Advertisement

ದಂಡ ಜಾಸ್ತಿಯಾಯ್ತು..ಕಾಯ್ದೆ ರದ್ದುಪಡಿಸಿ..

11:18 AM Sep 12, 2019 | Naveen |

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಬುಧವಾರ ಹೊಸ ಮೋಟಾರು ವಾಹನ ಕಾಯ್ದೆ ಹೆಚ್ಚುವರಿ ದಂಡ ವಿರೋಧಿ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

Advertisement

ಕೇಂದ್ರ ಸರ್ಕಾರ ಸೆ.1 ರಿಂದ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯ ಅನ್ವಯ ಸಂಚಾರಿ ನಿಯಮಗಳ ಪಾಲನೆಗೆ ಯಾವುದೇ ರೀತಿಯ ಅಭ್ಯಂತರವೇ ಇಲ್ಲ. ಆದರೆ, ಸಂಚಾರಿ ನಿಯಮ ಉಲ್ಲಂಘನೆಗಾಗಿ ಹೆಚ್ಚುವರಿ ದಂಡ ವಿಧಿಸುವುದಕ್ಕೆ ಸಂಪೂರ್ಣ ವಿರೋಧ ಇದೆ ಎಂದು ಪದಾಧಿಕಾರಿಗಳು ತಿಳಿಸಿದರು.

ಹೊಸ ಮೋಟಾರು ವಾಹನ ಕಾಯ್ದೆಯಲ್ಲಿನ ದಂಡಗಳಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗುತ್ತಿದೆ.

ಪ್ರತಿಯೊಂದು ಉಲ್ಲಂಘನೆಗೆ ಸಾವಿರಾರು ರೂಪಾಯಿ ದಂಡ ಇರುವುದರಿಂದ ಜನರು, ವಾಹನ ಸವಾರರು ಭಯ ಪಡುವಂತಾಗಿದೆ. ಮೂಗುಗಿಂತಲೂ ಮೂಗುತಿ ಭಾರ… ಎನ್ನುವಂತೆ ದಂಡ ಅಧಿಕವಾಗಿವೆ ಎಂದು ತಿಳಿಸಿದರು.

ಸರ್ಕಾರ ರೂಪಿಸುವಂತಹ ಯಾವುದೇ ಕಾಯ್ದೆಗಳಾಗಲಿ ಜನರನ್ನ ತಿದ್ದಬೇಕೇ ಹೊರತು ಶೋಷಣೆಗೆ ಒಳಪಡಿಸ ಬಾರದು, ಸುಲಿಗೆಗೆ ದಾರಿ ಮಾಡಿಕೊಡುವಂತಾಗಬಾರದು. ವಾಹನ ಸವಾರರಿಂದ ಅತೀ ಹೆಚ್ಚು ದಂಡ ವಸೂಲಿ ಮಾಡುವ ಮೂಲಕ ಸರ್ಕಾರವನ್ನ ನಡೆಸುವ ಇರಾದೆ ಹೊಸ ಮೋಟಾರು ವಾಹನ ಕಾಯ್ದೆಯ ಹಿಂದೆ ಏನಾದರೂ ಇದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುವಂತಿದೆ ಎಂದು ತಿಳಿಸಿದರು.

Advertisement

ಕಾನೂನು ಪಾಲನೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಆದರೆ, ಅದೇ ಕಾನೂನು ಜನರಿಗೆ ಹೊರೆ, ಶೂಲದಂತೆ ಆಗಬಾರದು. ಹೊಸ ಮೋಟಾರು ವಾಹನ ಕಾಯ್ದೆ, ಅದರಲ್ಲಿನ ದಂಡಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಒಂದು ವರ್ಷದ ನಂತರ ಜಾರಿಗೆ ತರಬಹುದಿತ್ತು. ಅದನ್ನು ಬಿಟ್ಟು ತರಾತುರಿಯಲ್ಲಿ ಏಕಾಏಕಿ ಜಾರಿಗೆ ತರುವ ಮೂಲಕ ಜನರಲ್ಲಿ ಭಯ ಉಂಟು ಮಾಡುವಂತಾಗಬಾರದು ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಯಾವುದೇ ರಾಜ್ಯ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿಲ್ಲ. ಆದರೆ, ಕರ್ನಾಟಕ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿರುವುದು ಸರಿಯಲ್ಲ. ಅತ್ಯಂತ ಅವೈಜ್ಞಾನಿಕವಾಗಿರುವ ಹೊಸ ಮೋಟಾರು ವಾಹನ ಕಾಯ್ದೆಯ ಬಗ್ಗೆ ಮರುಪರಿಶೀಲನೆ ನಡೆಸಿ, ಕೂಡಲೇ ರಾಜ್ಯ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆಯನ್ನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಸಮಿತಿಯ ದಿನೇಶ್‌ ಕೆ. ಶೆಟ್ಟಿ, ಎಚ್.ಕೆ. ರಾಮಚಂದ್ರಪ್ಪ, ಎ. ನಾಗರಾಜ್‌, ಬಿ.ಎನ್‌. ಮಲ್ಲೇಶ್‌, ಕೆ.ಜಿ. ಯಲ್ಲಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್‌ಧ, ಮುಸ್ತಾಕ್‌ ಅಹಮ್ಮದ್‌, ಸೈಯದ್‌ ಸೈಪುಲ್ಲಾ, ಎಚ್.ವಿ. ಮಂಜುನಾಥಸ್ವಾಮಿ, ಸಿಎ ಉಮೇಶ್‌ಶೆಟ್ಟಿ, ರಾಧೇಶ್‌ ಜಂಬಗಿ, ಆವರಗೆರೆ ಚಂದ್ರು, ಎಂ.ಎಸ್‌. ರಾಮೇಗೌಡ, ಆಟೋ ಕಾಲೋನಿ ಕಲ್ಲೇಶಪ್ಪ,ಶ್ರೀಕಾಂತ್‌ ಬಗರೆ, ಸೋಮಲಾಪುರದ ಹನುಮಂತಪ್ಪ, ಡಿ.ಎನ್‌. ಜಗದೀಶ್‌, ಎಲ್.ಎಂ. ಸಾಗರ್‌, ಆವರಗೆರೆ ವಾಸು, ಇ. ಶ್ರೀನಿವಾಸ್‌, ಎನ್‌.ಟಿ. ಬಸವರಾಜ್‌, ಗದಿಗೇಶ್‌ ಪಾಳೇದ್‌, ಸುರೇಶ್‌, ಶಿವಕುಮಾರ್‌, ಪಳನಿಸ್ವಾಮಿ, ಯುವರಾಜ್‌, ಮುಜಾಹಿದ್‌ ಪಾಷಾ, ಪ್ರಸನ್ನ ಬೆಳಕೇರಿ ಇತರರು ಇದ್ದರು.

ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿಯವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಕೆ ಮುನ್ನ ಹೊಸ ಮೋಟಾರು ವಾಹನ ಕಾಯ್ದೆ ಹೆಚ್ಚುವರಿ ದಂಡ ವಿರೋಧಿ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜೆ. ಬಣಕಾರ್‌ ಜೊತೆ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next