ದಾವಣಗೆರೆ: ಸತತ ಐದು ಬಾರಿ ವಿಜಯ ಪತಾಕೆ ಹಾರಿಸುವ ಮೂಲಕ ದಾವಣಗೆರೆ ಲೋಕಸಭಾ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರ ಕೋಟೆ ಎಂಬುದನ್ನು ಮತ್ತೂಮ್ಮೆ ಸಾಬೀತು ಪಡಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.
ಶನಿವಾರ, ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ವಹಿಸಿದ್ದ ಜವಾಬ್ದಾರಿಯನ್ನು ಪೇಜ್ ಪ್ರಮುಖ್‌ನಿಂದ ಹಿಡಿದು ಜಿಲ್ಲಾಧ್ಯಕ್ಷರವರೆಗೆ ಪ್ರತಿಯೊಬ್ಬರೂ ಕುಟುಂಬದ ಸದಸ್ಯರಂತೆ ಪರಿಣಾಮಕಾರಿಯಾಗಿ ಕಳೆದ ಐದು ತಿಂಗಳಿಂದ ಸಂಘಟನಾತ್ಮಕವಾಗಿ ನಿರ್ವಹಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಯೋಜನೆಗಳ ಬಗ್ಗೆ ಮನೆ ಮನೆಗೆ ತಲುಪಿಸಿ, ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ರಾಜ್ಯದಲ್ಲಿ 25 ಹಾಗೂ ದೇಶದಲ್ಲಿ 303 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ನರೇಂದ್ರ ಮೋದಿಯವರ ನವಭಾರತ ನಿರ್ಮಾಣದ ಕನಸು ನನಸಾಗಲು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಹ ಪೂರಕವಾಗಲಿದೆ. ಇದಕ್ಕಾಗಿ ಐದು ತಿಂಗಳಿಂದಲೂ ಹಗಲಿಳು ಶ್ರಮಿಸಿದ ಕ್ಷೇತ್ರ ಭಾರತೀಯ ಜನತಾಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಎಲ್ಲಾ ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಬಿಜೆಪಿ ಬೆಂಬಲಿಸಿದ ಎಲ್ಲಾ ಮತದಾರರಿಗೂ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಾವು ನಮ್ಮ ಗುರಿಯನ್ನು ತಲುಪುವಲ್ಲಿ ಅನೇಕ ಎಡರು ತೊಡರುಗಳನ್ನು ಅನುಭವಿಸಿದ್ದೇವೆ. ಸ್ವಂತ ಹಿತಾಸಕ್ತಿಗೊಸ್ಕರ ಪಕ್ಷದ ಅನೇಕ ಕಾರ್ಯಕರ್ತರ ದಾರಿತಪ್ಪಿಸುವ ಕೆಲಸ ಮಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೂ ನಮ್ಮ ಅಭ್ಯರ್ಥಿ ಕ್ಷೇತ್ರದಲ್ಲಿನ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಜಶೇಖರ್, ಎಚ್.ಎನ್.ಶಿವಕುಮಾರ್, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ್, ರಮೇಶ್ ನಾಯ್ಕ, ರುದ್ರಮುನಿಸ್ವಾಮಿ, ಪ್ರಭುಕಲ್ಬುರ್ಗಿ, ಟಿಂಕರ್ ಮಂಜಣ್ಣ, ಆನಂದರಾವ್ ಸಿಂಧೆ, ಧನುಷ್‌ರೆಡ್ಡಿ ಇದ್ದರು.