Advertisement

ಮಲೇರಿಯಾ ನಿಯಂತ್ರಣಕ್ಕೆ ಶ್ರಮಿಸಿ

09:55 PM Jun 23, 2021 | Team Udayavani |

ದಾವಣಗೆರೆ: ಮಳೆಗಾಲ ಪ್ರಾರಂಭವಾಗಿದ್ದು, ಮಲೇರಿಯಾ ಹರಡುವ ಕಾಲ ಇದಾಗಿದೆ. ಹೀಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಹರಿದುಹೋಗುವ ಚರಂಡಿಗಳನ್ನು ಶುಚಿಗೊಳಿಸಬೇಕು. ಮಲೇರಿಯಾ ಹರಡದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ “ಶೂನ್ಯ ಮಲೇರಿಯಾ ಗುರಿಯನ್ನು ತಲುಪಿ’ ಎಂಬ ಧ್ಯೇಯವಾಕ್ಯದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಹಾಗೂ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಮಲೇರಿಯಾ ಪ್ರಕರಣಗಳು ಕಡಿಮೆ ಇದ್ದರೂ ನಮ್ಮ ಜಿಲ್ಲೆ ಇನ್ನೂ ಮಲೇರಿಯಾ ಮುಕ್ತವಾಗಿಲ್ಲ. ಹಾಗಾಗಿ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳ ಪಾತ್ರ ಪ್ರಮುಖವಾಗಿದ್ದು, ಮಲೇರಿಯಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ. ಸ್ವತ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವತ್ಛತೆ ಇಲ್ಲದೇ ಹೋದಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಗಣಿಗಾರಿಕೆ ಪ್ರದೇಶ ವ್ಯಾಪ್ತಿಯ ಕ್ವಾರಿಗಳಲ್ಲಿ, ಟಯರ್‌, ಎಳನೀರು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನಟರಾಜ್‌ ಮಾತನಾಡಿ, 2025ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿಯಾಗಿದೆ. 2015ರಲ್ಲಿ ಜಿಲ್ಲೆಯಲ್ಲಿ ಒಟ್ಟು 26 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, 2020ರಲ್ಲಿ ಕೇವಲ ನಾಲ್ಕು ಪ್ರಕರಣಗಳು ಕಂಡುಬಂದಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಾಧಾನಕರ ಸಂಗತಿ ಎಂದು ತಿಳಿಸಿದರು. ಸೊಳ್ಳೆಗಳಿಂದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಕಂಡುಬರುತ್ತವೆ. ಇದನ್ನು ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ, ತಾಲೂಕು ಮಟ್ಟದಲ್ಲಿ ಮಾಧ್ಯಮ ಮಿತ್ರರಿಗೆ ಕಾರ್ಯಾಗಾರ, ಡಿಜಿಟಲ್‌ ಪ್ರದರ್ಶನ ಫಲಕಗಳ ಮೂಲಕ ಸೊðàಲಿಂಗ್‌ ಮೆಸೆಜ್‌ಗಳನ್ನು ಕಳುಹಿಸುವುದು, ಡಂಗುರ ಅಥವಾ ಟಾಂಟಾಂ ಮೂಲಕ ಜಾಗತಿ ಮೂಡಿಸುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದರು.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ತಾಲೂಕುವಾರು ಭೇಟಿ ನೀಡಿ ಒಟ್ಟು 137 ನೀರಿನ ಸಂಗ್ರಹಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 60 ಲಾರ್ವಾಹಾರಿ ಮೀನು ಇರುವ ನೀರಿನ ಸಂಗ್ರಹಗಳಿದ್ದು, 77 ಲಾರ್ವಾಹಾರಿ ಮೀನು ಇರುವ ನೀರಿನ ಸಂಗ್ರಹಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ 60 ಲಾರ್ವಾಹಾರಿ ಮೀನು ಇರುವ ನೀರಿನ ಸಂಗ್ರಹಗಳು ಇದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಾಲ್ಕು ಮಲೇರಿಯಾ, 44 ಡೆಂಗ್ಯು, 18 ಚಿಕೂನ್‌ ಗುನ್ಯ ಪ್ರಕರಣಗಳು ವರದಿಯಾಗಿದೆ. ಇಬ್ಬರಲ್ಲಿ ಕೋವಿಡ್‌ ಜತೆಗೆ ಡೆಂಘೀ ಸೋಂಕು ಬಂದಿದ್ದು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ನಾಲ್ವರಲ್ಲಿ ಮೆದುಳು ಜ್ವರದ ಲಕ್ಷಣಗಳು ಕಂಡುಬಂದಿದ್ದು ಖಚಿತಪಟ್ಟಿಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಮಲೇರಿಯಾ ಪರೀಕ್ಷೆ ಮಾಡಲೆಂದು ಪ್ರತ್ಯೇಕವಾಗಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಸಂಪೂರ್ಣ ಜವಾಬ್ದಾರಿ ನೀಡಿ.

ಅವರು ಕಡ್ಡಾಯವಾಗಿ ಪರೀಕ್ಷೆ ಮಾಡಿ ವರದಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದರು. ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್‌ ಮುದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಗರ ಯೋಜನಾಧಿಕಾರಿ ನಜ್ಮಾ, ಆರ್‌ಸಿಎಚ್‌ ಅಧಿಕಾರಿ ಡಾ| ಮೀನಾಕ್ಷಿ, ಡಾ| ರೇಣುಕಾರಾಧ್ಯ, ಡಾ| ಜಯಪ್ರಕಾಶ್‌ ಸೇರಿದಂತೆ ಎಲ್ಲ ತಾಲೂಕುಗಳ ಆರೋಗ್ಯಾಧಿಕಾರಿಗಳು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next