Advertisement

ಒಳ್ಳೆಯ ಕೆಲಸಕ್ಕೆ ರಾಜೀನಾಮೆಗೂ ಸೈ

10:22 AM Jun 07, 2019 | Naveen |

ದಾವಣಗೆರೆ: 6 ಲೈನ್‌( ಷಟ್ಪಥ) ರಸ್ತೆ ಕೆಲಸ ಮಾಡುವ ಮುನ್ನ ಅಗತ್ಯ ಹಾಗೂ ಸಮಸ್ಯೆ ಇರುವಂತಹ ಕಡೆ ಸಮರ್ಪಕವಾಗಿ ಅಂಡರ್‌ಪಾಸ್‌, ಸರ್ವೀಸ್‌ ರೋಡ್‌(ಸೇವಾ ರಸ್ತೆ) ನಿರ್ಮಾಣ ಆಗಲೇಬೇಕು. ಜನರಿಗೆ ಒಳ್ಳೆಯ ಕೆಲಸಕ್ಕಾಗಿ ನಾನೇ ಧರಣಿ ಕುಳಿತುಕೊಳ್ಳುತ್ತೇನೆ. ರಾಜೀನಾಮೆ ಬೇಕಾದರೂ ಕೊಡುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕುರಿತಂತೆ ರೈತರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2018ರ ಸೆಪ್ಟಂಬರ್‌ನಿಂದಲೂ ಸಮರ್ಪಕವಾಗಿ ಅಂಡರ್‌ಪಾಸ್‌, ಸೇವಾರಸ್ತೆ ನಿರ್ಮಾಣ ಮಾಡಬೇಕು ಎಂದು ಪತ್ರ ಬರೆದಿದ್ದೇನೆ. ಸಂಬಂಧ ಸಚಿವರನ್ನು ಎರಡು ಬಾರಿ ಭೇಟಿ ಮಾಡಿದ್ದೇನೆ. ಆದರೂ, ಕೆಲಸ ಆಗಿಲ್ಲ. ಯಾರಧ್ದೋ ಕಿತಮೆ ಇರಬೇಕು ಎಂದರು.

ನಾನೇನು ಯಾರ ಹತ್ತಿರವೂ ಒಂದು ಪೈಸೆ ತೆಗೆದುಕೊಳ್ಳೋದಿಲ್ಲ. ಕೆಲಸ ಆಗದೇ ಇರುವುದಕ್ಕೆ ಜನರು ಏನೇನೋ ಮಾತನಾಡುತ್ತಾರೆ. ಹಳ್ಳಿಗಳಿಗೆ ಹೋದಾಗ ಸರಿಯಾಗಿ ರಸ್ತೇನೇ ಮಾಡಿಸಲಿಕ್ಕೆ ಆಗಿಲ್ಲ ಎನ್ನುತ್ತಾರೆ. ನಮ್ಮದೇ ಸರ್ಕಾರವಿದ್ದೂ ಕೆಲಸ ಮಾಡಿಕೊಡದೇ ಹೋದರೆ ನಾವೇಕೆ ಇರಬೇಕು. ಜನರಿಗೆ ಕೆಲಸ ಆಗಬೇಕು ಎನ್ನುವುದಾದರೆ ನಾನೇ ಹೋರಾಟ ಮಾಡುತ್ತೇನೆ ಮಾತ್ರವಲ್ಲ, ರಾಜೀನಾಮೆ ಬೇಕಾದರೂ ಕೊಡುತ್ತೇನೆ ಎಂದು ಹೇಳಿದರು.

ಎಲ್ಲೆಲ್ಲಿ ಅಗತ್ಯ ಇದೆಯೋ, ಸಮಸ್ಯೆ ಇದೆಯೋ ಅಲ್ಲಿ ಯಾವುದೇ ತೊಂದರೆ ಇಲ್ಲದೆ ಅಂಡರ್‌ಪಾಸ್‌, ಸರ್ವೀಸ್‌ ರೋಡ್‌ ಆಗಬೇಕು. ಜನರಿಗೆ ಒಳ್ಳೆಯದಾಗಬೇಕು. ಸರಾಗವಾಗಿ ರೈತರು, ವಾಹನಗಳು ಓಡಾಡುವಂತಾಗಬೇಕು ಎಂದು ಸಿದ್ದೇಶ್ವರ್‌ ಹೇಳಿದರು.

