Advertisement

ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 12,000 ರೂ.

11:26 AM Dec 07, 2019 | Naveen |

„ಎನ್‌.ಆರ್‌.ನಟರಾಜ್‌
ದಾವಣಗೆರೆ:
ಶುಕ್ರವಾರ ದಾವಣಗೆರೆ ಮಾರುಕಟ್ಟೆ ಇತಿಹಾಸದಲ್ಲೇ ಈರುಳ್ಳಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆಗೆ ನಾಂದಿ ಹಾಡಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊಲ್‌ಸೇಲ್‌ ದರ ಕ್ವಿಂಟಾಲ್‌ ಈರುಳ್ಳಿಗೆ 12,000 ರೂ.ಗಳಿಗೆ ಮಾರಾಟವಾಗಿದೆ. ಇದು ಈರುಳ್ಳಿಗೆ ದಾವಣಗೆರೆ ಎಪಿಎಂಸಿಯಲ್ಲೇ ಈವರೆಗೂ ಸಿಗದ ಬೆಲೆ. ಹಾಗಾಗಿ ಕಳೆದ ಕೆಲವು ದಿನಗಳಿಂದ ಈರುಳ್ಳಿ ಖರೀದಿಗೆ ಹಿಂದು ಮುಂದು ನೋಡುತ್ತಿದ್ದ ಗ್ರಾಹಕರು ಈಗ ಅದರ ಬಗ್ಗೆಯೇ ಚಿಂತಿಸುವಂತಾಗಿದೆ.

Advertisement

ದಾವಣಗೆರೆ ಮಾರುಕಟ್ಟೆಗೆ ಈರುಳ್ಳಿ ಹರಪನಹಳ್ಳಿ ಹಾಗೂ ಜಗಳೂರು ತಾಲೂಕಿನಿಂದ ಯಥೇತ್ಛವಾಗಿ ಬರುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಜಗಳೂರು ತಾಲೂಕಿನದ್ದು. ಅಲ್ಲದೆ, ದಾವಣಗೆರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದರಿಂದ ಗದಗ ಜಿಲ್ಲೆಯಿಂದಲೂ ಸಹ ಈರುಳ್ಳಿ ಆವಕವಾಗುತ್ತದೆ.

ಕಳೆದ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ 12,770 ಕ್ವಿಂಟಾಲ್‌ ಈರುಳ್ಳಿ ಆವಕವಾಗಿತ್ತು. ಆಗ ದರ ಕೂಡ ಕನಿಷ್ಠ 300 ರೂ.ನಿಂದ ಗರಿಷ್ಠ 1,200 ರೂ. ಇತ್ತು. ಮೇ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆ ಕಂಡಿದೆ. ಮೇ ತಿಂಗಳಲ್ಲಿ ಕ್ವಿಂಟಾಲ್‌ಗೆ ಕನಿಷ್ಠ 450 ರೂ. ಗರಿಷ್ಠ 1600 ರೂ. ಇದ್ದ ದರ ಅಲ್ಲಿಂದ ಸೆಪ್ಟಂಬರ್‌ ತಿಂಗಳವರೆಗೂ ಏರಿಕೆ ಆಗುತ್ತಲೇ ಇತ್ತು. ಅಕ್ಟೋಬರ್‌ನಲ್ಲಿ ಕ್ವಿಂಟಾಲ್‌ಗೆ ಕನಿಷ್ಠ 100 ರೂ. ನಿಂದ 3,800 ರೂ. ಗರಿಷ್ಠ ದರ ಕಂಡಿತ್ತು. ಆ ತಿಂಗಳಲ್ಲಿ ಆವಕ ಒಟ್ಟು 19,770 ಕ್ವಿಂಟಾಲ್‌ನಷ್ಟಿತ್ತು.

ಕಳೆದ ನವೆಂಬರ್‌ ಕನಿಷ್ಠ 300 ರೂ. ದರದಿಂದ ಗರಿಷ್ಠ 7500 ರೂ. ಇದ್ದ ದರ ಡಿಸೆಂಬರ್‌ ಮೊದಲ ವಾರದಲ್ಲೇ ಭಾರಿ ಏರಿಕೆ ಆಗಿದೆ. ಕಳೆದ ಆರು ದಿನಗಳಲ್ಲಿ ಮಾರುಕಟ್ಟೆಗೆ 1370 ಕ್ವಿಂಟಾಲ್‌ ಈರುಳ್ಳಿ ಆವಕವಾಗಿದ್ದು. ಶುಕ್ರವಾರದ ಹೋಲ್‌ಸೇಲ್‌ ದರ ದಾವಣಗೆರೆ ಈರುಳ್ಳಿ ಮಾರುಕಟ್ಟೆಯಲ್ಲೇ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಹರಪನಹಳ್ಳಿ ಮತ್ತು ಜಗಳೂರು ತಾಲೂಕಿನಲ್ಲಿ ಕೊಳವೆಬಾವಿ ನೀರು ಹಾಗೂ ಮಳೆ ಆಶ್ರಿತ ಜಮೀನಿನಲ್ಲಿ ರೈತರು ಈರುಳ್ಳಿ ಬೆಳೆಯುತ್ತಿದ್ದು, ಎಕರೆಗೆ 60ರಿಂದ 80 ಕ್ವಿಂಟಾಲ್‌ ಬೆಳೆ ಸಿಗಲಿದೆ.

