Advertisement

ದೇಶದಲ್ಲಿ ಮೋದಿ ಪರ ಅಲೆ ಇದೆ ಎನ್ನುವುದು ಭ್ರಮೆ

11:25 AM Apr 22, 2019 | Naveen |

ಹರಿಹರ: ನಗರದಲ್ಲಿ ಭಾನುವಾರ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಪರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಬೃಹತ್‌ ರೋಡ್‌ ಶೋ ನಡೆಸಿದರು.

Advertisement

ನಂತರ ನಡೆದ ಸಭೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ದೇಶದಲ್ಲಿ ಮೋದಿ ಪರ ಅಲೆ ಇದೆ ಎನ್ನುವುದು ಭ್ರಮೆ. 60 ವರ್ಷ ಸುಭದ್ರ ಸರಕಾರ ನೀಡಿದ ಕಾಂಗ್ರೆಸ್‌ನಿಂದಾಗಿ ಬಡತನ ನಿರ್ಮೂಲನೆ, ಆಣೆಕಟ್ಟು ನಿರ್ಮಾಣ, ತಂತ್ರಜ್ಞಾನ, ವಿಜ್ಞಾನ, ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳ ಪ್ರಗತಿಯಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವುದು ಕಾಂಗ್ರೆಸ್ಸಿಗರೇ ಹೊರತು ಕೋಮುವಾದಿ ಬಿಜೆಪಿಯವರಲ್ಲ ಎಂದು ಟೀಕಿಸಿದರು.

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅನೇಕ ಸರ್ಜಿಕಲ್ ದಾಳಿ ನಡೆದಿವೆ. ವಾಜಪೇಯಿಯವರು ಇಂದಿರಾ ಧೈರ್ಯವನ್ನು ದುರ್ಗಿ ಎಂದು ಶ್ಲಾಘಿಸಿದ್ದರು. ಆದರೆ ಒಂದೆರಡು ಸರ್ಜಿಕಲ್ ದಾಳಿ ಮಾಡಿ ಅದನ್ನೇ ದೊಡ್ಡ ಸಾಧನೆ ಎಂದು ಮೋದಿ, ಬಿಜೆಪಿಯವರು ಬಿಂಬಿಸಿ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಎಚ್.ಎಸ್‌. ಶಿವಶಂಕರ್‌ ಮಾತನಾಡಿ, ಜನರು ಈಗ ಜಾಗೃತರಾಗಿದ್ದಾರೆ. ಬಿಜೆಪಿಗರ ಮಾತಿನ ಸೆಳೆತಕ್ಕೆ ಒಳಗಾಗದೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಶಾಸಕ ಎಸ್‌.ರಾಮಪ್ಪ ಮಾತನಾಡಿ, ಸರಳತೆ ಹಾಗೂ ಬಡತನದ ಅರಿವು ಇರುವ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ತಳಮಟ್ಟದಿಂದ ಬೆಳೆದು ಬಂದವರು.ಇವರನ್ನು ಸಂಸತ್‌ಗೆ ಕಳಿಸಿದರೆ ಜನಸಾಮಾನ್ಯರ ಧ್ವನಿ ದೆಹಲಿಗೆ ತಲುಪುತ್ತದೆ ಎಂದರು. ಅಭ್ಯರ್ಥಿ ಎಚ್.ಬಿ. ಮಂಜಪ್ಪ ಮಾತನಾಡಿದರು.

Advertisement

ಪಕ್ಕೀರಸ್ವಾಮಿ ಮಠದಿಂದ ಶಿವಮೊಗ್ಗ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ದೇವಸ್ಥಾನ ರಸ್ತೆ, ದೊಡ್ಡಿ ಬೀದಿ, ಮಧ್ಯಮ ಗುಡಿ ರಸ್ತೆ, ಹಳೆ ಪಿ.ಬಿ.ರಸ್ತೆ, ಗಾಂದಿ ವೃತ್ತ, ಶೋಭಾ ಟಾಕೀಸ್‌ ರಸ್ತೆ, ಜೆ.ಸಿ.ಬಡಾವಣೆ, ಮೂಲಕ ರೋಡ್‌ ಶೋ ಸಾಗಿತು.

ಮುಖಂಡರಾದ ಜಲಜಾ ನಾಯಕ್‌, ಬಿ. ರೇವಣಸಿದ್ದಪ್ಪ, ಶಂಕರ್‌ ಖಟಾವ್‌ಕರ್‌, ಕೆ. ಮರಿದೇವ, ಮಾಜಿ ಉಪಕುಲಪತಿ ಡಾ| ಎಚ್.ಮಹೇಶ್ವರಪ್ಪ, ಎಸ್‌.ಎಂ. ವಸಂತ್‌, ರಮೇಶ್‌ ಬಿ.ಎನ್‌., ಸಿ.ಎನ್‌. ಹುಲಿಗೇಶ್‌, ರಾಜಕುಮಾರ್‌, ರಹಮತ್‌ ಉರ್‌ ರಹಮಾನ್‌, ಬಿ. ಚಿದಾನಂದಪ್ಪ, ಎಲ್.ಬಿ. ಹನುಮಂತಪ್ಪ, ಎಂ.ಬಿ.ಆಬಿದ್‌ ಅಲಿ, ಸೈಯದ್‌ ನಜೀರ್‌ ಅಹ್ಮದ್‌, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next