ದಾವಣಗೆರೆ: ಬಡತನ ನಿರ್ಮೂಲನೆಗೆ ಅನ್ನ, ಆಶ್ರಯ, ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ ಎಂದು ದಾವಣಗೆರೆ ದಕ್ಷಿಣ
ವಿಧಾನಸಭಾ ಕ್ಷೇತ್ರದ ಶಾಸಕ ಡಾ|ಶಾಮನೂರು ಶಿವಶಂಕರಪ್ಪ ಹೇಳಿದರು.
ಶನಿವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ .ಬಿ.ಮಂಜಪ್ಪನವರ ಪರವಾಗಿ ನಗರದ ವಾರ್ಡ್ 8ರ ರಿಂಗ್ ರಸ್ತೆಯಿಂದ ಚುನಾವಣಾ ಪ್ರಚಾರ ಆರಂಭಿಸಿದ ಎಸ್ಸೆಸ್ಸೆ, ಎಸ್.ಎಂ.ಕೃಷ್ಣ ನಗರ, ರಾಜೀವ್ ಗಾಂಧಿ ಬಡಾವಣೆ, ವಿಜಯನಗರ
ಬಡಾವಣೆ, ಎಸ್‌ಪಿಎಸ್ ನಗರ, ವಾರ್ಡ್ 13ರ ಜ್ಯುಬಿಲಿ ಬಾವಿ ರಸ್ತೆ, ಹೊಸ ಮಸೀದಿ, ಹಾಸಬಾವಿ ಸರ್ಕಲ್, ಎನ್. ಆರ್.ಪೇಟೆ, ಜಗಳೂರು ಬಸ್ ನಿಲ್ದಾಣ, ಬಂಬೂಬಜಾರ್ ಮುಖಾಂತರ, ಅಮರಪ್ಪನ ತೋಟ, ವಾರ್ಡ್ 12ರ ಬಸವರಾಜಪೇಟೆ, ಚಾಮರಾಜಪೇಟೆ ಸೇರಿದಂತೆ ಇಮಾಂ ನಗರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಅಧಿಕಾರ ಹಿಡಿದಾಗ ಸಾಕಷ್ಟು ಸಂಖ್ಯೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ಆಗ ಆಹಾರ ಕ್ರಾಂತಿ ಮಾಡುವುದರ ಜೊತೆಗೆ ಸೂರು ಇಲ್ಲದವರಿಗೆ ಸೂರು ಕಲ್ಪಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಇದೀಗ ದೇಶ ಸುಭೀಕ್ಷೆಯಿಂದ ಕೂಡಿದೆ. ಒಂದು ಮನೆಯನ್ನು ತಂದೆ ಜವಾಬ್ದಾರಿಯುತವಾಗಿ ಕಟ್ಟಿದ ನಂತರ ಮಗ ದುಡಿಮೆ ಮಾಡುವಾಗ ನನ್ನಿಂದಲೇ ಮನೆ ನಡೆಯುತ್ತಿದೆ ಎನ್ನುವಂತೆ ಇಂದು ಮೋದಿ ಕೇವಲ ಅಧಿಕಾರ ಅನುಭವಿಸುತ್ತಾ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ ಹೊರತು
ತಾವು ಏನು ಮಾಡಿದ್ದೇವೆ ಎಂಬುದನ್ನು ಹೇಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ರೋಡ್ ಶೋನಲ್ಲಿ ಭಾಗವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಚಮನ್ ಸಾಬ್, ಅಲ್ತಾಫ್, ರಹೀಂಸಾಬ್, ಸೀಮೆಎಣ್ಣೆ ಮಲ್ಲೇಶ್, ಇಟ್ಟಿಗುಡಿ ಮಂಜುನಾಥ್ ಇತರರು ಮಾತನಾಡಿದರು.