ಈ ಬಾರಿ ಈರುಳ್ಳಿ ಬೆಳೆ ಪ್ರಾರಂಭದಲ್ಲಿ ಚನ್ನಾಗಿಯೇ ಇತ್ತು. ರೈತರು ಸಹ ಉತ್ತಮ ಇಳುವರಿ ನಿರೀಕ್ಷಿಸಿದ್ದರು. ಇನ್ನೇನು 2-3 ವಾರಗಳಲ್ಲಿ ಈರುಳ್ಳಿ ಕೀಳಬೇನ್ನುವ ಸಂದರ್ಭದಲ್ಲಿ ಸುರಿದ ಭಾರಿ ಪ್ರಮಾಣದ ಮಳೆ ಈರುಳ್ಳಿ ಬೆಳೆದ ರೈತರಲ್ಲಿ ಕಣ್ಣೀರು ತರಿಸಿತು. ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರಿಗೆ ಕೊಳೆತು ಹೋಯಿತು. ಮಳೆಯಿಂದಾಗಿ ಕೈಯಲ್ಲಿದ್ದ ತುತ್ತು ಬಾಯಿಗೆ ಬರದಂತಾಯಿತು.

Advertisement

ಸುರಿದ ಭಾರಿ ಮಳೆಯಿಂದಾಗಿ ಜಗಳೂರು ತಾಲೂಕಲ್ಲಿ 980 ಹೆಕ್ಟೇರ್‌, ಹೊನ್ನಾಳಿ 280 ಹೆಕ್ಟೇರ್‌ ಹಾಗೂ ಚನ್ನಗಿರಿಯಲ್ಲಿ 39 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಹಾಳಾಯಿತು. ಈಗ ಮಾರುಕಟ್ಟೆಯಲ್ಲಿ ಚಿಕ್ಕ ಗಾತ್ರದ ಈರುಳ್ಳಿಗೂ ಈಗ ಭಾರಿ ಬೇಡಿಕೆ ಇದೆ. ವರ್ತಕರು ಆ ಗಾತ್ರದ ಈರುಳ್ಳಿಯನ್ನೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಸದ್ಯ ಈರುಳ್ಳಿ ಆವಕವಾಗುವ ಪರಿಸ್ಥಿತಿ ಇಲ್ಲ. ಹಾಗಾಗಿ ಹೊರ ಜಿಲ್ಲೆಯಿಂದಲೇ ಮಾರುಕಟ್ಟೆಗೆ ಈರುಳ್ಳಿ ಬರಬೇಕಿದೆ. ಇದರಿಂದಾಗಿ ಈರುಳ್ಳಿ ಬೆಲೆ ಈಗ ಗಗನಕ್ಕೇರಿದ್ದು, ಬೆಳೆ ಕೈಗೆ ಸಿಗದೇ ರೈತನಿಗೂ ಅದರ ಲಾಭ ದಕ್ಕದಂತಾಗಿದೆ.

ವಿಚಿತ್ರವೆಂದರೆ ಈರುಳ್ಳಿ ಬೆಳೆದ ಬೆಳೆಗಾರರ ಹಣೆಬರಹವೇ ಅಂತಹದ್ದು. ಈರುಳ್ಳಿ ಬೆಳೆ ಒಂದು ರೀತಿ ಲಾಟರಿ ಇದ್ದಂತೆ. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಲಾಭ. ಭಾರಿ ಬೆಲೆ ಇದ್ದರೂ ಪ್ರಯೋಜವಾಗದ ಸ್ಥಿತಿ ಜಿಲ್ಲೆಯ ಈರುಳ್ಳಿ ಬೆಳೆಗಾರರದ್ದು.

Advertisement

Udayavani is now on Telegram. Click here to join our channel and stay updated with the latest news.

Next