Advertisement

ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ

05:49 PM Jul 23, 2021 | Team Udayavani |

ದಾವಣಗೆರೆ: ಕೋವಿಡ್‌ 3 ನೇ ಅಲೆ ಕಂಡುಬರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

Advertisement

ಗುರುವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯ ಸರ್ಕಾರಿ, ಖಾಸಗಿ ತಜ್ಞ ವೈದ್ಯರು ಮತ್ತು ವೈದ್ಯಾಧಿಕಾರಿಗಳಿಗೆ ಕೋವಿಡ್‌ -19 ಮೂರನೇ ಅಲೆಯ ಕುರಿತು ಮಕ್ಕಳ ಆರೈಕೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ನಿರ್ವಹಣೆ ಕುರಿತು ಏರ್ಪಡಿಸಿದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾ ಮೂರನೇ ಅಲೆ ಎದುರಿಸಲು ಅಗತ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳನ್ನು ಸಿದ್ಧವಾಗಿಟ್ಟುಕೊಂಡು ನಿರ್ವಹಿಸಬೇಕು ಎಂದು ಸೂಚಿಸಿದರು.

ಕೋವಿಡ್‌-19 ಮೂರನೇ ಅಲೆ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯರು, ಸಹಾಯಕ ಸಿಬ್ಬಂದಿಗಳಿಗೆ ಮಕ್ಕಳಿಂದ ಗಂಟಲು ದ್ರವ ಸಂಗ್ರಹ ಸೇರಿದಂತೆ ಅಗತ್ಯ ತರಬೇತಿ ನೀಡಿ ಸಿದ್ದಪಡಿಸಿಟ್ಟುಕೊಳ್ಳಬೇಕು. ಮೂರನೇ ಅಲೆ ವ್ಯಾಪಿಸುವುದರೊಳಗಾಗಿ ಮಕ್ಕಳಿಗೆ ಲಸಿಕೆ ದೊರೆತರೆ ಕೋವಿಡ್‌ ಹರಡುವುದನ್ನು ತಡೆಗಟ್ಟಲು ಸುಲಭವಾಗುವುದು. ಅದರಲ್ಲೂ ಅಪೌಷ್ಟಿಕ ಮಕ್ಕಳ ಕುರಿತು ಗಮನಹರಿಸಬೇಕು ಎಂದರು.

ಕೊರೊನಾದ ಮೂರನೇ ಅಲೆಯ ನಿಯಂತ್ರಣಕ್ಕಾಗಿ ವೈದ್ಯಕೀಯ ತಜ್ಞರಿಂದ ತರಬೇತಿ ಕಾರ್ಯಾಗಾರ ಏರ್ಪಡಿಸುತ್ತಿದ್ದು, ಎಲ್ಲ ವೈದ್ಯರು ಸದುಪಯೋಗ ಪಡೆದುಕೊಳ್ಳಬೇಕು. ಮೂರನೇ ಅಲೆಯ ಸಾಧಕ-ಬಾಧಕಗಳ ಕುರಿತು, ಮಕ್ಕಳ ಆರೈಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮುದಾಯಕ್ಕೆ ತಲುಪಿಸಬೇಕು. ಈಗಾಗಲೇ ಕೊರೊನಾದ ಎರಡು ಅಲೆಯನ್ನು ಸಮಗ್ರವಾಗಿ ನಿಭಾಯಿಸಿದ್ದು, ಮುಂದೆ ಬರುವ ಅಲೆಯ ವಿರುದ್ಧ ಹೊರಾಡಲು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೋವಿಡ್‌ -19 ಸೋಂಕು ತಡೆಗಟ್ಟಲು ಸಫಲರಾಗುತ್ತಿದ್ದಾರೆ. ಆಯಾ ರಾಷ್ಟ್ರಗಳನ್ನು ಮಾದರಿಯಾಗಿಟ್ಟುಕೊಂಡು ಕೋವಿಡ್‌ ವಿರುದ್ಧ ಹೋರಾಡಲು ಸನ್ನದ್ಧರಾಗಬೇಕು. ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆಗಳು ಹೆಚ್ಚಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಿದ್ದಾರೆ. ಅದನ್ನು ನಿಯಂತ್ರಿಸುವಲ್ಲಿ ಬೇಕಾದ ತರಬೇತಿಗಳನ್ನು ಪಡೆದುಕೊಂಡು ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.

Advertisement

ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಎಸ್‌. ಎಸ್‌.ಐ.ಎಂ ನಿರ್ದೇಶಕ ಡಾ| ಎನ್‌.ಕೆ. ಕಾಳಪ್ಪನವರ್‌, ಡಾ| ಮೂಗನಗೌಡ, ಡಾ| ನೀಲಕಂಠ ನಾಯಕ್‌, ಡಾ| ಎಸ್‌. ಮೀನಾಕ್ಷಿ, ಡಾ| ರೇಣುಕಾರಾಧ್ಯ, ಡಾ| ಜಿ.ಡಿ. ರಾಘವನ್‌, ಡಾ| ಮುರುಳೀಧರ, ಡಾ| ಸುರೇಶ್‌ ಬಾರ್ಕಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next