ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೋಟಾರ್ ವಾಹನ ಹೊಸ ಕಾಯ್ದೆ ಖಂಡಿಸಿ, ಹಿಂದಿನ ಕಾಯ್ದೆಯನ್ನೇ ಮುಂದುವರಿಸಲು ಒತ್ತಾಯಿಸಿ ಮಂಗಳವಾರ ಮೋಟಾರ್ ವಾಹನ ಕಾಯ್ದೆ ಹೆಚ್ಚುವರಿ ದಂಡ ವಿರೋಧಿ ಸಮಿತಿ ನೇತೃತ್ವದಲ್ಲಿ ಹೆಲ್ಮೆಟ್ ಧರಿಸಿ ಕಾಲ್ನಡಿಗೆ ಮೂಲಕ ನಗರದಲ್ಲಿ ಪ್ರತಿಭಟಿಸಲಾಯಿತು.
ಜಯದೇವ ವೃತ್ತದಲ್ಲಿ ಸೇರಿದ್ದ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಕಮ್ಯೂನಿಸ್ಟ್ ಪಕ್ಷ, ಕಾಂಗ್ರೆಸ್ ಮುಖಂಡರು, ವಿದ್ಯಾರ್ಥಿಗಳು, ಅತ್ಯಂತ ಹೊರೆಯಾಗಲಿರುವ ಮೋಟಾರ್ ವಾಹನ ಹೊಸ ಕಾಯ್ದೆ ಹಿಂಪಡೆಯಲು ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮ್ಯೂನಿಸ್ಟ್ ಪಕ್ಷದ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಸರ್ಕಾರ ಯಾವುದೇ ಕಾಯ್ದೆ ಜಾರಿಗೆ ಮುನ್ನ ಅದರ ಸಾಧಕ-ಬಾಧಕದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಬೇಕು. ಈ ಹಿಂದಿದ್ದ ಸರ್ಕಾರಗಳು ನಾವು ಹೋರಾಟ ಮಾಡಿ ಮನವಿ ಸಲ್ಲಿಸಿದರೆ ಆ ಬಗ್ಗೆ ಸ್ಪಂದಿಸಿ, ಚರ್ಚಿಸಿ ಕ್ರಮ ಕೈಗೊಳ್ಳುತ್ತಿದ್ದವು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಕಾಯ್ದೆ ಜಾರಿ ಮಾಡುತ್ತಿದೆ. ಜನಸಾಮಾನ್ಯರಿಗೆ ತೊಂದರೆಯಾದರೂ ಆ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರೀ ದಂಡ ಹಾಕುವುದರಿಂದಲೇ ಬದಲಾವಣೆ ಸಾಧ್ಯವಿಲ್ಲ. ಮೊದಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಆ ನಂತರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಿ. ಲಾರಿಗಳಿಗೆ 40-50 ಸಾವಿರ ರೂ.ಗಳಷ್ಟು ದಂಡ ವಿಧಿಸಿದರೆ ಅವುಗಳ ಮಾಲೀಕರು ಲಾರಿ ಓಡಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಅವರು, ತಕ್ಷಣ ರಾಜ್ಯ ಸರ್ಕಾರ ಕೂಡ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಕಾಯ್ದೆ ಹಿಂಪಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸಮಿತಿ ಮತ್ತೋರ್ವ ಮುಖಂಡ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ನಮ್ಮ ವಿರೋಧವಿಲ್ಲ.. ಆದರೆ, ಹೊಸ ಕಾಯ್ದೆ ಅನ್ವಯ ದಂಡ ಜನಸಾಮಾನ್ಯರಿಗೆ ಭಾರಿ ಹೊರೆಯಾಗಲಿದೆ. ಹೊಸದಾಗಿ ಜಾರಿಗೊಳಿಸಿರುವ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದಲ್ಲಿ ಬಡವರು ಮತ್ತು ಜನಸಾಮಾನ್ಯರು ಭಾರಿ ಪ್ರಮಾಣದ ದಂಡ ಭರಿಸಬೇಕಿದೆ. ರೈತರು, ಕೂಲಿ ಕಾರ್ಮಿಕರು ತಾವು ದುಡಿದ ಹಣವನ್ನೆಲ್ಲಾ ದಂಡ ಕಟ್ಟಿ ಬರಿಗೈಯಲ್ಲಿ ಮನೆಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ರಾಜ್ಯಗಳು ಕೇಂದ್ರದ ಈ ದುಬಾರಿ ದಂಡದ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ದಂಡದ ಪ್ರಮಾಣ ಇಳಿಕೆ ಮಾಡುವುದಾಗಿ ಹೇಳಿದ್ದಾರೆಯೇ ಹೊರತು ಆ ಬಗ್ಗೆ ಇನ್ನೂ ಆದೇಶ ಹೊರಡಿಸಿಲ್ಲ. ತಕ್ಷಣ ರಾಜ್ಯದಲ್ಲೂ ಸಹ ಹಿಂದಿದ್ದ ಕಾಯ್ದೆಯನ್ನೇ ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.
