Advertisement

ಸಾಮೂಹಿಕ ವಿವಾಹ ಪುಣ್ಯಕಾರ್ಯ

04:17 PM Jan 31, 2020 | Naveen |

ದಾವಣಗೆರೆ: ಸಾಮೂಹಿಕ ವಿವಾಹ ಮಹೋತ್ಸವ ನಡೆಸುವುದು ನಿಜಕ್ಕೂ ಪುಣ್ಯದ ಕೆಲಸ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ ಬಣ್ಣಿಸಿದರು.

Advertisement

ಗುರುವಾರ ಶ್ರೀಗುರು ರಾಮದಾಸಸ್ವಾಮಿ ಆಧ್ಯಾತ್ಮಿಕ ಮಂದಿರ ಟ್ರಸ್ಟ್‌ನಿಂದ 30ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ, ಶ್ರೀಗುರು ಮಾದಾರ ಚನ್ನಯ್ಯ ಸ್ವಾಮೀಜಿಯವರ ಜಯಂತ್ಯುತ್ಸವ, ರಾಮದಾಸ ಸ್ವಾಮಿ ಹಾಗೂ ಮಲ್ಲಯ್ಯ ಸ್ವಾಮಿ, ಕೊಂಡಯ್ಯ ಸ್ವಾಮಿಗಳ ಪುಣ್ಯಾರಾಧನೆಯಲ್ಲಿ ಮಾತನಾಡಿದರು.

ಇಂದಿನ ಕಾಲದಲ್ಲೂ ಅತಿ ದುಂದುವೆಚ್ಚ ಆಗುವುದು ವಿವಾಹ ಮಹೋತ್ಸವಕ್ಕೆ. ದುಂದುವೆಚ್ಚದ ವಿವಾಹಗಳಿಗೆ ಇತಿಶ್ರೀ ಹಾಡಿ, ಸಾಮೂಹಿಕ ಮದುವೆಯಲ್ಲಿ ಮದುವೆಯಾಗುವುದಾ… ಎಂಬ ಸಂಕುಚಿತ ಮನೋಭಾವ ಬಿಟ್ಟು ಎಲ್ಲರೂ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗುವ ಬಗ್ಗೆ ಯೋಚಿಸಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.

ಕೆಲ ವರ್ಷಗಳ ಹಿಂದೆ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಬಡವರು ಮಾತ್ರ ಭಾಗವಹಿಸುವರು ಎಂಬ ಭಾವನೆ ಈಗ ಬದಲಾಗುತ್ತಿದೆ. ಆರ್ಥಿಕವಾಗಿ ಸದೃಢತೆ ಇದ್ದವರು ಸಹ ಸಾಮೂಹಿಕ ವಿವಾಹಗಳಲ್ಲಿ ವಿವಾಹ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ಶ್ರೀಗುರು ರಾಮದಾಸಸ್ವಾಮಿ ಆಧ್ಯಾತ್ಮಿಕ ಮಂದಿರ ಟ್ರಸ್ಟ್‌ನ ಬಿ.ಎಚ್‌. ವೀರಭದ್ರಪ್ಪ ಮತ್ತವರ ಸಂಗಡಿಗರು ಕಳೆದ 30 ವರ್ಷದಿಂದ ಒಂದು ವರ್ಷವೂ ತಪ್ಪಿಸದೆ ಸಾಮೂಹಿಕ ವಿವಾಹ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನಿಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಶ್ರೀಗುರು ರಾಮದಾಸಸ್ವಾಮಿ ಆಧ್ಯಾತ್ಮಿಕ ಮಂದಿರ ಟ್ರಸ್ಟ್‌ನ ಬಿ.ಎಚ್‌. ವೀರಭದ್ರಪ್ಪನವರ ಸೇವೆ ಮಾದರಿ. ಅವರು ರಾಜಕೀಯದಲ್ಲಿ ಹಲವಾರು ಏರುಪೇರು ಕಂಡಿದ್ದಾರೆ. ರಾಜಕೀಯದಲ್ಲಿ ಮಾಡಬೇಕಾದ ಸೇವೆಯನ್ನ ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಮಾಡುವುದಕ್ಕೂ ತಮ್ಮ ಬೆಂಬಲ ಇದೆ ಎಂದು ತಿಳಿಸಿದರು.

ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಹಾನ್‌ ದಾರ್ಶನಿಕ ಬಸವಣ್ಣನವರು 12ನೇ ಶತಮಾನದಲ್ಲೇ ಸಾಮೂಹಿಕ ವಿವಾಹ ಮಹೋತ್ಸವದ ಪರಿಕಲ್ಪನೆ ಪ್ರಾರಂಭಿಸಿದವರು.

ಸಾಮೂಹಿಕ ವಿವಾಹ ಮಹೋತ್ಸವದಂತಹ ಮಾದರಿ ಕಾರ್ಯ ಮುಂದುವರೆಯುವಂತಾಗಬೇಕು ಎಂದು ಆಶಿಸಿದರು. ಅನೇಕರು ಸಮಾಜ ನಮಗೇನು ನೀಡಿದೆ ಎಂದು ಪ್ರಶ್ನೆ ಮಾಡುತ್ತಾರೆ. ನಾವು ಸಮಾಜಕ್ಕೆ ಏನು ಮಾಡಿದ್ದೇವೆ, ಯಾವ ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ಸಮಾಜ ಸೇವೆಯಿಂದ ಜೀವನ ಸಾರ್ಥಕ ಆಗುತ್ತದೆ. ಮಾನವ ಜನಾಂಗದ ಉದ್ಧಾರ, ಅಭಿವೃದ್ಧಿಗೆ ಮಹಾನೀಯರು ನೀಡಿರುವ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು.

ಪಾಂಡೋಮಟ್ಟಿಯ ಶ್ರೀ ಗುರು ಬಸವ ಸ್ವಾಮೀಜಿ ಮಾತನಾಡಿ, ಧರ್ಮ, ಜಾತಿ, ವರ್ಗ, ಹಣ ಎಲ್ಲವನ್ನೂ ಮೀರಿದ ಒಂದೊಳ್ಳೆಯ ಸಮಾಜ ಸೇವೆ ಎಂದರೆ ಸಾಮೂಹಿಕ ವಿವಾಹ ಮಹೋತ್ಸವ. ಇಡೀ ಸಮಾಜಕ್ಕೆ ಮಾದರಿ ಕಾರ್ಯವಾಗಿರುವ ಸಾಮೂಹಿಕ ವಿವಾಹ ಮಹೋತ್ಸವವನ್ನ ಮುಂದುವರೆಸಿಕೊಂಡು ಹೋಗಬೇಕು ಎಂದು ಆಶಿಸಿದರು.

ಇಂದಿನ ವಾತಾವರಣದಲ್ಲಿ ಗಂಡ ಸತ್ತರೆ ಹೆಂಡತಿ ವಿಧವೆ. ಹೆಂಡತಿ ಸತ್ತರೆ ಗಂಡನಿಗೆ ಮದುವೆ… ಎಂಬ ಸ್ಥಿತಿ ಬದಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಶ್ರೀಗುರು ರಾಮದಾಸಸ್ವಾಮಿ ಆಧ್ಯಾತ್ಮಿಕ ಮಂದಿರ ಟ್ರಸ್ಟ್‌ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ, ಎಲ್‌. ಎಂ. ಹನುಮಂತಪ್ಪ, ಬಿ.ಎಸ್‌. ಪುರುಷೋತ್ತಮ್‌, ಬಿ.ಎಂ. ರಾಮಸ್ವಾಮಿ, ಬಿ.ಎಂ. ಈಶ್ವರ್‌, ಬೆಳ್ಳೊಡಿ ದುಗ್ಗಪ್ಪ, ನೀಲಕಂಠಪ್ಪ, ಎಲ್‌.ಎಚ್‌. ಸಾಗರ್‌, ಗಂಗಮ್ಮ, ಬಿ. ವೀರಣ್ಣ ಇತರರು ಇದ್ದರು. 8 ಜೋಡಿಗಳ ವಿವಾಹ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next