Advertisement

ಜಾತಿ ಲೇಪನದಿಂದ ವೃತ್ತಿಗಳೇ ಮಾಯ

10:30 AM Aug 23, 2019 | Naveen |

ದಾವಣಗೆರೆ: ವೃತ್ತಿಗೆ ಜಾತಿ ಹಚ್ಚಿದ ಕಾರಣದಿಂದ ಇಂದು ಆ ವೃತ್ತಿಗಳೇ ಮರೆಯಾಗುವಂತಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಾ ಮಠದ ಪಟ್ಟಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದ್ದಾರೆ.

Advertisement

ಗುರುವಾರ, ನಗರದ ಎಸ್‌.ಎಸ್‌.ಕಲ್ಯಾಣ ಮಂಟಪದಲ್ಲಿ ಸಹಮತ ವೇದಿಕೆ ನಮ್ಮ ನಡಿಗೆ ಕಲ್ಯಾಣದೆಡೆಗೆ…ಶೀರ್ಷಿಕೆಯಡಿ ಆಯೋಜಿಸಿದ್ದ ಮತ್ತೆ ಕಲ್ಯಾಣ…ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಈ ಹಿಂದೆ ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ ವೃತ್ತಿಯವರಿಗೆ ಜಾತಿ ಲೇಪನ ಹಚ್ಚಿದ್ದರಿಂದ ಈಗ ಆ ವೃತ್ತಿ ಮಾಡುವವರೇ ಇಲ್ಲದಂತಾಗಿದೆ. ಯಾರೂ ಸಹ ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗಾಗಿ ಮನುಷ್ಯ ಅಂತರಂಗದಿಂದ ಜಾತಿ ಭಾವ ಕಿತ್ತು ಒಗೆದು, ವಿಶ್ವಮಾನವನಾಗಿ ಬದುಕಬೇಕು ಎಂದರು.

ಒಬ್ಬ ಬಸವಣ್ಣ ಜಾತಿ, ಆಚಾರದ ವಿರುದ್ಧ ಸಂದೇಶ ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಿ ಸುಧಾರಕನಾದ. ಒಬ್ಬ ಬಸವಣ್ಣನಿಂದ ಅದೆಲ್ಲಾ ಸಾಧ್ಯವಾಗುವುದಾದಲ್ಲಿ ಆತನ ತತ್ವ ಪಾಲಿಸುವ ಆಪಾರ ಸಂಖ್ಯೆಯ ನಮ್ಮಿಂದ ಏಕಾಗದು? ಎಂಬ ಪ್ರಶ್ನೆ ನಾವು ಹಾಕಿಕೊಳ್ಳಬೇಕು. ಮನುಷ್ಯ ಮನಸ್ಸು ಮಾಡಿದರೆ ಏನೇಲ್ಲಾ ಸಾಧಿಸಬಹುದು. ಅಸಾಧ್ಯ ಎಂಬ ಮನೋಭಾವ ತ್ಯಜಿಸಿ ಸಾಧ್ಯ ಎಂಬ ನಿಟ್ಟಿನಲ್ಲಿ ಯೋಚಿಸಬೇಕು. ನಕಾರಾತ್ಮಕ ಚಿಂತನೆ ಬಿಟ್ಟು ಸಕಾರಾತ್ಮಕವಾಗಿ ಹೆಜ್ಜೆ ಇಡುವ ಮೂಲಕ ಶರಣರ ಆಶಯ ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಮೊದಲು ನಮ್ಮ ದೋಷ ಸರಿಪಡಿಸಿಕೊಳ್ಳಬೇಕು. ನಮ್ಮ ತಪ್ಪು ತಿದ್ದಿಕೊಳ್ಳದೇ ಮತ್ತೂಬ್ಬರ ದೂರುವುದು ಸರಿಯಲ್ಲ. ಸುಧಾರಣೆಯಾಗಲು ಗುಡಿ ಸಂಸ್ಕೃತಿಯಿಂದ ಹೊರಬರಬೇಕು. ದೇವಸ್ಥಾನ ನಿರ್ಮಿಸುವ ಬದಲು ನಿಮ್ಮ ದೇಹವನ್ನೇ ದೇವಸ್ಥಾನವನ್ನಾಗಿಸಿಕೊಳ್ಳಬೇಕು. ಬಸವಣ್ಣನ ಸಂದೇಶ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಆ ಮೂಲಕ ಆದರ್ಶಪ್ರಾಯರಾಗಬೇಕು ಎಂದು ಹೇಳಿದರು.

ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಜನರು ಹಣದ ಹಿಂದೆ ಬಿದ್ದಿದ್ದಾರೆ. ಹಾಗಾಗಿ ಬದುಕನ್ನು ನರಕ ಮಾಡಿಕೊಂಡಿದ್ದಾರೆ. ಅಂತರಂಗದಲ್ಲಿ ಬೆಳಕು ಮೂಡದ ಹೊರತು ಬದುಕು ಬದಲಾಗದು. ಮಕ್ಕಳಾದರೂ ಉತ್ತಮ ಸಂಸ್ಕಾರ ಕಲಿಯಬೇಕು. ಆ ನಿಟ್ಟಿನಲ್ಲಿ ಯುವಸಮೂಹಕ್ಕೆ ಸಾಣೇಹಳ್ಳಿಯಲ್ಲಿ 15 ದಿನಗಳ ಕಾರ್ಯಾಗಾರ ನಡೆಸಲಿದ್ದೇವೆ. ತರಬೇತಿ ಪಡೆದ ಮಕ್ಕಳು ಶರಣರ ಆಶಯ ಮೈಗೂಡಿಸಿಕೊಂಡು ಮತ್ತೆ ಕಲ್ಯಾಣ ಆರಂಭಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

ವಚನಕಾರರಲ್ಲಿ ಜಾತಿ ವಿನಾಶದ ಕಲ್ಪನೆ ವಿಷಯ ಕುರಿತು ಉಪನ್ಯಾಸ ನೀಡಿದ ಶಿವಮೊಗ್ಗದ ಮಾನಸ ಸಾಂಸ್ಕೃತಿಕ ಕೇಂದ್ರ ನಿರ್ದೇಶಕ ಡಾ| ರಾಜೇಂದ್ರ ಚೆನ್ನಿ, ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ನೆರೆ ಹಾವಳಿಯಿಂದ ಸಂಕಷ್ಟಕ್ಕೊಳಗಾದವರಿಗೆ ತೆರೆದ ಗಂಜಿಕೇಂದ್ರದಲ್ಲೇ ಜಾತಿ ವ್ಯವಸ್ಥೆ ಮಾತನಾಡುತ್ತಿದೆ. ಆ ಕೇಂದ್ರದಲ್ಲಿ ಮೇಲ್ಜಾತಿಯವರು ಕೆಳಜಾತಿ ಜನರೊಂದಿಗೆ ಇರಲು ನಿರಾಕರಿಸಿದ್ದಾರೆ. ಇದು ನಾವು ಯಾವ ಮಟ್ಟ ತಲುಪಿದ್ದೇವೆ ಎಂಬುದನ್ನು ತೋರಿಸುತ್ತಿದೆ ಎಂದರು.

