Advertisement

ಈ ಬಾರಿ ಬೌಂಡರಿ ಬಾರಿಸಲಿದ್ದಾರೆ ಸಿದ್ದೇಶ್ವರ್‌

10:30 AM Apr 12, 2019 | |

ದಾವಣಗೆರೆ: ಈಗಾಗಲೇ ಹ್ಯಾಟ್ರಿಕ್‌ ಜಯ ಸಾಧಿಸಿರುವ ಜಿ.ಎಂ. ಸಿದ್ದೇಶ್ವರ್‌ 4ನೇ ಬಾರಿ ಆಯ್ಕೆಯಾಗುವ ಮೂಲಕ ಬೌಂಡರಿ ಬಾರಿಸಲಿದ್ದಾರೆ ಎಂದು ಮಾಜಿ ಸಚಿವ, ಬೀಳಗಿ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಭವಿಷ್ಯ ನುಡಿದಿದ್ದಾರೆ.

Advertisement

ಕ್ಷೇತ್ರದಲ್ಲಿ ಜಾತ್ಯತೀತ ನಾಯಕರಾಗಿ ಜನಪ್ರಿಯರಾಗಿರುವ ಜಿ.ಎಂ.ಸಿದ್ದೇಶ್ವರ್‌ ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಲಿದ್ದು, ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಿಸಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದು ಗುರುವಾರ
ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಮಲ್ಲಿಕಾರ್ಜುನಪ್ಪ 2 ಬಾರಿ ಹಾಗೂ ಅವರ ಪುತ್ರ ಜಿ.ಎಂ. ಸಿದ್ದೇಶ್ವರ್‌ ಮೂರು ಬಾರಿ ನಿರಂತರವಾಗಿ ಆಯ್ಕೆಯಾಗಿರುವುದು ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದಾಗಿ. ದಿನೇಶ್‌ ಗುಂಡೂರಾವ್‌ ಹೇಳಿದಂತೆ ಈ ಹಿಂದೆ ಸಿದ್ದೇಶ್ವರರನ್ನು ಅಸಮರ್ಥರೆಂದು ಸಚಿವ ಸಂಪುಟದಿಂದ ಕೈ ಬಿಡಲಿಲ್ಲ. ಬೇರೆ ಸಮುದಾಯದವರಿಗೆ ಅವಕಾಶ ಮಾಡಿಕೊಡಲು ತಾವಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸಂದರ್ಭದಲ್ಲಿ ನಾನೂ ಸಹ ಅವರ ಜತೆಗಿದ್ದೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಸಿದ್ದೇಶ್ವರ್‌ ಅವಿರತವಾಗಿ ಶ್ರಮಿಸಿದ್ದಾರೆ. ಸ್ಮಾರ್ಟ್‌ ಸಿಟಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈಲ್ವೆ ಜೋಡಿ ಮಾರ್ಗ, ದಾವಣಗೆರೆಯಲ್ಲಿ ಪಾಸ್‌ಪೋರ್ಟ್‌ ಕಚೇರಿ ಸ್ಥಾಪನೆ, ಕೇಂದ್ರೀಯ ವಿದ್ಯಾಲಯ ಆರಂಭ, ಗುಡಿ ಕೈಗಾರಿಕೆಗೆ ನೆರವು ಹೀಗೆ ಹಲವಾರು ಜನಪರ ಯೋಜನೆ ಅನುಷ್ಠಾನಗೊಳಿಸಲು ಕಾರಣರಾಗಿದ್ದಾರೆ. ಅವರ ಪರಿಶ್ರಮದಿಂದಲೇ ಹರಿಹರ ಬಳಿ 966 ಕೋಟಿ ಬಂಡವಾಳ ಹೂಡಿಕೆಯ 2ಜಿ ಎಥೆನಾಲ್‌ ಕಾರ್ಖಾನೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ನಿರಾಣಿ ಹೇಳಿದರು.

