Advertisement

“ಎ’ವರ್ಗಕ್ಕೆ ಸೇರ್ಪಡೆ: ಜನರಿಗೆ ಬಿಗ್‌ ರಿಲೀಫ್‌

09:06 PM Jun 27, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ. 5 ರೊಳಗೆ ಬಂದಿರುವುದರಿಂದ ರಾಜ್ಯ ಸರ್ಕಾರ ಜಿಲ್ಲೆಯನ್ನು “ಎ’ ವರ್ಗಕ್ಕೆ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಜೂ. 28 ರಿಂದ ಜುಲೈ 5 ರವರೆಗೆ ಲಾಕ್‌ಡೌನ್‌ನಲ್ಲಿ ಮತ್ತಷ್ಟು ರಿಯಾಯಿತಿ ನೀಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ. ಲಾಕ್‌ಡೌನ್‌ ಸಡಿಲಿಕೆಗೆ ನೀಡಿದ ರಿಯಾಯಿತಿಯಂತೆ ಎಲ್ಲ ಅಂಗಡಿಗಳು ಹಾಗೂ ಹೊಟೆಲ್‌ಗ‌ಳು ಜುಲೈ 5 ರವರೆಗೆ ಅನ್ವಯವಾಗುವಂತೆ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ವಹಿವಾಟು ನಡೆಸಬಹುದು.

Advertisement

ಆದರೆ ಹವಾನಿಯಂತ್ರಿತ ಶಾಪಿಂಗ್‌ ಕಾಂಪ್ಲೆಕ್ಸ್‌, ಮಾಲ್‌ಗ‌ಳಿಗೆ ಅನುಮತಿ ನೀಡಿಲ್ಲ. ಜುಲೈ 5 ರವರೆಗೆ ಪ್ರತಿ ದಿನ ಸಂಜೆ 5 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್‌ ಮುಂದುವರೆಯಲಿದೆ. ಈ ಅವಧಿಯಲ್ಲಿ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲಾಗಿದೆ.

ಆದರೆ, ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ವಾಹನಗಳು ಸರಕುಗಳನ್ನು ರಶೀದಿಯಲ್ಲಿ ನಮೂದಿತ ವಿಳಾಸದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಮಾತ್ರ ದಿನಪೂರ್ತಿ ಅವಕಾಶ ನೀಡಲಾಗಿದೆ. ಕೋವಿಡ್‌-19ರ ಮಾರ್ಗಸೂಚಿಗಳ ಪಾಲನೆಯ ಷರತ್ತಿಗೆ ಒಳಪಟ್ಟು ಬಸ್‌ ಗಳ ಆಸನದ ಗರಿಷ್ಠ ಶೇ. 50 ರ ಸಾಮರ್ಥ್ಯದೊಂದಿಗೆ ಬಸ್‌ ಸಂಚಾರಕ್ಕೆ ಅನುಮತಿಸಿದೆ.

ಪ್ರಯಾಣಿಕರು ಬಸ್‌ಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶವಿರುವುದಿಲ್ಲ. ಎಲ್ಲ ವಿಧದ ಉತ್ಪಾದಿತ ಘಟಕಗಳು ,ಸಂಸ್ಥೆಗಳು, ಕೈಗಾರಿಕೆಗಳು, ಕೋವಿಡ್‌ ನಿಯಮಾವಳಿಯ ಮೇಲೆ ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಗಾರ್ಮೆಂಟ್ಸ್‌ ಗಳಲ್ಲಿ ಶೇ. 30ರ ಸಿಬ್ಬಂದಿಯೊಂದಿಗೆ ಕೋವಿಡ್‌ ಕ್ರಮವನ್ನು ಅನುಸರಿಸಿ ಕಾರ್ಯ ನಿರ್ವಹಿಸಬಹುದಾಗಿದೆ.

ಸಾರ್ವಜನಿಕರು ಹೊರಗಡೆ ಓಡಾಡುವುದನ್ನು ನಿಯಂತ್ರಿಸುವುದಕ್ಕಾಗಿ ಕೋವಿಡ್‌-19 ನಿರ್ವಹಣೆಯ ಕಾರ್ಯಾಚರಣೆಗಳನ್ನು ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಎಲ್ಲ ಅವಶ್ಯಕ ವಸ್ತುಗಳನ್ನು ಮನೆ ಮನೆಗೆ 24×7 ಅವಧಿಯಲ್ಲಿ ಪೂರೈಸಲು ಅನುಮತಿಸಲಾಗಿದೆ. ಎಲ್ಲ ಹೋಟೆಲ್‌, ರೆಸ್ಟೋರೆಂಟ್‌, ಬಾರ್‌ ಹಾಗೂ ಕ್ಲಬ್‌ಗಳು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಶೇ. 50 ರ ಸಾಮರ್ಥ್ಯದಲ್ಲಿ ಗ್ರಾಹಕರಿಗೆ ಸ್ಥಳದಲ್ಲೇ ಸೇವೆ ಸಲ್ಲಿಸಲು ಅನುಮತಿ ನೀಡಲಾಗಿದೆ.

Advertisement

ಆದರೆ ಊಟದ ಜೊತೆಗೆ ಮದ್ಯವನ್ನು ಪೂರೈಸುವಂತಿಲ್ಲ. ಹವಾನಿಯಂತ್ರಿತ ಹೋಟೆಲ್‌ ಇತ್ಯಾದಿಗಳು ಕಾರ್ಯ ನಿರ್ವಹಿಸುವಂತಿಲ್ಲ. ಲಾಡ್ಜ್, ರೆಸಾರ್ಟ್‌ ಇತ್ಯಾದಿಗಳು ಶೇ. 50ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಪ್ರೇಕ್ಷಕ ರಹಿತವಾಗಿ ಎಲ್ಲ ಹೊರಾಂಗಣ ಕ್ರೀಡಾ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಆರೋಗ್ಯ ಕ್ಷೇತ್ರದ ಕೌಶಲ್ಯ ತರಬೇತಿ ಹಾಗೂ ಘನತ್ಯಾಜ್ಯ ನಿರ್ವಹಣೆ ಸಂಬಧಿಂತ ತರಬೇತಿಗೆ ಅವಕಾಶವಿದೆ. ಗರಿಷ್ಠ ಇಬ್ಬರು ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಆಟೋ ಮತ್ತು ಟ್ಯಾಕ್ಸಿಗಳು ಸಂಚರಿಸಲು ಅನುಮತಿಸಿದೆ.

ವಾಕಿಂಗ್‌ ಮತ್ತು ಜಾಗಿಂಗ್‌ ಉದ್ದೇಶಕ್ಕಾಗಿ ಮಾತ್ರ ಉದ್ಯಾನವನಗಳನ್ನು ಬೆಳಿಗ್ಗೆ 5ರಿಂದ ಸಂಜೆ 6 ರವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಆದರೆ ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶವಿಲ್ಲ. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಸಿಬ್ಬಂದಿಯ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಹಾಗೂ ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಆರೋಗ್ಯ ವಲಯಕ್ಕೆ ಸಂಬಂಧಿ ಸಿದ ಕೌಶಲ್ಯ ತರಬೇತಿಗಳಿಗೆ ಅನುಮತಿಸಿದೆ.

ಕೋವಿಡ್‌ -19 ಮಾರ್ಗಸೂಚಿ ಅನ್ವಯ ಹೊರಾಂಗಣ ಚಿತ್ರೀಕರಣಕ್ಕೆ ಹಾಗೂ ಸೀರಿಯಲ್‌ಗ‌ಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next