Advertisement

ಜಿಲ್ಲೆಗೆ 5 ಲಕ್ಷ ಸದಸ್ಯತ್ವದ ಗುರಿ: ಕೋಟಾ

10:10 AM Jun 29, 2019 | Naveen |

ದಾವಣಗೆರೆ: ಜನಸಂಘದ ಕಾಲದಿಂದಲೂ ಕಾರ್ಯಕರ್ತರ ರಾಷ್ಟ್ರೀಯತೆ, ದೇಶಪ್ರೇಮದ ಆಧಾರವಾಗಿ ಬೆಳೆಯುತ್ತಿರುವ ಬಿಜೆಪಿ ಈಗ ಜಗತ್ತಿನಲ್ಲೇ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಹಣ, ಅಧಿಕಾರಕ್ಕಾಗಿ ಇದ್ದರೆ. ಬಿಜೆಪಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದೆ. ರಾಷ್ಟ್ರಕ್ಕಾಗಿ ತಮ್ಮ ಬದುಕನ್ನೇ ಸಮರ್ಪಣೆ ಮಾಡಿದಂತಹವರ ಪಡೆಯೇ ಬಿಜೆಪಿಯಲ್ಲಿ ಇದೆ ಎಂದರು.

ಜನಸಂಘ ಕಾಲದಿಂದಲೂ ಬಿಜೆಪಿ ಸಂಘಟನೆ, ಕಾರ್ಯಕರ್ತರ ಶಕ್ತಿ, ರಾಷ್ಟ್ರೀಯತೆ, ದೇಶಭಕ್ತಿ ಎಂಬ ಅಂಶಗಳ ಆಧಾರದಲ್ಲಿ ಬೆಳೆದು ಬಂದಿದೆ.ಈಗ 11 ಕೋಟಿಯಷ್ಟು ಸದಸ್ಯರನ್ನು ಬಿಜೆಪಿ ಹೊಂದಿದೆ. ಜಗತ್ತಿನ ಯಾವುದೇ ರಾಜಕೀಯ ಪಕ್ಷ ಇಷ್ಟೊಂದು ಸಂಖ್ಯೆಯ ಸದಸ್ಯತ್ವ ಹೊಂದಿಲ್ಲ . ಕಾರ್ಯಕರ್ತರ ಪಡೆಯನ್ನೇ ಹೊಂದಿರುವ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌, ಕಾಂಗ್ರೆಸ್‌ನೊಂದಿಗೆ ಹೋಲಿಕೆ ಮಾಡುವುದು ಸರಿ ಅಲ್ಲ ಎಂದು ತಿಳಿಸಿದರು.

ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ಹಾಗಾಗಿಯೇ ಮುಂದೆಯೂ ಇನ್ನೂ ಹೆಚ್ಚಿನ ಸದಸ್ಯತ್ವ ಹೊಂದುವ ಉದ್ದೇಶದಿಂದ ಜು.6 ರಿಂದ ಆ.11ರ ವರೆಗೆ ರಾಜ್ಯದ 58,500 ಬೂತ್‌ ಒಳಗೊಂಡಂತೆ ದೇಶದ್ಯಾಂತ ಸದಸ್ಯತಾ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ 5 ಲಕ್ಷ ಸದಸ್ಯತಾ ನೋಂದಣಿ ಗುರಿ ಇರುವ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ನಂಬರ್‌ ಒನ್‌ ಸ್ಥಾನ ಪಡೆಯಬೇಕು ಎಂದು ಆಶಿಸಿದರು.

ರಾಜ್ಯ ಸರ್ಕಾರ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗುವುದು. ಅದಕ್ಕಾಗಿ ಬಜೆಟ್‌ನಲ್ಲಿ 12 ಸಾವಿರ ಕೋಟಿ ಇಡಲಾಗಿದೆ ಎಂದು ಹೇಳುತ್ತಿದೆ. ಆದರೆ, ಅರ್ಧದಷ್ಟು ರೈತರ ಸಾಲ ಮನ್ನಾ ಮಾಡಿಲ್ಲ. ಕೇಂದ್ರದ ಕಿಸಾನ್‌ ಸಮ್ಮಾನ್‌ ಯೋಜನೆ 76 ಲಕ್ಷ ರೈತ ಕುಟುಂಬಗಳಿಗೆ ತಲುಪಬೇಕು. ಆದರೆ, 10 ಲಕ್ಷ ಕುಟುಂಬಗಳಿಗೆ ತಲುಪಿಲ್ಲ. ಆಯುಷ್ಮಾನ್‌ ಭಾರತ್‌ ಯೋಜನೆ ತಲುಪಿಸುವಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ಇಂತಹ ಎಲ್ಲ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, 1972-73ರಲ್ಲಿ ಜನಸಂಘದ ಸದಸ್ಯತ್ವ, ತಾಲೂಕು ಸಮಿತಿ ರಚನೆಗೆ ಕಷ್ಟಪಡಬೇಕಾದ ಕೆಟ್ಟ ಸ್ಥಿತಿ ಇತ್ತು. ಈಗ ಬಿಜೆಪಿ ಜಿಲ್ಲೆಯಲ್ಲಿ 5 ಲಕ್ಷ ಸದಸ್ಯತ್ವ ಹೊಂದಿದೆ. ಅಭಿಯಾನದಲ್ಲಿ ಮನೆ ಮನೆಗೆ ತೆರಳಿ ಜನರ ಸಮಸ್ಯೆ ಆಲಿಸಿ, ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸವನ್ನ ಕಾರ್ಯಕರ್ತರ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಎಲ್ಲರೂ ಒಟ್ಟಾಗಿ 5 ಲಕ್ಷ ಸದಸ್ಯತ್ವ ಗುರಿಯನ್ನೂ ಮೀರಿ ಹೆಚ್ಚಿನ ಸದಸ್ಯತ್ವ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್‌. ಶಿವಕುಮಾರ್‌ ಪ್ರಾಸ್ತಾವಿಕ ಮಾತುಗಳಾಡಿದರು. ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ವೈ. ಮಲ್ಲೇಶ್‌, ಚಂದ್ರಶೇಖರ್‌, ಎನ್‌.ಇ. ಅಣಬೇರು ಜೀವನಮೂರ್ತಿ, ಸಿ. ರಮೇಶ್‌ನಾಯ್ಕ, ಎಚ್.ಎಂ. ರುದ್ರಮುನಿಸ್ವಾಮಿ, ಕೆ. ಹೇಮಂತ್‌ಕುಮಾರ್‌ ಇತರರು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌. ರಾಜಶೇಖರ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next