ಮನಸ್ಸಿನಲ್ಲಿ ಅಂತಃಕರಣ ತೊರೆದಿದೆ. ಒಂದು ದ್ವೀಪ ರೀತಿ ಬದುಕುತ್ತಿದ್ದೇವೆ. ನಡವಳಿಕೆ, ಮಾತುಗಳಲ್ಲಿ ಹಿಂಸೆ ಮನೆ ಮಾಡಿದೆ. ಮತ್ತೂಬ್ಬರ ಬಗ್ಗೆ ಅಸಹನೆ ತುಂಬಿಕೊಂಡಿದೆ. 12ನೇ ಶತಮಾನದ ಶರಣರ ವಚನಗಳು ಅರ್ಥಪೂರ್ಣ. ಅವು ಇಂದಿಗೂ ಅನ್ವಯಿಸುತ್ತಿವೆ. ಇತಿಹಾಸದಲ್ಲಿ ತಪ್ಪಿದೆ ಅದನ್ನು ಸರಿಪಡಿಸುತ್ತೇವೆ ಎಂಬ ಭ್ರಮೆ ಬೇಡ. ಅದು ಕಲ್ಯಾಣದ ಮಾರ್ಗವಲ್ಲ. ಜಾತಿ ವ್ಯವಸ್ಥೆ ನಾಗರಿಕ ಸಮಾಜಕ್ಕೆ ಶಾಪ. ಅಂತಃಕರಣದ ಮೂಲಕ ಜಾತಿ ವ್ಯವಸ್ಥೆ ಮೆಟ್ಟಿ ನಿಲ್ಲಬೇಕು. ಹಾಗಾಗಿ ನಾವು ಮತ್ತೆ ಕಲ್ಯಾಣದ ಪ್ರಜ್ಞೆ ಬೆಳೆಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.

ವಚನ ಸಾಹಿತ್ಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ವಿಷಯ ಕುರಿತು ಉಪನ್ಯಾಸ ನೀಡಿದ ಹಾವೇರಿಯ ಡಾ| ಅನುಸೂಯ ಕಾಂಬಳೆ, ಸ್ವರ್ಗ-ನರಕ ಎಂಬುದೇ ಜಾತಿ ವ್ಯವಸ್ಥೆಯ ಪರಿಕಲ್ಪನೆ. ಮನುಷ್ಯ ಬದುಕಿನ ಪರವಾಗಿ ಯೋಚಿಸಬೇಕೆ ಹೊರತು ಧರ್ಮ, ದೇವರ ಕುರಿತಲ್ಲ. ಬಸವಣ್ಣ ಸ್ವಾಭಿಮಾನದ ಸಂಕೇತ. ಜನರ ಮನಸ್ಸನ್ನು ವಚನಗಳ ಮೂಲಕ ತಿದ್ದಿದರು. ಬವಣೆಗಳ ನಿರ್ಮೂಲನೆಗೆ ಮುಂದಾಗುವುದೇ ಶರಣಧರ್ಮ ಎಂದರು.

ದಾವಣಗೆರೆ ಬಸವ ಬಳಗದ ಸಂಚಾಲಕ ವಿ.ಸಿದ್ದರಾಮ ಶರಣರು ಅಧ್ಯಕ್ಷತೆ ವಹಿಸಿದ್ದರು. ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗುರುಬಸವ ಸ್ವಾಮೀಜಿ, ಹದಡಿ ಚಂದ್ರಗಿರಿ ವಿದ್ಯಾರಣ್ಯಶ್ವರ ಮಠದ ಶ್ರೀ ಸದ್ಗುರು ಮುರಳೀಧರ ವಿದ್ಯಾರಣ್ಯ ಸ್ವಾಮೀಜಿ, ರಾಜ್ಯಸಭಾ ಮಾಜಿ ಸದಸ್ಯ ಕೆ.ಆರ್‌.ಜಯದೇವಪ್ಪ, ಮಾಜಿ ಸಚಿವ ಎಸ್‌.ಎಸ್‌. ಪಾಟೀಲ್, ಎಚ್.ಕೆ. ರಾಮಚಂದ್ರಪ್ಪ, ಮುದೇಗೌಡ್ರ ಗಿರೀಶ್‌, ಲೋಕಿಕೆರೆ ನಾಗರಾಜ್‌, ಎಂ.ಶಿವಕುಮಾರ್‌ ವೇದಿಕೆಯಲ್ಲಿದ್ದರು.

ಮತ್ತೆ ಕಲ್ಯಾಣ ಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ| ಎಚ್.ಎಸ್‌.ಮಂಜುನಾಥ ಕುರ್ಕಿ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ಕಲಾತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next