ದಾವಣಗೆರೆ: ಅಹಿಂದ ಚಾಂಪಿಯನ್, ತಾನು ಕುರುಬರ ನಾಯಕ ಎಂಬುದಾಗಿ ಬಿಂಬಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಮಂದಿ ಕುರುಬ ಸಮಾಜದವರನ್ನು ಉದ್ಧಾರ ಮಾಡಿದ್ದಾರೆ ಹೇಳಲಿ ನೋಡೋಣ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಭಾನುವಾರ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈಶ್ವರಪ್ಪ ಈ ಬಾರಿ ಚುನಾವಣೆಯಲ್ಲಿ ಕುರುಬ ಸಮುದಾಯದ ಒಬ್ಬರಿಗೂ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ, ಅವನೆಂತಹ ದೊಡ್ಡ ಲೀಡರ್ ಎಂಬುದಾಗಿ ಸಿದ್ದರಾಮಯ್ಯ ನನ್ನನ್ನು ನಿಂದಿಸಿದ್ದಾರೆ. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮಾಜದ ಮೂವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು ಸೋಲುವಂತಹ ಕ್ಷೇತ್ರಗಳಲ್ಲಿ ಎಂದು ಟಾಂಗ್ ನೀಡಿದರು.
ಶಾಮನೂರು ಶಿವಶಂಕರಪ್ಪ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಸಂಸದ, ವಿಧಾನ ಪರಿಷತ್ ಸದಸ್ಯರಾಗಿದ್ದ ವಿಜಯಶಂಕರ್‌ರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಅವರನ್ನು ದೇವೇಗೌಡ, ಕುಮಾರಸ್ವಾಮಿಯೇ ಸೋಲಿಸಲಿದ್ದಾರೆ. ಇನ್ನು ಕೊಪ್ಪಳದಲ್ಲೂ ಸಹ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಹಾಗಾಗಿ ಮೂರು ಕ್ಷೇತ್ರಗಳಲ್ಲಿ ಕುರುಬ ಅಭ್ಯರ್ಥಿಗಳ ಕಣಕ್ಕಿಳಿಸಿ ಆಗುವುದೇನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ಗೆ ಕರೆದುಕೊಂಡು ಬಂದ ಎಚ್.ವಿಶ್ವನಾಥರನ್ನೇ ಆ ಪಕ್ಷದಿಂದಲೇ ಹೊರ ಹೋಗುವಂತೆ ಮಾಡಿದ್ದು ಇದೇ ಸಿದ್ದರಾಮಯ್ಯ ತಾನೇ?. ಸಿದ್ದರಾಮಯ್ಯ ಕುರುಬರ ನಾಯಕರಾಗಿದ್ದಲ್ಲಿ ಆ ಸಮುದಾಯವೇ ಅಧಿಕವಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 37 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದೇಕೆ? ಎಂದು ಪ್ರಶ್ನಿಸಿದ ಅವರು, ಬಾದಾಮಿಯಲ್ಲಿ ನಿಂತು ಸಿದ್ದರಾಮಯ್ಯ ಗೆದ್ದದ್ದು ಕೆಲವೇ ಮತಗಳ ಅಂತರದಿಂದ. ಮಂತ್ರಿಯಾಗಿದ್ದ ಚಿಮ್ಮನಕಟ್ಟಿಯನ್ನು ಈಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮಾಡಲಾಗಿದೆಯಲ್ಲ, ಇದಕ್ಕಿಂತ ನಾಚಿಕೆಗೇಡು ಇನ್ನೇನು ಬೇಕು ಎಂದು ಅವರು ಮೂದಲಿಸಿದರು.
ನಾನು ಜಾತಿವಾದಿ ಅಲ್ಲ, ಹಿಂದುತ್ವ, ರಾಷ್ಟ್ರೀಯವಾದಿ. ಶಿವಮೊಗ್ಗ ಕ್ಷೇತ್ರದಲ್ಲಿ 8-9 ಸಾವಿರ ಕುರುಬ ಮತದಾರರಿದ್ದರೂ ನಾನೇಕೆ 41 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದೆ. ಸಿದ್ದರಾಮಯ್ಯ ಸರ್ವಾಧಿಕಾರಿ, ಆತನ ಮಾತನ್ನು ಯಾರೂ ನಂಬಲ್ಲ. ಮುಖ್ಯಮಂತ್ರಿಯಾಗಿದ್ದರೂ ಸೋಲಲು ಕಾರಣ ಆತನ ಸೊಕ್ಕು. ಸಿದ್ದರಾಮಯ್ಯನ ಮಾತಿಗೆ ಕುರುಬರೇ ಸೊಪ್ಪು ಹಾಕಲ್ಲ ಅಂದಮೇಲೆ ಬೇರೆಯವರು ಕೇಳುತ್ತಾರಾ?. ಮುಂದಿನ ಬಾರಿ ಬಾದಾಮಿಯಲ್ಲೂ ಸೋಲುವುದರಿಂದ ಬೇರೆ ಕ್ಷೇತ್ರ ಹುಡಕಬೇಕಿದೆ. ಹೀಗೆ ರಾಜ್ಯದ 224 ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ ಸುತ್ತಾಡಲಿದ್ದಾರೆ ಎಂದು ಲೇವಡಿ ಮಾಡಿದರು.
ಸರ್ಕಾರದ ಕೆಲಸವನ್ನು ಮಠಗಳು ಮಾಡುತ್ತಿವೆ ಎಂಬ ಕಾರಣದಿಂದ ಎಲ್ಲಾ ಹಿಂದುಳಿದ ಮಠಗಳಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿದೆ. ಬಿಜೆಪಿ ದಲಿತರು- ಕುರುಬರ ಹೇಸರೇಳಿಕೊಂಡು ರಾಜಕೀಯ ಮಾಡಲ್ಲ. ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣುತ್ತದೆ. ಹಜ್ ಯಾತ್ರೆ, ಹಜ್ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಅವರಂತೆ ಕೊಟ್ಟಿದ್ದನ್ನೆಲ್ಲಾ ಪ್ರಚಾರ ಮಾಡುವುದಿಲ್ಲ. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಹಣ ನೀಡುವುದು ಸಹಾಯವಲ್ಲ, ಅದು ಸರ್ಕಾರದ ಕರ್ತವ್ಯ. ಆದರೆ, ಸಿದ್ದರಾಮಯ್ಯ ಸ್ವಾರ್ಥಕ್ಕೆ ಜಾತಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಟ್ಟರ್ ಜಾತಿವಾದಿಗಳು ಎಂದು ಈಶ್ವರಪ್ಪ ದೂರಿದರು.
ಆತ, ಡಿ.ಕೆ.ಶಿವಕುಮಾರ ಅಲ್ಲ, ಕೆ.ಡಿ.ಶಿವಮಾರ್. 235 ಕೋಟಿ ಬೇನಾಮಿ ಆಸ್ತಿ, ಕಪ್ಪುಹಣ ಹೊಂದಿರುವ ಕಳ್ಳ ಶಿವಕುಮಾರ್ ಎಂದು ಕರೆಯುವೆ ಎಂಬದಾಗಿ ಸಚಿವ ಶಿವಕುಮಾರ್ ವಿರುದ್ಧ ಹರಿಹಾಯ್ದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ|ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರಾದ ಎಚ್.ಎಸ್.ಲಿಂಗರಾಜ್, ಬಿ.ಎಂ.ಸತೀಶ್, ಎನ್.ರಾಜಶೇಖರ್, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.