Advertisement

ಹೊನ್ನಾಳಿ ಹೊಡ್ತ ಈ ಬಾರಿ ಯಾರಿಗೆ?

12:39 PM Apr 29, 2019 | Naveen |

ದಾವಣಗೆರೆ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊನ್ನಾಳಿ ಹೊಡ್ತ…. ಎಂದೇ ಮತದಾರರ ಗುಟ್ಟಿನ ನಡೆ ಬಗ್ಗೆ ವಿಶೇಷವಾಗಿ ಬಣ್ಣಿಸುವ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಗಿಂತ ಈ ಬಾರಿ ಮತದಾನ ಏರಿಕೆ ಆಗಿದೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಶೇ. 78.82 ಮತದಾನ ಆಗಿದ್ದರೆ, ಈ ಬಾರಿ ಚುನಾವಣೆಯಲ್ಲಿ ಶೇ. 80.01 ಮತದಾನ ಆಗಿದೆ.

ಹಿಂದಿನ ಚುನಾವಣೆಯಲ್ಲಿ ಒಟ್ಟು 1,79,714 ಮತದಾರರ ಪೈಕಿ 1,41,662 ಮಂದಿ ಮತದಾನ ಮಾಡಿದ್ದರು.

ಈ ಬಾರಿಯ ಚುನಾವಣೆಯಲ್ಲಿ 96,097 ಪುರುಷರು, 95,327 ಮಹಿಳೆಯರು ಹಾಗೂ ನಾಲ್ವರು ಇತರರು ಒಳಗೊಂಡಂತೆ 1,91.428 ಮತದಾರರು ಇದ್ದರು. ಕಳೆದ ಚುನಾವಣೆಗಿಂತ ಈ ಬಾರಿ 11,714 ಮತದಾರರು ಹೆಚ್ಚಾಗಿದ್ದಾರೆ. ಕಳೆದ ಏ.23ರಂದು ನಡೆದ ಚುನಾವಣೆಯಲ್ಲಿ 78,901 ಪುರುಷರು 74,263 ಮಹಿಳೆಯರು ಮತದಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 1,53,164 ಮಂದಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ. ಇತರೆ ಮತದಾರರಲ್ಲಿ ಒಬ್ಬರೂ ಮತದಾನಕ್ಕೆ ಮುಂದಾಗಿಲ್ಲ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ದಾಖಲಾಗಿರುವ ಮತಗಳ ಅಂತರ 11,502. ಇನ್ನು ಶೇಕಡಾವಾರು ವ್ಯತ್ಯಾಸ 1.19%. ಈ ಕ್ಷೇತ್ರದಲ್ಲೂ ಈ ಬಾರಿ ಇದೇ ಪಕ್ಷ ಲೀಡ್‌ ಪಡೆಯಲಿದೆ ಎಂದು ಹೇಳುವುದು ಕಷ್ಟ ಸಾಧ್ಯ. ಏಕೆಂದರೆ ಮೈತ್ರಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೊನ್ನಾಳಿ ಪಟ್ಟಣದವರು. ಹಾಗಾಗಿ ತಮ್ಮ ಕ್ಷೇತ್ರದವರೇ ಅಭ್ಯರ್ಥಿ ಆಗಿರುವುದರಿಂದ ಹೊನ್ನಾಳಿ ಮತದಾರರು ಅವರ ಬಗ್ಗೆ ಒಲವು ತೋರುವ ಸಾಧ್ಯತೆ ಇದೆ. ಎಚ್.ಬಿ.ಮಂಜಪ್ಪ ಈ ಹಿಂದೆ ತಾಪಂ, ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಡಳಿತ ನಡೆಸಿದವರು.

Advertisement

ಈ ಬಾರಿಯ ಚುನಾವಣೆಯಲ್ಲಿ ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಮತದಾನ ಮಾಡಿದ್ದಾರೆ. ಅದರಲ್ಲೂ ಕುರುಬ ಸಮುದಾಯ ಸೇರಿದಂತೆ ಅಹಿಂದ ವರ್ಗದ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿರುವುದು ಸಹಜ ವಾಗಿಯೇ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಗೆ ಲೀಡ್‌ ದೊರೆಯಲಿದೆ ಎಂಬುದು ಉಭಯ ಪಕ್ಷಗಳ ಮುಖಂಡರ ಲೆಕ್ಕಾಚಾರ.

ಮೇಲಾಗಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಒಂದಾಗಿ ಕೆಲಸ ಮಾಡಿರುವುದು ಎಚ್.ಬಿ.ಮಂಜಪ್ಪನವರಿಗೆ ಅನುಕೂಲವಾಗಲಿದೆ. ಅವರಿಗೆ ಅಹಿಂದ ವರ್ಗ ಒಳಗೊಂಡಂತೆ ಮೇಲ್ವರ್ಗದವರ ಮತಗಳು ದೊರೆಯಬಹುದು ಎಂಬ ಅಭಿಪ್ರಾಯವೂ ಇದೆ.

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಶಾಸಕರಾಗಿದ್ದು, ಜತೆಗೆ ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಬಿಜೆಪಿ ತೆಕ್ಕೆಯಲ್ಲಿದೆ. ಹೊನ್ನಾಳಿ ವಿಧಾನ ಸಭಾ ವ್ಯಾಪ್ತಿಯ 6 ಜಿಪಂ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅಲೆಯೂ ಇದೆ. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಚುನಾವಣೆಗೂ ಮೊದಲೇ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿದ್ದಾರೆ. ಜತೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಜಿ.ಎಂ.ಸಿದ್ದೇಶ್ವರ್‌ ಪರ ಹೊನ್ನಾಳಿಯಲ್ಲಿ ಪ್ರಚಾರ ಮಾಡಿರುವುದು ಪ್ಲಸ್‌ ಪಾಯಿಂಟ್ ಆಗಲಿದೆ. ಈ ಚುನಾವಣೆಯಲ್ಲಿ ತಮಗೇ ಲೀಡ್‌ ಸಿಗುತ್ತದೆ ಎಂಬುದು ಬಿಜೆಪಿಯ ಪಾಳೆಯದ ಅಂದಾಜು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್‌ 69,611 ಮತ ಪಡೆದಿದ್ದರೆ, . ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ 62,313 ಮತ ಗಳಿಸಿದ್ದರು. ಇನ್ನು ಜೆಡಿಎಸ್‌ನ ಮಹಿಮಾ ಜೆ. ಪಟೇಲ್ 3,327 ಮತ ತಮ್ಮದಾಗಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಲೀಡ್‌ ಪಡೆಯುವುದು ವಾಡಿಕೆ ಎನ್ನುವಂತಾಗಿದೆ. ಆದರೆ, ಈ ಚುನಾವಣೆಯಲ್ಲಿ ಅದಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಭಾರೀ ಕಸರತ್ತು ನಡೆಸಿದ್ದಾರೆ. ಗೆಲುವಿನ ಬಗ್ಗೆ ಬೆಟ್ಟಿಂಗ್‌ ಜೋರಿಲ್ಲ. ಕ್ಷೇತ್ರದ ಹಳ್ಳಿಗಳಲ್ಲಿ ಯಾರು ಗೆದ್ದರೇನು ನಮಗೆ ರಾಗಿ ಬೀಸುವುದು ತಪ್ಪಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಸಂಸದ ಜಿ.ಎಂ. ಸಿದ್ದೇಶ್ವರ್‌ ಜಿಲ್ಲೆಗೆ ಚಿರಪರಿಚಿತರು. ಈಗಾಗಲೇ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ನಾಲ್ಕನೇ ಬಾರಿಯೂ ಅವರ ಜಯ ಗ್ಯಾರಂಟಿ.
ಡಿ.ಜಿ.ರಾಜಪ್ಪ,
ಬಿಜೆಪಿ ತಾಲೂಕು ಅಧ್ಯಕ್ಷ.

ಎಚ್.ಬಿ. ಮಂಜಪ್ಪ 25ರಿಂದ 50 ಸಾವಿರ ಮತಗಳಿಂದ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮಂಜಪ್ಪ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ‌ುವುದರಿಂದ ಗೆಲುವು ನಮ್ಮದೇ.
•ಸಣ್ಣಕ್ಕಿ ಬಸವನಗೌಡ,
ಹೊನ್ನಾಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ.

ಮೈತ್ರಿ ಅಭ್ಯರ್ಥಿ ಆಗಿರುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪರಿಗೆ ಜೆಡಿಎಸ್‌ ಪಕ್ಷದ ಸಂಪೂರ್ಣ ಸಹಕಾರ ದೊರೆತಿರುವುದರಿಂದ ಅವರು ಗೆಲುವು ಸಾಧಿಸಲಿದ್ದಾರೆ.
•ವೆಂಕಟೇಶ್‌,
ಜೆಡಿಎಸ್‌ ತಾಲೂಕು ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next