Advertisement

ಲೋಕ ಸಮರ: ಮತ ಎಣಿಕೆಗೆ ಸಕಲ ಸಿದ್ಧತೆ

10:46 AM May 22, 2019 | Team Udayavani |

ದಾವಣಗೆರೆ: ಗುರುವಾರ (ಮೇ 23) ನಡೆಯುವ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್ ಹಾಗೂ ವಿವಿ ಪ್ಯಾಟ್ ಚೀಟಿಗಳ ಎಣಿಕೆಗೆ ಪ್ರತ್ಯೇಕ ಒಂದು ಟೇಬಲ್ ಸೇರಿ 15 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 8 ವಿಧಾನಸಭಾ ಕ್ಷೇತ್ರಕ್ಕೆ ಒಟ್ಟಾರೆಯಾಗಿ 120 ಟೇಬಲ್, ತಲಾ 120 ಮತ ಎಣಿಕಾ ಮೇಲ್ವಿಚಾರಕರು, ಮತ ಎಣಿಕಾ ಸಹಾಯಕರು, ಮೈಕ್ರೋ ವೀಕ್ಷಕರು ಹಾಗೂ 16 ಜನ ಕಾಯ್ದಿರಿಸಿದ ಸಿಬ್ಬಂದಿ ಸೇರಿ 376 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಮತ ಎಣಿಕಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.

ಅಂಚೆ ಮತಪತ್ರ ಎಣಿಕೆಗಾಗಿಯೇ ತಲಾ ಓರ್ವ ಸಹಾಯಕ ಚುನಾವಣಾಧಿಕಾರಿ, ಮೇಲ್ವಿಚಾರಕ, ಇಬ್ಬರು ಮತ ಎಣಿಕೆ ಮೇಲ್ವಿಚಾಕರು, ಮತ ಎಣಿಕೆ ಸಹಾಯಕರು, ಮೈಕ್ರೋ ವೀಕ್ಷಕರು ಸೇರಿ 8 ಜನರ ನಿಯೋಜನೆ ಮಾಡಲಾಗಿದೆ. ಇಟಿಪಿಬಿಎಸ್‌ ಎಣಿಕೆಗಾಗಿ ಇಬ್ಬರು ಸಹಾಯಕ ಚುನಾವಣಾಧಿಕಾರಿ, ಓರ್ವ ಮೇಲ್ವಿಚಾರಕ, ತಲಾ ನಾಲ್ವರು ಮತ ಎಣಿಕೆ ಮೇಲ್ವಿಚಾಕರು, ಮತ ಎಣಿಕೆ ಸಹಾಯಕರು, ಮೈಕ್ರೋ ವೀಕ್ಷಕರು ಸೇರಿ 15 ಜನರ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 4,047 ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್‌ ಮೂಲಕ 598 ಸೇವಾ ಮತದಾರರಿಗೆ ಮತ ಚಲಾವಣೆಗ ಪತ್ರ ಕಳಿಸಿಕೊಡಲಾಗಿತ್ತು. ಮೇ 21ರ ವರೆಗೆ 2,190 ಅಂಚೆ ಮತಪತ್ರ, 382 ಇಟಿಪಿಬಿಎಸ್‌ ಮತ ಪತ್ರಗಳು ಸ್ವೀಕೃತವಾಗಿವೆ. ಮೇ 23ರ ಬೆಳಗ್ಗೆ 8ರ ವರೆಗೆ ಸ್ವೀಕೃತವಾಗುವ ಅಂಚೆ ಹಾಗೂ ಇಟಿಪಿಬಿಎಸ್‌ ಮತ ಪತ್ರಗಳನ್ನ ಮಾತ್ರ ಮತ ಎಣಿಕೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆಯ ಲಾಗುವುದು. 8ಕ್ಕೆ ಚುನಾವಣಾಧಿಕಾರಿಗಳ ಟೇಬಲ್ನಲ್ಲಿ ಅಂಚೆ ಮತಪತ್ರ ಎಣಿಕೆ ಪ್ರಾರಂಭವಾಗಲಿದೆ. 8.30ಕ್ಕೆ ಆಯಾಯ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಎಣಿಕಾ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

Advertisement

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು 5 ವಿವಿ ಪ್ಯಾಟ್‌ಗಳನ್ನು ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆಯಾದ ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನ ಒಂದಾದ ನಂತರ ಒಂದರಂತೆ ಎಣಿಕೆ ಮಾಡಲಾಗುವುದು. ಮತ ಎಣಿಕೆ ಪ್ರಗತಿಯನ್ನ ಸುತ್ತುವಾರು ಸುವಿಧ… ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಮತ ಕ್ಷೇತ್ರದ ಮತ ಎಣಿಕೆ, ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್‌ ಮತ ಎಣಿಕಾ ಸಂಪೂರ್ಣ ಪ್ರಕ್ರಿಯೆಯನ್ನ ವೀಡಿಯೋಗ್ರಫಿ ಮಾಡಲಾಗುವುದು. ಮತ ಎಣಿಕಾ ಕಾರ್ಯದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. 144 ಸೆಕ್ಷನ್‌ ಜಾರಿಗೊಳಿಸಲಾಗಿದೆ. ಶಾಂತಿಯುತ ವಾತಾವರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಇತರರು ಇದ್ದರು.