ಹುಣಸೆಕಟ್ಟೆ, ಕೊಗ್ಗನೂರು, ಮಲ್ಲಶೆಟ್ಟಿಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ, ಎಚ್. ಕಲ್ಪನಹಳ್ಳಿ ಬಳಿ ಜನರು, ವಾಹನಗಳಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಅಂಡರ್‌ಪಾಸ್‌, ಸೇವಾರಸ್ತೆ ನಿರ್ಮಾಣ ಮಾಡಬೇಕು. ಅಲ್ಲಿಯವರೆಗೆ ಷಟ್ಪಥ ಕಾಮಗಾರಿ ಮಾಡುವಂತೆ ಇಲ್ಲ. ಟೋಲ್ ದರ ಹೆಚ್ಚಿಸುವಂತೆಯೂ ಇಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಂದಿನ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಕೈಗೊಂಡ ತೀರ್ಮಾನದ ಬಗ್ಗೆ ನಡಾವಳಿ ಪತ್ರಕ್ಕೆ(ಪ್ರೊಸಿಜರ್‌ ಕಾಪಿ) ಸಂಬಂಧಪಟ್ಟ ಅಧಿಕಾರಿಗಳು ಸಹಿ ಹಾಕಬೇಕು. ಸಭೆಯ ಪ್ರೊಸಿಜರ್‌ ಕಾಪಿಯನ್ನು ಸಂಬಂಧಿತ ಸಚಿವರ ಗಮನಕ್ಕೆ ತರಲಾಗುವುದು. ಅಧಿಕಾರಿಗಳು ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದಂತೆ ನಡೆದುಕೊಳ್ಳಬೇಕು. ಒಂದೊಮ್ಮೆ ಅಂಡರ್‌ಪಾಸ್‌, ಸೇವಾರಸ್ತೆ ಕೆಲಸ ಮಾಡದೆ 6 ಲೈನ್‌ ರಸ್ತೆ ಕೆಲಸ ಮಾಡುವುದಕ್ಕೆ ಮುಂದಾದರೆ. ಯಾವುದೇ ಕಾರಣಕ್ಕೂ ಕೆಲಸ ಮಾಡುವುದಕ್ಕೆ ಬಿಡಲೇಬೇಡಿ ಎಂದು ಸಭೆಯಲ್ಲಿ ಇದ್ದ ಜನಪ್ರತಿನಿಧಿಗಳು, ಮುಖಂಡರಿಗೆ ತಿಳಿಸಿದರು.

ಇಂದಿನ ಸಭೆಯಲ್ಲಿನ ನಿರ್ಣಯದಂತೆಯೇ ಅಂಡರ್‌ಪಾಸ್‌, ಸೇವಾರಸ್ತೆ ನಿರ್ಮಾಣ ಮಾಡಲಾಗುವುದು. ಮುಖ್ಯರಸ್ತೆಯಿಂದ ಎರಡು ಕಡೆ 150 ಮೀಟರ್‌ ಸುತ್ತಳತೆಯಲ್ಲಿ ಯಾವುದೇ ಕೆಲಸ ಮಾಡುವುದೇ ಇಲ್ಲ. ಅಂಡರ್‌ಪಾಸ್‌, ಸರ್ವೀಸ್‌ ರೋಡ್‌ ಆಗುವ ತನಕ ಟೋಲ್ ದರ ಹೆಚ್ಚಿಸುವುದಿಲ್ಲ. ಈಗಿರುವ ದರವನ್ನೆ ಮುಂದುವರೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಚಿತ್ರದುರ್ಗ ವಿಭಾಗದ ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್‌ ಸಭೆಗೆ ತಿಳಿಸಿದರು.

ಅಂಡರ್‌ಪಾಸ್‌, ಸರ್ವೀಸ್‌ ರೋಡ್‌ ಮಾಡಿಕೊಡುವ ತನಕ 6 ಲೈನ್‌ ಕಾಮಗಾರಿಗೆ ಜನರು ಅವಕಾಶ ನೀಡುತ್ತಿಲ್ಲ ಎಂಬ ವಿಷಯದ ಬಗ್ಗೆ ಸಂಬಂಧಿತ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಾತ್ರವಲ್ಲ ಲಿಖೀತವಾಗಿಯೂ ಮಾಹಿತಿ ನೀಡಲಾಗಿದೆ ಎಂದು ಮಲ್ಲಿಕಾರ್ಜುನ್‌ ತಿಳಿಸಿದರು.

ಹುಣಸೆಕಟ್ಟೆ, ಕೊಗ್ಗನೂರು, ಮಲ್ಲಶೆಟ್ಟಿಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ, ಎಚ್. ಕಲ್ಪನಹಳ್ಳಿ ಬಳಿ ಹೊಸ ಅಂಡರ್‌ಪಾಸ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ಮಲ್ಲಿಕಾರ್ಜುನ್‌ ತಿಳಿಸಿದರು.

