Advertisement

ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಕಲ ಸಿದ್ಧತೆ ಕೈಗೊಳ್ಳಿ

10:28 AM Jun 07, 2019 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಜೂನ್‌ 8,9 ಮತ್ತು 16ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ-ಎಫ್‌ಡಿಎ) ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಭಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

Advertisement

ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಕುರಿತು ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ತಲುಪಲು ಆಹ್ಲಾದಕರ ವಾತಾವರಣ ಸೃಷ್ಟಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸುವಂತೆ ತಿಳಿಸಿದರು.

ಅಭ್ಯರ್ಥಿಗಳು ಕೈಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. ಪ್ರವೇಶ ಪತ್ರದೊಂದಿಗೆ ಭಾವಚಿತ್ರವಿರುವ ಯಾವುದಾದರೂ ಗುರುತಿನ ಚೀಟಿ (ಆಧಾರ್‌, ಚುನಾವಣಾ ಗುರುತಿನ ಚೀಟಿ, ಡಿಎಲ್) ಯನ್ನು ಕಡ್ಡಾಯವಾಗಿ ತರಬೇಕು ಎಂದು ಅವರು ಹೇಳಿದರು.

ಪರೀಕ್ಷೆ ವೇಳೆಯಲ್ಲಿ ಮಾರ್ಗ ಅಧಿಕಾರಿ, ವೀಕ್ಷಕರು ಸೇರಿದಂತೆ ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯವನ್ನು ನಿಯಮಾನುಸಾರ ಪಾಲಿಸಬೇಕು. ಕೊಠಡಿ ಮೇಲ್ವಿಚಾರಕರು ಕೂಡ ಯಾವುದೇ ಕಾರಣಕ್ಕೂ ಕೊಠಡಿಯೊಳಗೆ ಮೊಬೈಲ್ ಕೊಂಡೊಯ್ಯುವಂತಿಲ್ಲ ಎಂದ ಅವರು,

ಪರೀಕ್ಷೆ ನಡೆಯುವ ವೇಳೆ ಬೆಲ್ಲಿಂಗ್‌ ಸಮಯ ಪಾಲಿಸಿ, ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸದಂತೆ ಕ್ರಮವಹಿಸಿ ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಮಾತನಾಡಿ, ಜೂ. 8 ರಂದು ಎಸ್‌ಡಿಎ ಮತ್ತು ಎಫ್‌ಡಿಎ ಸಹಾಯಕರ ಹುದ್ದೆಗಳ ವಿವರಣಾತ್ಮಕ ಪ್ರಶ್ನೆ ಪತ್ರಿಕೆ ಪರೀಕ್ಷೆ ಬೆಳಿಗ್ಗೆ 10 ರಿಂದ 11.30ರ ವರೆಗೆ ಜಿಲ್ಲೆಯ 3 ಕೇಂದ್ರಗಳಲ್ಲಿ ಹಾಗೂ ಜೂ.9ರಂದು ಜಿಲ್ಲೆಯ 23 ಕೇಂದ್ರಗಳಲ್ಲಿ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯು ಬೆಳಿಗ್ಗೆ 10 ರಿಂದ 11.30 ರವರೆಗೆ ಹಾಗೂ ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲಿಷ್‌ ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯು ಮಧ್ಯಾಹ್ನ 2 ರಿಂದ 3.30ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.

