Advertisement

ಮೇವಿಗಿಲ್ಲ ಬರ

01:17 PM May 17, 2019 | Naveen |

ದಾವಣಗೆರೆ: ದಾವಣಗೆರೆಯ ಎಲ್ಲಾ ಆರು ತಾಲೂಕುಗಳು ಬರಕ್ಕೆ ತುತ್ತಾಗಿದ್ದರೂ ಜಾನುವಾರುಗಳಿಗೆ ಅತೀ ಅಗತ್ಯವಾದ ಮೇವಿನ ಕೊರತೆ ಈವರೆಗೆ ಕಂಡುಬಂದಿಲ್ಲ.

Advertisement

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಇನ್ನೂ 27 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ.

ಜಿಲ್ಲೆಯ 21 ಹೋಬಳಿಯಲ್ಲಿ 24 ಗೋಶಾಲೆ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗೋಶಾಲೆ ಪ್ರಾರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಗಳೂರು ತಾಲೂಕಿನ ಗುರುಸಿದ್ದಾಪುರ ಮತ್ತು ಕಲ್ಲೇದೇವರಪುರದಲ್ಲಿ ಗೋಶಾಲೆ ಪ್ರಾರಂಭಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 4,04,933 ಜಾನುವಾರುಗಳಿವೆ. ಚನ್ನಗಿರಿ ತಾಲೂಕಿನಲ್ಲಿ 1,02,128, ದಾವಣಗೆರೆಯಲ್ಲಿ 92,003, ಹರಿಹರ ತಾಲೂಕಿನಲ್ಲಿ 50,305, ಹೊನ್ನಾಳಿಯಲ್ಲಿ 1,03,882, ಜಗಳೂರಿನಲ್ಲಿ 56,615 ಜಾನುವಾರುಗಳಿವೆ. ಒಂದು ಜಾನುವಾರುಗೆ 5ಕೆ.ಜಿ. ಒಣ ಹುಲ್ಲು ಅಥವಾ 15 ಕೆ.ಜಿ. ಹಸಿ ಹುಲ್ಲಿನಂತೆ ಒಂದು ವಾರಕ್ಕೆ ಒಟ್ಟಾರೆ 14,173 ಮೆಟ್ರಿಕ್‌ ಟನ್‌ನಷ್ಟು ಹುಲ್ಲಿನ ಅವಶ್ಯತೆ ಇದೆ.

Advertisement

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪ್ರಕಾರ ಈಗ ಜಿಲ್ಲೆಯಲ್ಲಿ 3,84,998 ಮೆಟ್ರಿಕ್‌ ಟನ್‌ ಮೇವು ಲಭ್ಯತೆ ಇದೆ. ಈಗ ಲಭ್ಯ ಇರುವ ಮೇವು ಇನ್ನೂ 27 ವಾರಕ್ಕೆ ಸಾಕಾಗಲಿದೆ. ದಾವಣಗೆರೆ ತಾಲೂಕಿನಲ್ಲಿ 23, ಚನ್ನಗಿರಿಯಲ್ಲಿ 23, ಹರಿಹರದಲ್ಲಿ 49, ಹೊನ್ನಾಳಿಯಲ್ಲಿ 33, ಜಗಳೂರಿನಲ್ಲಿ 11 ವಾರಕ್ಕೆ ಆಗುವಷ್ಟು ಮೇವು ಇದೆ ಎಂಬುದು ಇಲಾಖೆ ಹೇಳಿಕೆ.

ಭದ್ರಾ ಅಚ್ಚುಕಟ್ಟು ಪ್ರದೇಶ ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ಬೇಸಿಗೆ ಭತ್ತ, ರಾಗಿ, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳ ಕಟಾವು ಪ್ರಾರಂಭವಾಗಿದೆ. ಇದು ಸಹ ಮೇವಿನ ಕೊರತೆ ನೀಗಿಸಲಿದೆ ಎಂಬ ಲೆಕ್ಕಾಚಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯದ್ದಾಗಿದೆ.

ಜಿಲ್ಲೆಯಲ್ಲಿ 27 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಜೊತೆಗೆ ಒಟ್ಟಾರೆ 1,48,372 ವಿವಿಧ ಹಂತದ ಮೇವಿನ ಕಿಟ್ ವಿತರಣೆ ಮಾಡಲಾಗಿದೆ. ಅದರಿಂದಲೂ ಮೇವು ಲಭ್ಯವಾಗಲಿದೆ. ಹಾಗಾಗಿಯೇ ಇಲ್ಲಿಯವರೆಗೆ ಜಿಲ್ಲಾಡಳಿತ ಗೋಶಾಲೆ ಪ್ರಾರಂಭಿಸಿರಲಿಲ್ಲ. ಈಗ ಎರಡು ಗೋಶಾಲೆ ಪ್ರಾರಂಭಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ರವರ ಸೂಚನೆ ಮೇರೆಗೆ ಜಗಳೂರು ತಾಲೂಕಿನ ಗುರುಸಿದ್ದಾಪುರ,
ಕಲ್ಲೇದೇವರಪುರಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ. ಮೇವು ಬ್ಯಾಂಕ್‌ ಪ್ರಾರಂಭಿಸುವ ಪ್ರಸ್ತಾವನೆ ಇತ್ತು. ಆದರೆ ರೈತರಿಗೆ ಮೇವು ಖರೀದಿಸಲಿಕ್ಕಾಗದು ಎಂಬ ಕಾರಣಕ್ಕೆ ಮೇವು ಬ್ಯಾಂಕ್‌ ಬದಲಿಗೆ ಗೋಶಾಲೆ ಪ್ರಾರಂಭಿಸಲಾಗಿದೆ. ಜಾನುವಾರುಗಳಿಗೆ ತಗಲುಬಹುದಾದ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಬಿ.ಟಿ. ಕುಮಾರಸ್ವಾಮಿ,
ಉಪ ವಿಭಾಗಾಧಿಕಾರಿ

ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next