Advertisement

ಬಿಎಸ್‌ವೈ ಸಿಎಂ ಆಗೋದು ನಿಶ್ಚಿತ

03:28 PM Jul 07, 2019 | Naveen |

ದಾವಣಗೆರೆ: ನನ್ನ ಜನ್ಮ ದಿನದಂದೇ ರಾಜ್ಯದ ಮೈತ್ರಿ ಸರ್ಕಾರ ಪತನಗೊಳ್ಳುವ ಸನ್ನಿವೇಶ ನಿರ್ಮಾಣಗೊಂಡಿದ್ದು, ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ಭರವಸೆ ವ್ಯಕ್ತಪಡಿಸಿದರು.

Advertisement

ಶನಿವಾರ ದೇವರಾಜ ಅರಸು ಬಡಾವಣೆಯ ಕೃಷ್ಣಭವಾನಿ ಸಭಾಭವನದಲ್ಲಿ ತಮ್ಮ 68ನೇ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಯುತ್ತಿತ್ತು. ಈಗ ಸರ್ಕಾರ ಪತನಗೊಳ್ಳುವ ವಾತಾವರಣ ನಿರ್ಮಾಣಗೊಂಡಿದೆ. ಮುಂದೆ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ರಚನೆಯಾದರೆ ಉತ್ತಮ ಕೆಲಸ ಮಾಡಲಿದೆ ಎಂದರು.

ಮೈತ್ರಿ ಸರ್ಕಾರ ಪತನಗೊಳ್ಳುವ ಕಾಲಕ್ಕೆ ಮಳೆಯೂ ಉತ್ತಮವಾಗಿ ಬರುತ್ತಿದೆ. ಬಿಎಸ್‌ವೈ ಮುಖ್ಯಮಂತ್ರಿ ಆಗುವ ಸಮಯದಲ್ಲಿ ಭದ್ರಾ ಜಲಾಶಯ ಕೂಡ ಭರ್ತಿ ಆಗಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಮಹಿಳೆಯರು, ದುರ್ಬಲರು, ಪರಿಶಿಷ್ಟ ಜಾತಿ-ಪಂಗಡದವರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಲಿದೆ. ಅಷ್ಟರಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೊಂಡಿದೆ. ತಾವೂ ಸಹ ಮುಂದಿನ 5 ವರ್ಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕಾರ್ಯ ಮಾಡಲು ಬದ್ಧನಿದ್ದೇನೆ ಎಂದು ತಿಳಿಸಿದರು.

ಹೊನ್ನಾಳಿ ಶಾಸಕ ಎಂಪಿ.ರೇಣುಕಾಚಾರ್ಯ ಮಾತನಾಡಿ, ರಾಜ್ಯದಲ್ಲಿದ್ದ ಜನ-ರೈತ ವಿರೋಧಿ ಸರ್ಕಾರ ಪತನವಾಗಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಎಸ್‌.ವಿ.ರಾಮಚಂದ್ರ, ಮಾಜಿ ಶಾಸಕರಾದ ಬಿ.ಪಿ.ಹರೀಶ್‌, ಎಂ.ಬಸವರಾಜ ನಾಯ್ಕ, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌, ಗಾಯತ್ರಿ ಸಿದ್ದೇಶ್ವರ್‌, ಇತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next