ಮೋಟಾರ್ ವಾಹನ ಕಾಯ್ದೆಗೆ ನಮ್ಮ ವಿರೋಧ ಇಲ್ಲ. ಆದರೆ, ಮೊದಲು ಸಾರ್ವಜನಿಕರಲ್ಲಿ ಆ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ. ಆದ್ದರಿಂದ ಒಂದು ವರ್ಷದಲ್ಲಿ ಕಾಯ್ದೆ ಅರಿವು ಮೂಡಿಸಿ, ನಂತರ ಕ್ರಮ ವಹಿಸಲಿ. ಅಲ್ಲದೆ, ಏಕಗವಾಕ್ಷಿ ಮೂಲಕ ಚಾಲನಾ ಪರವಾನಗಿ, ವಿಮೆ, ಎಮಿಷನ್ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆ ಒದಗಿಸುವ ವ್ಯವಸ್ಥೆ ಆರಂಭಿಸಲಿ. ಈ ಕಾರ್ಯಕ್ಕೆ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಲಕ್ಷಾಂತರ ಮಂದಿ ಬೀದಿಗೆ ಬಂದಿದ್ದಾರೆ. ಇಂತಹ ವೇಳೆ ಅವರ ನೆರವಿಗೆ ಮುಂದಾಗದ ಸರ್ಕಾರ ಸಾಮಾನ್ಯಜನರೂ ಸಂಕಷ್ಟಕ್ಕೊಳಗಾಗುವ ಕಾಯ್ದೆ ಜಾರಿಗೊಳಿಸಿರುವುದು ನ್ಯಾಯಸಮ್ಮತವಲ್ಲ. ಕೂಡಲೇ ದಂಡದ ಪ್ರಮಾಣ ಇಳಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಕರವೇ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ರಾಮೇಗೌಡ, ಹಿರಿಯ ಪತ್ರಕರ್ತ ಬಿ.ಎನ.ಮಲ್ಲೇಶ್, ರೈತಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್, ಇತರರು ಮಾತನಾಡಿ, ಕೇಂದ್ರದ ಹೊಸ ಕಾಯ್ದೆ ಹಿಂಪಡೆಯಲು ಆಗ್ರಹಿಸಿದರು.
ಕಮ್ಯೂನಿಸ್ಟ್ ಪಕ್ಷದ ಮುಖಂಡರಾದ ಆವರಗೆರೆ ಉಮೇಶ್, ಆವರಗೆರೆ ಚಂದ್ರು, ವಿದ್ಯಾರ್ಥಿ ಕಾಂಗ್ರೆಸ್‌ನ ಮುಜಾಹಿದ್. ಸಾಗರ್, ಮಹಿಳಾ ಕಾಂಗ್ರೆಸ್‌ನ ಶುಭಮಂಗಳ, ಕನ್ನಡ ಪರ ಸಂಘಟನೆಯ ಕೆ.ಜಿ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಆಯೂಬ್ ಪೈಲ್ವಾನ್, ಎ.ನಾಗರಾಜ್, ಶ್ರೀಕಾಂತ್ ಬಗೇರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾಕಾರರು ಹೆಲ್ಮೆಟ್ ಹಾಕಿಕೊಂಡು ಕಾಲ್ನಡಿಗೆ ಮೂಲಕ ಗಾಂಧಿ ಸರ್ಕಲ್, ಪಿಬಿ ರಸ್ತೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಕಳುಹಿಸಲು ಮನವಿ ಸಲ್ಲಿಸಿದರು.