Advertisement

ನಿಂತೀತೇ ಪಿಒಪಿ ಗಣೇಶ ಹಾವಳಿ?

10:10 AM Jul 19, 2019 | Naveen |

ರಾ.ರವಿಬಾಬು
ದಾವಣಗೆರೆ:
ಬಹಳ ವರ್ಷದಿಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ನಿಲ್ಲಿಸುತ್ತೇವೆ ಎಂದು ಹೇಳುತ್ತಲೇ ಬರಲಾಗುತ್ತಿದೆ. ಆದರೆ, ಇವತ್ತಿಗೂ ಹಾವಳಿ ನಿಂತಿಲ್ಲ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮಾರಾಟವನ್ನು ಈ ವರ್ಷವಾದರೂ ಸಂಪೂರ್ಣವಾಗಿ ನಿಲ್ಲಿಸಿ, ಮಣ್ಣಿನಲ್ಲಿ ಗಣೇಶನ ಮಾಡುವ ಕುಟುಂಬದವರಿಗೆ ಅನುಕೂಲ ಮಾಡಿಕೊಡಬೇಕು…

Advertisement

ಇದು ತಲತಲಾಂತರದಿಂದ ಗಣೇಶನ ವಿಗ್ರಹ ತಯಾರಿಸುವ ದಾವಣಗೆರೆಯ ಕಾಯಿಪೇಟೆಯ ಜಿ. ಚಂದ್ರಶೇಖರ್‌ ಕುಟುಂಬದವರ ಒಕ್ಕೊರಲಿನ ಮನವಿ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳ ಮಾರಾಟ ನಿಲ್ಲಿಸಬೇಕು ಎಂಬುದು ಚಂದ್ರಶೇಖರ ಕುಟುಂಬ ಮಾತ್ರವಲ್ಲ, ಗಣೇಶ ಮೂರ್ತಿಗಳ ತಯಾರಿಕೆಯನ್ನೇ ಜೀವನ ನಿರ್ವಹಣೆಗೆ ಆಧರಿಸಿರುವಂತಹ ಅನೇಕ ಕುಟುಂಬಗಳ ಮನವಿ.

ತಾತ, ಮುತ್ತಾತ ಕಾಲದಿಂದಲೂ ನಮ್ಮ ಮನೆಗಳಲ್ಲಿ ಮಣ್ಣಿನ ಗಣೇಶನ ಮಾಡಿ, ಮಾರಾಟ ಮಾಡಿಕೊಂಡು ಅದರಲ್ಲೇ ಜೀವನ ನಡೆಸಿಕೊಂಡು ಬರುತ್ತಿದ್ದೇವೆ. ಗಣೇಶ ಹಬ್ಬ 3-4 ತಿಂಗಳು ಇರುವಾಗಲೇ, ಸರಿ ಸುಮಾರು ಯುಗಾದಿ ಹಬ್ಬದ ನಂತರ ಮನೆಯವರು ಎಲ್ಲರೂ ಗಣೇಶನನ್ನು ಮಾಡುವುದರಲ್ಲಿ ತೊಡಗುತ್ತೇವೆ. ಒಂದು ಗಣೇಶ ಮೂರ್ತಿ ಸಂಪೂರ್ಣವಾಗಿ ಸಿದ್ಧಪಡಿಸುವುದಕ್ಕೆ ತಿಂಗಳುಗಟ್ಟಲೇ ಕೆಲಸ ಮಾಡುತ್ತೇವೆ ಎಂದು ಚಂದ್ರಶೇಖರಪ್ಪ ತಮ್ಮ ಕೆಲಸದ ಬಗ್ಗೆ ಹೇಳುತ್ತಾರೆ.