ಮೊಬೈಲ್ ಗೆ ಅವಕಾಶವಿಲ್ಲ
ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್‌ ಉಪಕರಣ, ಸಿಗರೇಟು, ಬೆಂಕಿಪೊಟ್ಟಣ, ತಂಬಾಕು ಉತ್ಪನ್ನಗಳು, ಯಾವುದೇ ವಿನಾಶಕಾರಿ ವಸ್ತುಗಳನ್ನು ತರುವಂತೆಯೇ ಇಲ್ಲ. ಒಂದೊಮ್ಮೆ ಮೊಬೈಲ್ ತಂದಲ್ಲಿ ವಿಶ್ವವಿದ್ಯಾಲಯ ಮುಖ್ಯ ಗೇಟ್ ಬಳಿ ಮೊಬೈಲ್ ಕೇಂದ್ರದಲ್ಲಿ ಕೊಟ್ಟು ಸ್ವೀಕೃತಿ ಪಡೆಯಬೇಕು. ಮತ ಎಣಿಕಾ ಕಾರ್ಯ ಮುಗಿದ ನಂತರವೇ ಸ್ವೀಕೃತಿಪತ್ರ ಸಲ್ಲಿಸಿ, ಮೊಬೈಲ್ ವಾಪಸ್‌ ಪಡೆದುಕೊಳ್ಳಬೇಕಾಗುತ್ತದೆ. ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿ.ಎನ್‌. ಶಿವಮೂರ್ತಿ ತಿಳಿಸಿದರು.

ಸಂಜೆ ವೇಳೆಗೆ ಫಲಿತಾಂಶ
ಅಂಚೆ ಮತ ಪತ್ರ, ಇಟಿಪಿಬಿಎಸ್‌ (ಸೇವಾ ಮತದಾರರ ಮತ ಪತ್ರ) ಎಣಿಕೆ ಮುಕ್ತಾಯದ ನಂತರ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕಾ ಕಾರ್ಯ ಬೆಳಗ್ಗೆ 8.30ಕ್ಕೆ ಪ್ರಾರಂಭವಾಗಲಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರತಿ ವಿಧಾನ ಸಭಾ ಕ್ಷೇತ್ರವಾರು 5 ವಿವಿ ಪ್ಯಾಟ್‌ಗಳನ್ನು ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆಯಾದ ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನ ಒಂದಾದ ನಂತರ ಒಂದರಂತೆ ಎಣಿಕೆ ಮಾಡಬೇಕಾಗುವುದರಿಂದ ಸಂಜೆ ವೇಳೆಗೆ ಅಂತಿಮ ಫಲಿತಾಂಶ ಲಭ್ಯವಾಗಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದರು.

15 ಟೇಬಲ್, 376 ಸಿಬ್ಬಂದಿ
ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್ ಹಾಗೂ ವಿವಿ ಪ್ಯಾಟ್ ಚೀಟಿಗಳ ಎಣಿಕೆಗೆ ಪ್ರತ್ಯೇಕ ಒಂದು ಟೇಬಲ್ ಸೇರಿ 15 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 8 ವಿಧಾನಸಭಾ ಕ್ಷೇತ್ರಕ್ಕೆ ಒಟ್ಟಾರೆಯಾಗಿ 120 ಟೇಬಲ್, ತಲಾ 120 ಮತ ಎಣಿಕಾ ಮೇಲ್ವಿಚಾರಕರು, ಮತ ಎಣಿಕಾ ಸಹಾಯಕರು, ಮೈಕ್ರೋ ವೀಕ್ಷಕರು ಹಾಗೂ 16 ಜನ ಕಾಯ್ದಿರಿಸಿದ ಸಿಬ್ಬಂದಿ ಸೇರಿ 376 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಮತ ಎಣಿಕಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದರು.

ಶೇ.72.94 ಮತದಾನ
ಕಳೆದ ಏ.23ರಂದು ನಡೆದ ಚುನಾವಣೆಯಲ್ಲಿ ಶೇ.72.94ರಷ್ಟು ಮತದಾನವಾಗಿದೆ. 8,24,331 ಪುರುಷರು, 8,10,400 ಮಹಿಳೆಯರು ಹಾಗೂ 129 ಇತರರು ಒಳಗೊಂಡಂತೆ ಒಟ್ಟು 16,34,860 ಮತದಾರರಲ್ಲಿ 11,92,162 ಮತದಾರರು 1,949 ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next