ದಾವಣಗೆರೆ: ಎಚ್.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದ ಮೇಲೆ ದಾವಣಗೆರೆ ಜಿಲ್ಲೆ ಬಗ್ಗೆ ಹೆಚ್ಚಿನ ಒಲವು ತೋರುತ್ತಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆಗೆ ಅನುದಾನ ನೀಡುವಲ್ಲಿ ಸಿಎಂ ಮುಂದಾಗಿಲ್ಲ.
ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ 12 ಕೋಟಿ ಮಾತ್ರ ಬಿಡುಗಡೆಯಾಗಿದೆ.
ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ 385.52 ಲಕ್ಷ, ಸಾಮಾನ್ಯ ಶಿಕ್ಷಣಕ್ಕೆ 14654.25 ಲಕ್ಷ, ಕ್ರೀಡೆ ಮತ್ತು ಯುವಜನ ಸೇವೆಗೆ 210.88 ಲಕ್ಷ, ಕಲೆ ಮತ್ತು ಸಂಸ್ಕೃತಿಗೆ 10ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯಕ್ಕೆ 4062.40 ಲಕ್ಷ, ಆಯುಷ್‌ಗೆ 418.65 ಲಕ್ಷ, ಕುಟುಂಬ ಕಲ್ಯಾಣಕ್ಕೆ 2089.19 ಲಕ್ಷ, ಅಕ್ಷರ ದಾಸೋಹ ಇತರೆ ಫಲಾನುಭವಿಗಳಿಗೆ 2399.19 ಲಕ್ಷ, ಕಟ್ಟಡ, ರಿಪೇರಿ, ರಸ್ತೆಗೆ 1415.17 ಲಕ್ಷ, ಶಾಲಾ ಸಾಮಗ್ರಿ, ಕೃಷಿ ಉಪಕರಣ ಮತ್ತಿತರೆ ಖರೀದಿಗೆ 190.29 ಲಕ್ಷ, ಪ್ರಚಾರ, ಪ್ರದರ್ಶನ, ಸಸಿ ನೆಡುವ, ಪ್ರಕಟಣೆಗೆ 71.67 ಲಕ್ಷ ಒಳಗೊಂಡಂತೆ 30 ಇಲಾಖೆಗಳ ಒಟ್ಟು 138(179) ಕಾರ್ಯಕ್ರಮಗಳಿಗೆ 2019-20ನೇ ಸಾಲಿನಲ್ಲಿ ಒಟ್ಟು 957.20 ಕೋಟಿ ಕ್ರಿಯಾ ಯೋಜನೆ ಪಟ್ಟಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ 30 ಇಲಾಖೆಗಳಲ್ಲಿನ ವಿವಿಧ ಕಾರ್ಯಕ್ರಮಕ್ಕೆ 331.57 ಕೋಟಿ, ತಾಲೂಕು ಪಂಚಾಯತ್‌ಗೆ 625.31 ಕೋಟಿ ಮತ್ತು ಗ್ರಾಮ ಪಂಚಾಯತ್‌ಗಳಿಗೆ 35 ಲಕ್ಷ ಅನುದಾನ ರಾಜ್ಯ ಸರ್ಕಾರದಿಂದ ಬರಬೇಕಿದೆ.
ಬೇಸಿಗೆಯಲ್ಲಿ ದಾವಣಗೆರೆ, ಜಗಳೂರು ತಾಲೂಕಿನಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ, ಕೊಳವೆ ಬಾವಿ ಕೊರೆಸುವ, ಪೈಪ್‌ಲೈನ್ ಅಳವಡಿಕೆ, ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳ ಬಾಡಿಗೆ ಪಡೆದು ನೀರು ಪೂರೈಸುವುದಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ 12 ಕೋಟಿ ಅನುದಾನ ಬಳಕೆಗೆ ಮೀಸಲಿಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೂ ಸಮರ್ಪಕ ಪ್ರಮಾಣದಲ್ಲಿ ಮಳೆ ಆಗದೇ ಇದ್ದರೂ ಕೆಲವಾರು ಕಡೆ ಮಳೆಯಿಂದ ಭತ್ತ, ಅಡಕೆ, ತೆಂಗು, ಬಾಳೆ ಹಾನಿಗೀಡಾಗಿದೆ. ಅದಕ್ಕೆ ಸಂಬಂಧಿಸಿದ ಪರಿಹಾರ ಮೊತ್ತವೂ ಬರಬೇಕಿದೆ.