ಇಡೀ ಕುಟುಂಬದವರು ತಿಂಗಳುಗಟ್ಟಲೆ ಗಣೇಶನ ಮೂರ್ತಿಗಳನ್ನು ಮಾಡಿದರೆ. ಅರ್ಧ, ಮುಕ್ಕಾಲು ಭಾರೀ ಅಂದರೆ ಒಂದು ಗಂಟೆಯೊಳಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನನ್ನು ಮಾಡಲಾಗುತ್ತದೆ. ರಬ್ಬರ್‌ ಟೈಪ್‌ ಮೌಲ್ಡ್ನಲ್ಲಿ ಗಣೇಶನ ಮೂರ್ತಿ ಮಾಡಿ, ಸ್ವಲ್ಪ ಹೊತ್ತು ಬಿಟ್ಟು , ಪೇಂಟಿಂಗ್‌ ಮಾಡುತ್ತಾರೆ. ಆದರೆ, ನಮ್ಮದು ಹಾಗಲ್ಲ. ಪೇಂಟಿಂಗ್‌ ಮಾಡಬೇಕು ಎನ್ನುವುದಾದರೆ ತಿಂಗಳುಗಟ್ಟಲೆ ಕಾಯುತ್ತೇವೆ ಎಂದು ಅಪ್ಪಟ ಮಣ್ಣಿನ ಗಣೇಶನ ವಿಗ್ರಹ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನ ಮೂರ್ತಿಗಳು ತಯಾರಿಕೆಯ ವ್ಯತ್ಯಾಸದ ಬಗ್ಗೆ ತಿಳಿಸುತ್ತಾರೆ.

Advertisement

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನ ಮೂರ್ತಿಗಳು ಬಹಳ ಕಡಿಮೆ ತೂಕ ಹೊಂದಿರುತ್ತವೆ. 10-12 ಅಡಿ ಎತ್ತರದ ಗಣೇಶನ ಮೂರ್ತಿಗಳನ್ನು 3-4 ಜನರು ಆರಾಮವಾಗಿ ಎತ್ತಿಕೊಂಡು ಹೋಗಬಹುದು. ಮಣ್ಣಿನ ಗಣೇಶನನ್ನ ಬಹಳ ಅಂದರೆ 10 ಅಡಿಯವರೆಗೆ ಮಾಡಬಹುದು. ಅವುಗಳನ್ನ ತೆಗೆದುಕೊಂಡು ಹೋಗಲಿಕ್ಕೆ ಬಹಳ ಜನ ಬೇಕಾಗುತ್ತಾರೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಲೈಟ್ವೈಟ್, ಅಟ್ರ್ಯಾಕ್ಷನ್‌ ಆಗಿ ಇರುತ್ತವೆ… ಎನ್ನೋ ಕಾರಣಕ್ಕೆ ಜನರು ಇಷ್ಟ ಪಡುತ್ತಾರೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳಿಂದ ನಮಗೆ ಕಷ್ಟವಾಗುತ್ತಿದೆ. ಹಾಗಾಗಿ ಅವುಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಾರೆ.

ನಿಜಕ್ಕೂ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡುವುದೇ ಶ್ರೇಷ್ಠ. ಅದಕ್ಕೆ ಸಂಸ್ಕಾರ ಸಿಕ್ಕುತ್ತದೆ. ಯಾಕೆಂದರೆ ಗಣೇಶ ಮೂಡಿ ಬಂದಿದ್ದೇ ಜೇಡಿಮಣ್ಣಿನಿಂದ. ಹಾಗಾಗಿ ಮಣ್ಣಿನ ಗಣೇಶ ಶ್ರೇಷ್ಠ ಎಂಬ ಭಾವನೆ ಇದೆ. ಅದಕ್ಕೆ ಈಗಲೂ ಕೆಲವರು ಮಣ್ಣಿನ ಗಣೇಶನನ್ನೇ ಕೂರಿಸುತ್ತಾರೆ. ಷೋಕೇಸ್‌ಗಳಲ್ಲಿ ಇಡುವ ಗೊಂಬೆ ತಯಾರಿಕೆಗೆಂದು ಬಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನನ್ನು ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನ ಪೂಜೆ ಮಾಡುವುದು ಶ್ರೇಷ್ಠವಲ್ಲ. ಆದರೂ, ಕೆಲವಾರು ಕಡೆ ಅದೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎನ್ನುತ್ತಾರೆ ಚಂದ್ರಶೇಖರ್‌.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳ ಮಾರಾಟದಿಂದ ನಮ್ಮಂತಹ ಕುಟುಂಬಗಳಿಗೆ ಸಾಕಷ್ಟು ಅನ್ಯಾಯ ಆಗುತ್ತದೆ. ನಾವು ತಿಂಗಳುಗಟ್ಟಲೆ ಗಣೇಶ ಮಾಡಿದರೆ. ಒಂದರೆಡು ಗಂಟೆಯಲ್ಲಿ ತಯಾರಾಗುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳನ್ನೇ ಜನ ಹೆಚ್ಚು ಇಷ್ಟಪಡುವುದರಿಂದ ಅವುಗಳ ಮಾರಾಟವೇ ಹೆಚ್ಚಾಗುತ್ತದೆ. ಅದರಿಂದ ನಮ್ಮಂತಹ ನೂರಾರು ಜನರಿಗೆ ತೊಂದರೆ ಆಗುತ್ತದೆ. ಏಕೆಂದರೆ ನಾವೆಲ್ಲ ಜೀವನ ನಡೆಸಲು ನಂಬಿಕೊಂಡಿರುವುದೇ ಮಣ್ಣಿನ ಗಣೇಶ ಮಾರಾಟವನ್ನ. ಹಾಗಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎನ್ನುತ್ತಾರೆ ಚಂದ್ರಶೇಖರ್‌ ಪುತ್ರ ಬಸವರಾಜ್‌.