ಜೂ.17 ರಂದು ದೆಹಲಿಯಲ್ಲೇ ಇರುತ್ತೇನೆ. ಪ್ರಸ್ತಾವನೆಯೊಂದಿಗೆ ಯೋಜನಾ ನಿರ್ದೇಶಕರೊಡಗೂಡಿ ಬಂದಲ್ಲಿ ಸಂಬಂಧಿತ ಸಚಿವರೊಡನೆ ಮಾತನಾಡಿ ಮಂಜೂರಾತಿ ಮಾಡಿಸಿಕೊಡುತ್ತೇನೆ. ಸಚಿವರಾದ ಸದಾನಂದಗೌಡ, ಪ್ರಹ್ಲಾದ್‌ ಜೋಶಿ ಅವರನ್ನು ಜೊತೆಗೆ ಕರೆದುಕೊಂಡು ಬರುತ್ತೇನೆ ಎಂದು ಸಂಸದ ಸಿದ್ದೇಶ್ವರ್‌ ತಿಳಿಸಿದರು.

ದಾವಣಗೆರೆ ಸ್ಮಾರ್ಟ್‌ಸಿಟಿ ಆಗುತ್ತಿದೆ. ದಾವಣಗೆರೆಯ ಪ್ರವೇಶ ಸುಂದರವಾಗಿರಬೇಕು. ಬಾಡ ಕ್ರಾಸ್‌ ಸಮೀಪದಲ್ಲಿ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದ ಬಳಿ ಬ್ಯೂಟಿಫಿಕೇಷನ್‌ ಕೆಲಸ ಮಾಡಬೇಕು ಎಂದು ಸಿದ್ದೇಶ್ವರ್‌ ಸೂಚಿಸಿದರು.

ಷಟ್ಪಥ ಕೆಲಸದ ಜೊತೆಗೆ ಬ್ಯೂಟಿಫಿಕೇಷನ್‌ ಕೆಲಸ ಕೈಗೆತ್ತಿಕೊಂಡಲ್ಲಿ ಅಂದಾಜು ವೆಚ್ಚ ಹೆಚ್ಚಾಗಲಿದೆ. ಅನುಮತಿ ನೀಡುವುದಿಲ್ಲ. ಹಾಗಾಗಿ ಅದಕ್ಕಾಗಿಯೇ ಪ್ರತ್ಯೇಕ ಅನುದಾನದಡಿ ಬ್ಯೂಟಿಫಿಕೇಷನ್‌ ಕೆಲಸ ಕೈಗೊಳ್ಳಲಾಗುವುದು. ಹದಡಿ ರಸ್ತೆಯ ಅಂಡರ್‌ಪಾಸ್‌ನ್ನು ಸರಿಯಾಗಿ ಮಾಡಲಾಗುವುದು ಎಂದು ಮಲ್ಲಿಕಾರ್ಜುನ್‌ ತಿಳಿಸಿದರು.

ಹೆಚ್ಚುವರಿ ಪ್ರಭಾರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹುಣಸೆಕಟ್ಟೆ, ಕೊಗ್ಗನೂರು, ಮಲ್ಲಶೆಟ್ಟಿಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ,ಎಚ್. ಕಲ್ಪನಹಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು, ಮುಖಂಡರು ಇತರರು ಇದ್ದರು.

ಅಧಿಕಾರಿಗಳಿಗೆ ತರಾಟೆ
ದನಾನೂ ಓಡಾಡೋಕೆ ಆಗದಂತೆ ಅಂಡರ್‌ಪಾಸ್‌ ಡಿಸೈನ್‌ ಮಾಡಿದ್ದೀರಲ್ಲಾ, ನೀವೇನು ಇಂಜಿನಿಯರಿಂಗ್‌ ಓದಿದೀರಾ ಹೆಂಗೆ. ಕೆಲವು ಕಡೆ ನೀರು ನಿಂತು ಜನರು ಓಡಾಡಲಿಕ್ಕೆ ಆಗುವುದೇ ಇಲ್ಲ. ಕೇಳಿದರೆ ಹಳೆಯದು ಎನ್ನುತ್ತೀರಿ. ಹಳೆಯದೋ, ಹೊಸದೋ ಸರಿಯಾಗಿ ಕೆಲಸ ಮಾಡಬೇಕಲ್ಲ. ನೀವ್ಯಾಕೆ ಇರೋದು ಬರೀ ಸ್ಯಾಲರಿ ತೆಗೆದುಕೊಳ್ಳೊಕ್ಕಾ… ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು. ಸಂಸದರು ಮನಸ್ಸು ಮಾಡಿದರೆ ಕೆಲಸ ಆಗುತ್ತದೆ ಎಂದು ಇಂಜಿನಿಯರ್‌ಗಳು ಹೇಳುತ್ತಾರೆ ಎಂದು ಹೊನ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷರು ಹೇಳಿದಾಗ, ಆ ಇಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು. ನನ್ನ ಮೇಲೆ ಏನೇನೋ ಹೇಳಬೇಡಿ ಎಂದು ಗರಂ ಆಗಿ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next