ಜೂ. 16ರಂದು ಜಿಲ್ಲೆಯ 37 ಕೇಂದ್ರಗಳಲ್ಲಿ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯು ಬೆಳಿಗ್ಗೆ 10 ರಂದು 11.30ರವರೆಗೆ ಹಾಗೂ ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲಿಷ್‌ ವಸ್ತುನಿಷ್ಠ ಬಹು ಆಯ್ಕೆ ಪರೀಕ್ಷೆ ಮಧ್ಯಾಹ್ನ 2 ರಿಂದ 3.30ರ ವರೆಗೆ ನಡೆಯಲಿದೆ. ಅಭ್ಯರ್ಥಿಗಳಿಗೆ ಆಸನ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಪರೀಕ್ಷೆ ಹಿಂದಿನ ದಿನ, ಪರೀಕ್ಷಾ ದಿನ ಮತ್ತು ಪರೀಕ್ಷಾ ನಂತರ ದಿನದಂದು ಮೇಲ್ವಿಚಾರಕರು, ಪರಿವೀಕ್ಷಕರು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿ ಕೆ.ಎನ್‌. ತಮ್ಮಣ್ಣ ಮಾತನಾಡಿ, ಜೂನ್‌ 8 ರಂದು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಒಟ್ಟು 1,411 ಅಭ್ಯರ್ಥಿಗಳು, 9ರಂದು 27 ಕೇಂದ್ರಗಳಲ್ಲಿ ಒಟ್ಟು 16,456 ಅಭ್ಯರ್ಥಿಗಳು ಹಾಗೂ 16 ರಂದು 37 ಕೇಂದ್ರಗಳಲ್ಲಿ ಒಟ್ಟು 15,814 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳು ಯಶಸ್ವಿಯಾಗಿದ್ದು, ಅದೇ ರೀತಿ ಈ ಪರೀಕ್ಷೆಗಳನ್ನು ನಡೆಸುವಂತೆ ತಿಳಿಸಿದರು.

ದೃಷ್ಟಿದೋಷವುಳ್ಳ ಅಭ್ಯರ್ಥಿಗಳಿಗೆ ಜಿಲ್ಲೆಯ ಪರೀಕ್ಷಾ ಕೇಂದ್ರ ಸಂಖ್ಯೆ-01 (ಜಿ.ಎಂ.ಹಾಲಮ್ಮ ಪಿಯು ಕಾಲೇಜ್‌)ರಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಜೂ.9 ಹಾಗೂ 16 ರಂದು ನಡೆಯುವ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಹಾಜರಾಗಲಿದ್ದು, ಅಂದು 2ನೇ ಅವಧಿಯಲ್ಲಿ ನಡೆಯುವ ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್‌ ಪತ್ರಿಕೆಗಳ ಕೋಡ್‌ ಸಂಖ್ಯೆಯನ್ನು ಓ.ಎಂ.ಆರ್‌.ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಇಲ್ಲದಿದ್ದಲ್ಲಿ ಅಂತಹ ಓ.ಎಂ.ಆರ್‌ಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅಭ್ಯರ್ಥಿಗಳಿಗೆ ಮನದಟ್ಟು ಮಾಡಲು ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿದರು.

ಸಭೆಯಲ್ಲಿ ಸಾರ್ವಜನಿಕ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್‌.ಪರಮೆಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಉಪಸ್ಥಿತರಿದ್ದರು.

ಮೊಬೈಲ್ ನಿಷೇಧ
ಮೊಬೈಲ್ ಫೋನ್‌, ಬ್ಲೂಟೂತ್‌ ಡಿವೈಸ್‌, ಡಿಜಿಟಲ್ ವಾಚ್, ಪೇಜರ್‌, ವೈರ್‌ಲೆಸ್‌ ಕ್ಯಾಲ್ಕ್ಯೂಲೇಟರ್‌ ಮೊದಲಾದ ಎಲೆಕ್ಟ್ರಾನಿಕ್‌ ಸಂಬಂಧಿತ ಉಪಕರಣಗಳನ್ನು ಪರೀಕ್ಷಾ ಆವರಣದಲ್ಲಿ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಪ್ರವೇಶ ಕೇಂದ್ರದೊಳಗೆ ಆಯೋಗದಿಂದ ನೀಡಲಾಗುವ ಆನ್‌ಲೈನ್‌ ಪ್ರವೇಶಪತ್ರ ಮತ್ತು ಅಭ್ಯರ್ಥಿಗಳ ಭಾವಚಿತ್ರವಿರುವ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು, ತಪ್ಪಿದ್ದಲ್ಲಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶವನ್ನು ನೀಡಲಾಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿ ಕೆ.ಎನ್‌. ತಮ್ಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next