ಗಣೇಶ ಹಬ್ಬಕ್ಕೆ ಮುಂಚೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳ ತಡೆಯ ಬಗ್ಗೆ ಭಾರೀ ಮಾತನಾಡುವ ಅಧಿಕಾರಿಗಳು ಈ ಬಾರಿಯಾದರೂ ಸಂಪೂರ್ಣವಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿ ಹಾವಳಿ ತಡೆಯಬಲ್ಲರೆ ಎಂಬುದಕ್ಕೆ ವಿಘ್ನ ವಿನಾಯಕನೇ ಉತ್ತರಿಸುವಂತಾಗಿದೆ.

ಪಿಒಪಿ ಗಣೇಶ ವಶ
2017ರಲ್ಲಿ 60-70, 2018ರಲ್ಲಿ ಜಗಳೂರು ತಾಲೂಕಿನ ಬಿದರಕೆರೆ ಇತರೆಡೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ವಿಗ್ರಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ವರ್ಷ ಸೆ.2 ರಂದು ಗಣೇಶೋತ್ಸವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಂಡಗಳನ್ನು ರಚಿಸಿ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳ ತಡೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತವೆ ಪರಿಸರ ಇಲಾಖೆ ಮೂಲಗಳು.
ಜಾಗೃತಿ ಅಭಿಯಾನ
ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿ ಹಾವಳಿ ತಡೆಗೆ ಸಾರ್ವಜನಿಕರು, ಶಾಲಾ-ಕಾಲೇಜು ಒಳಗೊಂಡಂತೆ ಅನೇಕ ಕಡೆ ಜಾಗೃತಿ ಮೂಡಿಸಲಾಗುತ್ತಿದೆ. ಹಬ್ಬ ಇನ್ನೂ 2-3 ದಿನಗಳು ಇರುವಾಗ ಮುಂಬೈ, ಹುಬ್ಬಳ್ಳಿ, ಕೊಲ್ಲಾಪುರ, ಪುಣೆ ಇತರೆ ಕಡೆಯಿಂದ ಗ್ರಾಮೀಣ ಭಾಗಗಳಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿ ಡಂಪ್‌ ಮಾಡುತ್ತಾರೆ. ಹಬ್ಬದ ಹಿಂದಿನ ದಿನ ಮಣ್ಣಿನ ಗಣಪನ ಜೊತೆಗೆ ಸೇರಿಸಿಕೊಂಡು ತಂದು ಮಾರಾಟ ಮಾಡುತ್ತಾರೆ. ಅದನ್ನ ನಿಲ್ಲಿಸಬೇಕು. ದೇವರ ವಿಷಯ ಎನ್ನುವ ಕಾರಣಕ್ಕೆ ಅಷ್ಟೊಂದು ಕ್ರಮ ತೆಗೆದುಕೊಳ್ಳಲಿಕ್ಕೆ ಹೋಗುವುದಿಲ್ಲ. ಆದರೂ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿ ಹಾವಳಿ ತಡೆಗೆ ಜಾಗೃತಿ ಮೂಡಿಸಲಾಗುವುದು.
ಗಿರೀಶ್‌ ಎಸ್‌. ದೇವರಮನೆ, ಅಧ್ಯಕ್ಷರು,
ಪರಿಸರ ಸಂರಕ್ಷಣಾ ವೇದಿಕೆ.
Advertisement

Udayavani is now on Telegram. Click here to join our channel and stay updated with the latest news.

Next