Advertisement
2014ರ ಲೋಕಸಭಾ ಚುನಾವಣೆಯಲ್ಲಿ ಶೇ. 74.66ರಷ್ಟು ಮತದಾನ ಆಗಿದ್ದರೆ, ಈ ಬಾರಿ ಶೇ. 73.36 ಮತದಾನ ಆಗಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಜಗಳೂರು ವಿಧಾನ ಸಭಾ ಕ್ಷೇತ್ರದ 1,73,202 ಮತದಾರರ ಪೈಕಿ ಒಟ್ಟು 1,29,325 ಮಂದಿ ಮತದಾನ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 96,143 ಪುರುಷರು, 95,570 ಮಹಿಳೆಯರು ಹಾಗೂ 10 ಮಂದಿ ಇತರರು ಒಳಗೊಂಡಂತೆ 1,89,723 ಮತದಾರರು ಇದ್ದರು. ಕಳೆದ ಚುನಾವಣೆಗಿಂತ ಈ ಬಾರಿ 16,521 ಮತದಾರರು ಹೆಚ್ಚಾಗಿದ್ದಾರೆ.
Related Articles
Advertisement
ಮೋದಿ ಅಲೆ ಪ್ಲಸ್ ಪಾಯಿಂಟ್: ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್, ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅಲೆ ಮತ್ತು ಎಲೆ ಮರೆಯ ಕಾಯಂತೆ ಸಂಘ ಪರಿವಾರದವರ ಕಾರ್ಯತಂತ್ರ ಅವರಿಗೆ ಪ್ಲಸ್ ಪಾಯಿಂಟ್ ಎಂಬ ಮಾತು ಕೇಳಿ ಬರುತ್ತಿದೆ.
ಕಮಲ ಪಡೆ ಬಲಿಷ್ಠ: ಜಗಳೂರು ಪಟ್ಟಣ ಪಂಚಾಯತ್ ಬಿಜೆಪಿ ಹಿಡಿತದಲ್ಲಿದೆ. ಜಿಲ್ಲಾ ಪಂಚಾಯತ್‌ನ ಮೂವರು, ತಾಲೂಕು ಪಂಚಾಯತ್‌ನ 8 ಸದಸ್ಯರು ಇರುವುದರಿಂದ ಕಮಲ ಪಡೆ ಬಲಶಾಲಿಯಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣಲಿದೆ.
ಕಾಂಗ್ರೆಸ್ ಕೈಡಿಯಲಿದೆಯೇ ಅಹಿಂದ?: 2014ರ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಮುನ್ನಡೆ ಸಾಧಿಸಿದ್ದರು. ಹಿಂದುಳಿದ ಪ್ರದೇಶವಾಗಿರುವುದರಿಂದ ಈ ವಿಧಾನ ಸಭಾ ಕ್ಷೇತ್ರದಲ್ಲಿ ಒಂದಿಷ್ಟು ಅಹಿಂದ ವರ್ಗದ ಜನಸಂಖ್ಯೆ ಹೆಚ್ಚಿದೆ. ಎಸ್ಸಿ-ಎಸ್ಟಿ, ಯಾದವ, ಮುಸ್ಲಿಮರು, ರೆಡ್ಡಿ ಸಮುದಾಯ, ಲಿಂಗಾಯತ ಸಮಾಜದವರೂ ಗಣನೀಯ ಪ್ರಮಾಣದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಅಹಿಂದ ಮತದಾರರನ್ನ ಸೆಳೆಯಬಹುದೆಂಬ ಲೆಕ್ಕಾಚಾರ ಕೈ ಪಾಳೆಯದ್ದು. ಜತೆಗೆ ಮಾಜಿ ಶಾಸಕ ಎಚ್.ಪಿ.ರಾಜೇಶ್, ಜೆಡಿಎಸ್ ಮುಖಂಡರು ಸಹ ಕ್ಷೇತ್ರದಲ್ಲಿ ಅಡ್ಡಾಡಿರುವುದು ಮಂಜಪ್ಪಗೆ ಅನುಕೂಲವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ ಎಂಬ ಅಸಮಾಧಾನ ಜೆಡಿಎಸ್ ಪಕ್ಷದಲ್ಲಿದೆ. ಈ ಬೇಸರ ಮೈತ್ರಿ ಅಭ್ಯರ್ಥಿ ಮತ ಗಳಿಕೆಗೆ ಅಡ್ಡಿಯಾಗಲಿದೆ ಎಂಬುದಾಗಿ ನಿಖರವಾಗಿ ಹೇಳಲಾಗದು. 2014ರ ಲೋಕಸಭಾ ಚುನಾವಣೆಯಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ 58,578 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಎಸ್.ಎಸ್. ಮಲ್ಲಿಕಾರ್ಜುನ್ 60,480 ಮತ ಗಳಿಸಿದ್ದರು. ಇನ್ನು ಜೆಡಿಎಸ್‌ನ ಮಹಿಮಾ ಜೆ. ಪಟೇಲ್ 3,790 ಮತ ತಮ್ಮದಾಗಿಸಿಕೊಂಡಿದ್ದರು.
ಎನ್.ಆರ್. ನಟರಾಜ್