Advertisement
ದಾವಣಗೆರೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಕೊನೆ ಗಳಿಗೆಯಲ್ಲಿ ಹುಸಿಯಾದ ಪರಿಣಾಮ ಈ ಬಾರಿಯೂ ದಾವಣಗೆರೆ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಬಿಜೆಪಿಯ ಭದ್ರ ಕೋಟೆ. ಹಾಲಿ ಇರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ದಾವಣಗೆರೆ ದಕ್ಷಿಣ, ಹರಿಹರ ಹೊರತುಪಡಿಸಿದರೆ ದಾವಣಗೆರೆ ಉತ್ತರ, ಜಗಳೂರು, ಹೊನ್ನಾಳಿ, ಮಾಯಕೊಂಡ, ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
Related Articles
Advertisement
ಆದರೂ ಮುಖ್ಯಮಂತ್ರಿಗಳು, ಹೈಕಮಾಂಡ್ ಜಿಲ್ಲೆಯ ಶಾಸಕರ ಒಗ್ಗಟ್ಟಿನ ಮನವಿಗೆ ಸ್ಪಂದಿಸಲೇ ಇಲ್ಲ. ನೂತನ ಮುಖ್ಯಮಂತ್ರಿಗಳ ನೇತೃತ್ವದ ಸಂಪುಟದ ಭರ್ತಿ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಯಾವುದೇ ಖಾತೆ ನೀಡಿದರೂ ನಿರ್ವಹಿಸಲು ಸಿದ್ಧ ಎನ್ನುವ ಮೂಲಕ ಮಂತ್ರಿ ಸ್ಥಾನಕ್ಕೆ ದಾಳ ಉರುಳಿಸಿದ್ದರು. ಚನ್ನಗಿರಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರು ತಮ್ಮ ನೆಚ್ಚಿನ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಸಚಿವರಾಗುವ ಪ್ರಯತ್ನ ನಡೆಸಿದರು.
ಯಡಿಯೂರಪ್ಪ ಅವರ ಪರಮಾಪ್ತ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ದೊರೆತೇ ದೊರೆಯುತ್ತದೆ ಎಂಬ ವಿಶ್ವಾಸದಲಿದ್ದರು. ಆದರೆ ಈ ಬಾರಿಯೂ ನಿರಾಸೆ ಅನುಭವಿಸುವಂತಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ “ಮಾನಸ ಪುತ್ರ’ ಎಂದೇ ಗುರುತಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಎರಡನೇ ಬಾರಿ ಸಚಿವರಾಗುವ ಕನಸು ಕಂಡಿದ್ದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಲೇ ತಮ್ಮದೇ ಆದ ರಾಜಕೀಯ ದಾಳ ಉರುಳಿಸುತ್ತಾ ಮಂತ್ರಿಗಿರಿಯತ್ತ ಚಿತ್ತ ನೆಟ್ಟಿದ್ದರು.
ಸಚಿವ ಸಂಪುಟ ರಚನೆಯ ಕೊನೆ ಕ್ಷಣದವರೆಗೆ ರೇಣುಕಾಚಾರ್ಯರ ಹೆಸರು ಮುಂಚೂಣಿಯಲ್ಲೇ ಇತ್ತು. ಜಿಲ್ಲೆಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎನ್ನುವ ವಾತಾವರಣವೂ ನಿರ್ಮಾಣವಾಗಿತ್ತು. ಆದರೆ ಕಡೇ ಕ್ಷಣದಲ್ಲಿ ರೇಣುಕಾಚಾರ್ಯರಿಗೆ ಮಾತ್ರವಲ್ಲ, ದಾವಣಗೆರೆ ಜಿಲ್ಲೆಗೂ ಪ್ರಾತಿನಿಧ್ಯ ದೊರೆಯಲಿಲ್ಲ. ಜಗಳೂರು ಶಾಸಕ, ವಾಲೀ¾ಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ವಿ. ರಾಮಚಂದ್ರ ಸಹ ಒಂದು ಕೈ ನೋಡಿಯೇ ಬಿಡೋಣ ಎನ್ನುವಂತೆ ಮಂತ್ರಿ ಸ್ಥಾನದತ್ತ ಗಮನ ಹರಿಸಿದ್ದರು.
ವಾಲ್ಮೀಕಿ ನಾಯಕ ಸಮಾಜ ಕೂಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿತ್ತು. ಅವರಿಗೂ ಸಚಿವ ಸ್ಥಾನ ದಕ್ಕಲೇ ಇಲ್ಲ. ಒಟ್ಟಾರೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಾವಣಗೆರೆ ಜಿಲ್ಲೆಗೆ ಈ ಬಾರಿ ಕೂಡ ಸಚಿವ ಸ್ಥಾನ ದೊರೆಯದೇ ಇರುವುದು ಬೇಸರದ ಸಂಗತಿ.