Advertisement

ಪಿಂಚಣಿದಾರರ ಸಮಸ್ಯೆ ನಿವಾರಿಸಿ

10:34 AM Aug 24, 2019 | Team Udayavani |

ದಾವಣಗೆರೆ: ಪಿಂಚಣಿದಾರರ ಸಮಸ್ಯೆ, ಕುಂದುಕೊರತೆ ನಿವಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ ಹಾಗೂ ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿಋಣ ನಿರ್ವಹಣೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಬ್ಯಾಂಕುಗಳು ಸಭೆಗಳಲ್ಲಿ ನಿವೃತ್ತ ನೌಕರರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ಹಿರಿಯ ನಾಗರಿಕರು ಹಾಗೂ ನಿವೃತ್ತ ಸರ್ಕಾರಿ ನೌಕರರು ಬ್ಯಾಂಕ್‌, ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರನ್ನು ಮಾತಾಡಿಸಿ, ಸಮಸ್ಯೆ ಆಲಿಸಿ ಶೀಘ್ರವಾಗಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ಸುಶ್ರುತಶಾಸ್ತ್ರಿ ಮಾತನಾಡಿ, ಎಲ್ಲಾ ಬ್ಯಾಂಕ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಒಟ್ಟಾಗಿ ಪಿಂಚಣಿದಾರರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬಹುದಾಗಿದೆ. ನಾವೆಲ್ಲರೂ ಸೇರಿ ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸೋಣ ಎಂದರು.

ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಯಪ್ಪ ಮಾತನಾಡಿ, ಆರ್ಥಿಕ ಇಲಾಖೆಯ 2019ರ ಜನವರಿ ಆದೇಶದಲ್ಲಿ ತಿಳಿಸಿರುವಂತೆ ಎಸ್‌ಬಿಐ, ಸಿಂಡಿಕೇಟ್, ಕೆನರಾ, ಕಾರ್ಪೊರೇಷನ್‌, ವಿಜಯ ಬ್ಯಾಂಕ್‌ ಖಾತೆಗಳಲ್ಲಿ ಮಾತ್ರ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಿದೆ. ಹಾಗಾಗಿ ಪಿಂಚಿಣಿದಾರರು ಆ ಬ್ಯಾಂಕುಗಳಲ್ಲೇ ಖಾತೆ ತೆರೆಯುವಂತೆ ತಿಳಿಸಿದರು.

Advertisement

ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಯದೇವಯ್ಯ ಮಾತನಾಡಿ, ಎಸ್‌ಬಿಐ ಬ್ಯಾಂಕ್‌ನಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ. ನಿವೃತ್ತ ನೌಕರರಾದ ಎಚ್.ಎಸ್‌. ವಿಶ್ವನಾಥ್‌ 2019 ರ ಜೂ. 4 ರಂದು ನಿಧನರಾಗಿದ್ದು, ಅವರ ಪತ್ನಿ ಅನಸೂಯಮ್ಮ ಹೆಗ್ಡೆ ಬ್ಯಾಂಕಿಗೆ ತೆರಳಿ ತಮ್ಮ ಪತಿ ನಿಧನರಾಗಿರುವ ಬಗ್ಗೆ ಮಾಹಿತಿ ನೀಡಿ ಅವರ ಖಾತೆಯಲ್ಲಿರುವ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಹಾಗೂ ಕುಟುಂಬ ಪಿಂಚಣಿಯನ್ನು ನೀಡುವಂತೆ ದಾಖಲೆಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಎಸ್‌.ಬಿ.ಐ ಬ್ಯಾಂಕ್‌ ಮ್ಯಾನೇಜರ್‌ ಪ್ರತಿಕ್ರಿಯಿಸಿ, ಅದನ್ನು ಪರಿಶೀಲಿಸಿ, ಸರಿಪಡಿಸಿ ಕೊಡುವುದಾಗಿ ತಿಳಿಸಿದರು.

ನಿವೃತ್ತ ನೌಕರ ಗೋವಿಂದಪ್ಪ ಮಾತನಾಡಿ, ಬ್ಯಾಂಕ್‌ನಲ್ಲಿ ವ್ಯವಹರಿಸಲು ಒಂದೇ ಕೌಂಟರ್‌ ಇರುವುದರಿಂದ ನಿವೃತ್ತ ನೌಕರರಿಗೆ ಸರತಿ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ಅಧಿಕಾರಿಗಳಿಗೆ ನಮ್ಮ ಸಮಸ್ಯೆಗಳನ್ನು ಕೇಳುವಷ್ಟು ವ್ಯವಧಾನವಿರುವುದಿಲ್ಲ. ಅದಕ್ಕಾಗಿ 1 ರಿಂದ 10 ರವರೆಗೆ ನಿವೃತ್ತ ನೌಕರರರಿಗಾಗಿ ಇನ್ನೊಂದು ಕೌಂಟರ್‌ ತೆರೆಯುವಂತೆ ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಬ್ಯಾಂಕ್‌ನಲ್ಲಿ ನಿವೃತ್ತರಿಗಾಗಿ ಇನ್ನೊಂದು ಕೌಂಟರ್‌ ತೆರೆಯಲು ಸಿಬ್ಬಂದಿ ಕೊರತೆಯಿದೆ. ಹಾಗಾಗಿ ಟೋಕನ್‌, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪಿಂಚಣಿದಾರರು ಹೆಚ್ಚಾಗಿರುವ ಕಡೆಗಳಲ್ಲಿ ಅವರಿಗಾಗಿಯೇ ಒಂದು ಕೌಂಟರ್‌ ತೆರೆಯಲು ತಿಳಿಸಲಾಗುವುದು. ಪಿಂಚಣಿದಾರರರಿಗೆ ಮೊದಲ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಸುಶ್ರುತಶಾಸ್ತ್ರಿ ತಿಳಿಸಿದರು.

ದಾವಣಗೆರೆ ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌, ಜಿಲ್ಲಾ ಖಜಾನೆ ಅಧಿಕಾರಿ ರಾಜಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next