Advertisement

ನಕಲಿ ಪತ್ರಕರ್ತರ ವಿರುದ್ಧ ಶೀಘ್ರ ಕ್ರಮ

08:54 PM Jun 21, 2021 | Team Udayavani |

ಹರಿಹರ: ಜಿಲ್ಲೆಯಲ್ಲಿ ನೋಂದಣಿ ಇಲ್ಲದ ಪತ್ರಕರ್ತರ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲಿ ನಕಲಿ ಮಾಧ್ಯಮವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಸಿ.ಬಿ. ರಿಷ್ಯಂತ್‌ ಹೇಳಿದರು.

Advertisement

ನಗರದ ತರಳಬಾಳು ಶಾಲೆ ಅವರಣದಲ್ಲಿ ತರಳಬಾಳು ಸೇವಾ ಸಮಿತಿಯವರು ಕಳೆದ 35 ದಿನಗಳಿಂದ ಕೋವಿಡ್‌ ಸೋಂಕಿತರ ಪರಿಚಾರಕರಿಗಾಗಿ ಊಟ ತಯಾರಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರ್ತಾ ಇಲಾಖೆಯೊಂದಿಗೆ ನೋಂದಣಿ ಇಲ್ಲದಿದ್ದರೂ ಪತ್ರಕರ್ತರ ಸೋಗಿನಲ್ಲಿ ಅಧಿ ಕಾರಿಗಳಿಗೆ ಹಾಗೂ ಜನಪ್ರತಿನಿಧಿ ಗಳಿಗೆ ಮಾನಸಿಕ ನೆಮ್ಮದಿ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಯುಟ್ಯೂಬ್‌ ಚಾನಲ್‌ ಹೆಸರು ಹೇಳಿಕೊಂಡು ಜನರ ಶೋಷಣೆ ಮಾಡುವುದನ್ನು ಸಹಿಸಲಾಗದು ಎಂದರು.

ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಇಂಥವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯ ಅಧಿ ಕಾರಿಗಳು ಹಾಗೂ ಪತ್ರಕರ್ತ ಸಂಘದ ಪದಾ ಧಿಕಾರಿಗಳೊಂದಿಗೆ ಸಭೆ ನಡೆಸಿ ನಕಲಿ ಪತ್ರಕರ್ತರು, ಪೀತ ಪತ್ರಿಕೋದ್ಯಮಿಗಳನ್ನು ಮಟ್ಟ ಹಾಕಲಾಗುವುದು ಎಂದರು.

ಹಲವು ಬಾರಿ ಕೋರಿದ್ದರೂ ನಗರಕ್ಕೆ ಸಂಚಾರಿ ಪೊಲೀಸ್‌ ಠಾಣೆ ಮಂಜೂರು ಮಾಡದ ಕುರಿತ ಪ್ರಶ್ನೆಗೆ ನಗರದಲ್ಲಿ ಸಂಚಾರಿ ದಟ್ಟಣೆ ಗಮನಿಸಿ ಅವಶ್ಯವಿದ್ದಲ್ಲಿ ಮತ್ತೂಮ್ಮೆ ದಾಖಲಾತಿಗಳನ್ನು ಪರಿಶೀಲಿಸಿ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ನಗರ ಬೆಳೆದಂತೆಲ್ಲ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ತಕ್ಕಂತೆ ಹೊರ ಪೊಲೀಸ್‌ ಠಾಣೆ ತೆರೆಯುವ ಬಗ್ಗೆ ಕೇಳಿದಾಗ ನಗರದಲ್ಲಿ ನಡೆಯುವ ಅಪರಾಧ ಪ್ರಕರಣಗಳು ಹಾಗೂ ಜನಸಂಖ್ಯೆ ಮಾಹಿತಿ ಆಧಾರದ ಮೇಲೆ ಪರಿಶೀಲನೆ ಮಾಡಿ ಅಗತ್ಯವಿದ್ದಲ್ಲಿ ಸರಕಾರದ ಗಮನಕ್ಕೆ ತಂದು ಹೊರಠಾಣೆಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ದಾಸೋಹಕ್ಕೆ ಸ್ವಾಮೀಜಿಯವರೊಂದಿಗೆ ಚಾಲನೆ ನೀಡಿದರು. ನಗರದ ರಾಮಕೃಷ್ಣಾಶ್ರಮದ ಅಧ್ಯಕ್ಷ ಶಾರದೇಶಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ್‌ ಹನಗವಾಡಿ, ನಗರಸಭಾ ಸದಸ್ಯೆ ಅಶ್ವಿ‌ನಿ ಕೃಷ್ಣ, ಸೇವಾ ಸಮಿತಿಯ ವೀರೇಶ್‌ ಕೊಂಡಜ್ಜಿ, ಭೂಮಿ ಬ್ಯಾಂಕ್‌ ಮಾಜಿ ರಾಜ್ಯ ಉಪಾಧ್ಯಕ್ಷ ಬೆಳ್ಳೂಡಿ ರಾಮಚಂದ್ರಪ್ಪ, ಕಿರಣ್‌ ಮೂಲಿಮನಿ, ಬೆಳ್ಳೂಡಿ ಗೀತಕ್ಕ, ಕೊಂಡಜ್ಜಿ ಶಿವಕುಮಾರ್‌, ಉಮೇಶ್‌ ಹುಲ್ಮನಿ, ಹನಗವಾಡಿ ಬಿ.ಮಂಜಣ್ಣ, ಕೆ.ಜಿ. ಕೃಷ್ಣ, ಎನ್‌.ಇ. ಸುರೇಶ್‌ ಸ್ವಾಮಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next