ಪೈಪ್‌ಲೈನ್‌ ಮೂಲಕ ಗ್ಯಾಸ್‌ ಪೂರೈಕೆ ವ್ಯವಸ್ಥೆ ದೇಶದ 159 ಜಿಲ್ಲೆಗಳಲ್ಲಿ ಆರಂಭವಾಗಲಿದ್ದು, ಆ ವ್ಯವಸ್ಥೆ ದಾವಣಗೆರೆ ಜಿಲ್ಲೆಯಲ್ಲೂ ಕಾರ್ಯಗತವಾಗಲಿದೆ. ಇದರ ಹಿಂದೆ ಸಿದ್ದೇಶ್ವರ್‌ ಶ್ರಮವಿದೆ ಎಂದು ಅವರು ಹೇಳಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ್‌ ಲಿಂಬೇಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ್‌ ಜಾಧವ್‌, ಜಯಪ್ರಕಾಶ್‌ ಕೊಂಡಜ್ಜಿ, ಎನ್‌.ರಾಜಶೇಖರ್‌ ಹಾಗೂ ಜಗದೀಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

9 ತಿಂಗಳಲ್ಲಿ ಬಿಡುಗಡೆಯಾಗದಷ್ಟು ಮೊತ್ತವನ್ನ ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 3 ತಿಂಗಳಲ್ಲಿ ಒಟ್ಟು 12,000 ಕೋಟಿ ಹಣ ಬಿಡುಗಡೆ ಆಗಿದೆ. ಬ್ಯಾಂಕ್‌ನಲ್ಲಿ ಹೆಚ್ಚು ಹಣ ಡ್ರಾ ಮಾಡಿಕೊಂಡವರ ಮೇಲೆ ದಾಳಿ ನಡೆದಿದೆ. ಮೇಲಾಗಿ ಎಲ್ಲಾ ಪಕ್ಷದ ಮುಖಂಡರ ಮನೆ ಮೇಲೂ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯವರು
ಬಿಜೆಪಿ ಮುಖಂಡರ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.
.ಮೋಹನ್‌ ಲಿಂಬೇಕಾಯಿ,
ವಿಧಾನ ಪರಿಷತ್‌ ಮಾಜಿ ಸದಸ್ಯ.

ಈ ಚುನಾವಣೆಯಲ್ಲಿ ಹಿಂದುಳಿದ ವರ್ಗದ 7 ಮಂದಿಗೆ ಟಿಕೆಟ್‌ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದಲ್ಲಿ ಪ್ರಭಾವಿ ನಾಯಕ, ಮಾಜಿ ಸಚಿವ ಎಚ್‌.ಎಂ.ರೇವಣ್ಣ ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ಕೇಳಿದಾಗ ಹೈಕಮಾಂಡ್‌ ಏಕೆ ಕೊಡಲಿಲ್ಲ. ತಾವು ಹೇಳಿದಂತೆ ಕೇಳುವ ವ್ಯಕ್ತಿ ಇರಲಿ ಎಂಬ ಕಾರಣದಿಂದ ಇಲ್ಲಿನ ಮುಖಂಡರು ಎಚ್‌.ಬಿ.ಮಂಜಪ್ಪಗೆ ಟಿಕೆಟ್‌ ಕೊಡಿಸಿದ್ದಾರೆಯೇ ಹೊರತು ಅವರ ಮೇಲಿನ ಅಭಿಮಾನದಿಂದಲ್ಲ. ಟಿಕೆಟ್‌ ಕೊಡಿಸಿ ಮಂಜಪ್ಪರನ್ನು ಬಲಿ ಕುರಿಯನ್ನಾಗಿ ಮಾಡಲಾಗಿದೆ. ಆದರೆ, ನಾವು ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಈ ಹಿಂದಿನ ಚುನಾವಣೆಗಳಂತೆ
ಕೆಲಸ ಮಾಡಲಿದ್ದೇವೆ.
.ಯಶವಂತರಾವ್‌ ಜಾಧವ್‌,
ಬಿಜೆಪಿ ಜಿಲ್ಲಾಧ್ಯಕ್ಷ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬರೀ ಕಾಂಗ್ರೆಸ್‌ ಮುಖಂಡರು, ಅವರ ಆಪ್ತರ ಮನೆಯ ಮೇಲೆಯೇ ದಾಳಿ ನಡೆಸುತ್ತಿಲ್ಲ. ಬಿಜೆಪಿ ಮುಖಂಡರ
ಮನೆಯ ಮೇಲೂ ದಾಳಿ ಮಾಡಿ, ಪರಿಶೀಲಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಸಂಸದ ಜಿ.ಎಂ.ಸಿದ್ದೇಶ್ವರ್‌ ಹಾಗೂ ನನ್ನ ಮನೆಯ ಮೇಲೂ ದಾಳಿ ನಡೆದಿದೆ.
.ಮುರುಗೇಶ್‌ ನಿರಾಣಿ,
ಶಾಸಕರು, ಬೀಳಗಿ ಕ್ಷೇತ್ರ.

Advertisement

Udayavani is now on Telegram. Click here to join our channel and stay updated with the latest news.

Next