮನ್‌ ಸಿ.ಎಸ್‌. ಶ್ಯಾಮ್‌ಗೆ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next